ಬೆಂಗಳೂರಿನ ರಿಂಗ್ ರಸ್ತೆಯಲ್ಲಿ ಯುನಿಸೈಕಲ್ ಸವಾರಿ; ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಪಡೆದ ಟೆಕ್ಕಿ!
ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರು ಯುನಿಸೈಕಲ್‌ನಲ್ಲಿ ಆಫೀಸಿಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಟ್ರಾಫಿಕ್ ಸಮಸ್ಯೆಗೆ ಇದು ಪರಿಹಾರವಾಗಬಹುದೇ ಎಂಬ ಚರ್ಚೆ ಶುರುವಾಗಿದೆ.

ಬೆಂಗಳೂರು (ಫೆ.28): ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವೇ ಕೆಲವು ಶ್ರೀಮಂತ ದೇಶಗಳ ನಗರಗಳಲ್ಲಿ ಬಳಕೆ ಮಾಡಲಾಗುವ ಮತ್ತು ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಉಪಯೋಗಿಸಲ್ಪಡುತ್ತಿದ್ದ ಯುನಿಸೈಕಲ್ ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗೂ ಬಂದಿದೆ. ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಟೆಕ್ಕಿಯೊಬ್ಬರು ಯುನಿಸೈಕಲ್ ಬಳಸಿ ಆಫೀಸಿಗೆ ಹೋಗಿರುವುದು ಕಂಡುಬಂದಿದೆ.
ಯುನಿಸೈಕಲ್ ಅನ್ನು ನಾವು ಕೇವಲ ಸಿನಿಮಾಗಳಲ್ಲಿ ಮಾತ್ರ ನೋಡಿರುತ್ತೇವೆ. ಇಂಗ್ಲೆಂಡ್, ಅಮೇರಿಕಾ, ಜರ್ಮಿನಿ, ಜಪಾನ್, ಚೀನಾ, ಇಟಲಿ ಸೇರಿದಂತೆ ವಿವಿಧ ಮುಂದುವರೆದ ದೇಶಗಳ ನಗರಗಳಲ್ಲಿ ಈ ಯುನಿಸೈಕಲ್‌ಗಳನ್ನು ಬಳಕೆ ಮಾಡಲಾಗುತ್ತದೆ. ಅತ್ಯಂತ ಇವು ಶ್ರೀಮಂತರಿಗೆ ಮಾತ್ರ ಎಂದುಕೊಂಡಿದ್ದ ಕಾಲ ಇದೀಗ ದೂರವಾಗಿದೆ. ಈಗಾಗಲೇ ಬೆಂಗಳೂರಿನ ಕೆಲವು ಪ್ರತಿಷ್ಠಿತ ಕ್ಲಬ್ ಮತ್ತು ಹೋಟೆಲ್‌ಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿದ್ದ ಯುನಿಸೈಕಲ್ ಇದೀಗ ಬೆಂಗಳೂರಿನ ರಸ್ತೆಗೂ ಬಂದಿದೆ. ಇಲ್ಲೊಬ್ಬ ಟೆಕ್ಕಿ ಯುನಿಸೈಕಲ್‌ನಲ್ಲಿಯೇ ಆಫೀಸಿಗೆ ಹೋಗಿದ್ದಾನೆ. ಈತ ಕಚೇರಿಗೆ ಯುನಿಸೈಕಲ್ ತೆಗೆದುಕೊಂಡು ರಸ್ತೆಯಲ್ಲಿ ಹೋಗುವುದನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯುನಿಸೈಕಲ್‌ನಲ್ಲಿ ಹೋಗುವ ವ್ಯಕ್ತಿಯ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಯಾವಾಗಲೂ ಟ್ರಾಫಿಕ್‌ನಿಂದ ಪರಿತಪಿಸುವ ಜನರಿಗೆ ಈ ಯುನಿಸೈಕಲ್ ಭಾರೀ ಸಹಾಯಕವಾಗಲಿದೆ. ಎಲ್ಲಿಯಾದರೂ ತುಂಬಾ ಟ್ರಾಫಿಕ್ ಜಾಮ್ ಆಗಿದ್ದರೆ, ಯುನಿಸೈಕಲ್ ಅನ್ನು ಎತ್ತಿಕೊಂಡು ಸುಲಭವಾಗಿ ಟ್ರಾಫಿಕ್‌ನಿಂದ ದಾಟಬಹುದು. ನಂತರ, ಈ ಯುನಿಸೈಕಲ್ ಬಳಸಿ ರಸ್ತೆಯಲ್ಲಿ ಸಾಮಾನ್ಯ ವೇಗದಲ್ಲಿ ಹೋಗಬಹುದು. ಇದು ಬೆಂಗಳೂರಿನಂತಹ ಸಿಟಿಗೆ ಭಾರೀ ಅನುಕೂಲ ಆಗಲಿದೆ. ಈ ಯುನಿಸೈಕಲ್ ಬಳಕೆ ಹೆಚ್ಚಾದಲ್ಲಿ ಟ್ರಾಫಿಕ್ ನಿಯಂತ್ರಣದ ಜೊತೆಗೆ ಮಾಲಿನ್ಯವನ್ನೂ ಕೂಡ ತಡೆಗಟ್ಟಬಹುದು.
ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯ: ಐವತ್ತು ವರ್ಷ ಪೂರೈಸಿದ ಮನೋವಿಜ್ಞಾನ ವಿಭಾಗ
ಇದೀಗ ಬೆಂಗಳೂರಿಗೆ ಯುನಿಸೈಕಲ್ ಕಾಲಿಟ್ಟಿದ್ದು, ಇದರ ಬಳಕೆ ಪ್ರಮಾಣ ಹೆಚ್ಚಾಗಲಿ ಎಂದು ಕೆಲವರು ಹಾರೈಸಿದ್ದಾರೆ. ಇನ್ನು ಕೆಲವರು ಗುಂಡಿಮಯ ರಸ್ತೆಗಳಲ್ಲಿ ಈ ಸೈಕಲ್ ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಹೌದು, ಕಳೆದೊಂದು ವಾರದಿಂದ ಈ ವ್ಯಕ್ತಿಯನ್ನು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ಯುನಿಸೈಕಲ್ ತುಂಬಾ ಅಪಾಯಕಾರಿ, ಈ ವ್ಯಕ್ತಿ ಹೇಗೆ ಇಷ್ಟೊಂದು ಸುಲಭವಾಗಿ ರಸ್ತೆಯಲ್ಲಿ ಹೋಗುತ್ತಿದ್ದಾನೆ? ನೋಡಲು ಆಶ್ಚರ್ಯವಾಗುತ್ತಿದೆ ಎಂದಿದ್ದಾನೆ. ಮತ್ತೊಬ್ಬರು ನಮ್ಮ ಭಾರತದ ರಸ್ತೆಗಳಿಗೆ ಇದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಯುನಿಸೈಕಲ್ ಎಂದರೇನು?
ಯುನಿಸೈಕಲ್ ಎಂದರೆ ಒಂದೇ ಚಕ್ರದಿಂದ ಸವಾರಿ ಮಾಡಬಹುದಾದ ವಾಹನ. ಇದು ನೆಲದಲ್ಲಿ ಚಲಿಸುವ ವಾಗನವಾಗಿದ್ದು, ಒಬ್ಬ ವ್ಯಕ್ತಿ ಸೈಕಲ್‌ನಂತೆ ಪೆಡಲ್‌ಗಳನ್ನು ತುಳಿಯುತ್ತಾ ಹೋಗುವ ವಾಹನವಾಗಿದೆ. ಇತ್ತೀಚಿನ ದಿನಗಳಲ್ಲಿ ಪೆಡಲ್ ಹಾಗೂ ಬ್ಯಾಟರಿ ಚಾಲಿತ ಕೂಡ ಬಂದಿವೆ. ಈ ಹಿಂದೆ ಯುನಿಸೈಕಲ್ ಅನ್ನು ಸರ್ಕಸ್‌ಗಳಲ್ಲಿ, ಬೀದಿ ಪ್ರದರ್ಶಕರಿಂದ, ಉತ್ಸವಗಳಲ್ಲಿ ಮತ್ತು ಹವ್ಯಾಸವಾಗಿ ವೃತ್ತಿಪರರು ಮಾತ್ರ ಬಳಕೆ ಮಾಡುತ್ತಿದ್ದರು. ಇದಾದ ನಂತರ ಯುನಿಸೈಕಲ್ ಅನ್ನು ಹಾಕಿ ಕ್ರೀಡೆಗಳಲ್ಲಿಯೂ ಬಳಕೆ ಮಾಡುತ್ತಾರೆ. ಆದರೆ, ಇದೀಗ ಅದನ್ನು ಕೆಲವರು ಸಂಚಾರಕ್ಕೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Bengaluru: 'ಏ ಗಂಗೂ ಬೈಕು ಕಲಿಸಿಕೊಡೋ ನಂಗು..' ಎಂದು Fuel Tank ಮೇಲೆ ಕುಂತ ಹುಡುಗಿ, ಪೊಲೀಸರಿಗೆ ಇನ್ನೂ ಸಿಗದ ಲವರ್ಸ್!
ಜನರು ಸಂಚಾರಕ್ಕೆ ಬಳಕೆ ಮಾಡುವ ಬಹುತೇಕ ಯುನಿಸೈಕಲ್‌ಗಳು ಬ್ಯಾಟರಿ ಚಾಲಿತ ವ್ಯವಸ್ಥೆಯನ್ನು ಹೊಂದಿವೆ. ಆದರೆ, ಈ ಬ್ಯಾಟರಿ ಚಾಲಿತ ಯುನಿಸೈಕಲ್‌ಗಳು ದುಬಾರಿ ಬೆಲೆಯನ್ನು ಹೊಂದಿವೆ ಎಂದು ಖರೀದಿ ಮಾಡುವವರ ಸಂಖ್ಯೆಯೂ ಕಡಿಮೆ ಆಗಿದೆ. ಇನ್ನು ಯುನಿಸೈಕಲ್‌ಗಳು ಒಬ್ಬ ವ್ಯಕ್ತಿ ಸಂಚಾರ ಬಿಟ್ಟರೆ ಬೇರೆ ಯಾವ ಉದ್ದೇಶಕ್ಕೂ ಬಳಕೆ ಆಗುವುದಿಲ್ಲ. ಇನ್ನು ಈ ಯುನಿಸೈಕಲ್‌ಗಳು ನೇರವಾಗಿ ಚಲಿಸಲು ಮಾತ್ರ ಸೂಕ್ತವಾಗಿದ್ದು, ತಿರುವುಗಳಲ್ಲಿ ಚಲಿಸುವುದು ಕಷ್ಟವಾಗಲಿದೆ. ಇದರಲ್ಲಿ ಹೋಗುವುದಕ್ಕೆ ತುಂಬಾ ಅನುಭವ ಇರಬೇಕು. ಇಲ್ಲದಿದ್ದರೆ ನಿಯಂತ್ರಣ ತಪ್ಪಿ ಬೀಳುತ್ತಾರೆ.