ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು, ಬೆಂಗಳೂರಿನ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಬಳಸಿ ಬಾಹ್ಯಾಕಾಶ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳನ್ನು ತಯಾರಿಸಬಹುದೆಂದು ಕಂಡುಹಿಡಿದಿದ್ದಾರೆ. 

ನವದೆಹಲಿ: ಬೆಂಗಳೂರಿನ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಬಳಸಿ ಬಾಹ್ಯಾಕಾಶದಲ್ಲಿನ ನಿರ್ಮಾಣ ಕಾರ್ಯಕ್ಕೆ ಬಳಸಲಾಗುವ ಇಟ್ಟಿಗೆಗಳನ್ನು (ಸ್ಪೇಸ್‌ ಬ್ರಿಕ್ಸ್‌) ತಯಾರಿಸಬಹುದು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಪಿಎಲ್‌ಒಎಸ್‌ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿರುವ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ವಿಜ್ಞಾನಿಗಳ ಸಂಶೋಧನಾ ಬರಹದಲ್ಲಿ ಇದು ಬಹಿರಂಗವಾಗಿದೆ. ಐಎಸ್‌ಎಸ್‌ಗೆ ಹೋಗಿ ಬಂದಿರುವ ಮೊದಲ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಕೂಡ ಲೇಖನದ ಸಹ-ಲೇಖಕರಾಗಿದ್ದಾರೆ.

ಲೇಖನದಲ್ಲಿ, ಬ್ಯಾಕ್ಟೀರಿಯಾಗಳು ಮಂಗಳನ ಮಣ್ಣಿನೊಂದಿಗೆ ಹೇಗೆ ಪ್ರತಿಕ್ರಿಯಿಸುತ್ತವೆ, ಅದನ್ನು ಗಟ್ಟಿಯಾದ ಆಕೃತಿಗಳ ನಿರ್ಮಾಣಕ್ಕೆ ಹೇಗೆ ಬಳಸಬಹುದು ಎಂಬ ಬಗ್ಗೆ ಉಲ್ಲೇಖಿಸಲಾಗಿದೆ. ‘ಬಾಹ್ಯಾಕಾಶದಲ್ಲೇ ಲಭ್ಯವಿರುವ ವಸ್ತುಗಳನ್ನು ಬಳಸಿ ರಸ್ತೆ, ಲ್ಯಾಂಡಿಂಗ್‌ ಪ್ಯಾಡ್‌ಗಳನ್ನು ನಿರ್ಮಿಸಿದರೆ ಖರ್ಚು ತಗ್ಗುವುದರ ಜತೆಗೆ ಸುರಕ್ಷತೆಯೂ ಹೆಚ್ಚುತ್ತದೆ’ ಎಂದು ಶುಕ್ಲಾ ಬರೆದಿದ್ದಾರೆ.

ಲೇಖನದಲ್ಲೇನಿದೆ?

ಮಂಗಳನ ಅಂಗಳದಲ್ಲಿ ಹೊಸ ಯೋಜನೆಗಳನ್ನು ಕೈಗೊಳ್ಳಲು, ಅಲ್ಲಿ ಸಂಶೋಧನಾ ಕೇಂದ್ರಗಳಂತಹ ಕಟ್ಟಡಗಳ ನಿರ್ಮಾಣ ಅನಿವಾರ್ಯ. ಅದಕ್ಕೆಂದು ನಿರ್ಮಾಣ ಸಾಮಗ್ರಿಗಳನ್ನು ಭೂಮಿಯಿಂದ ಸಾಗಿಸುವುದು ಪ್ರಾಯೋಗಿಕವಾಗಿ ಕಷ್ಟಸಾಧ್ಯ. ಅದರ ಬದಲು ಭೂಮಿಯಿಂದ ಕೊಂಡೊಯ್ದ ಕೆಲ ಸೂಕ್ಷ್ಮಾಣುಜೀವಿಗಳ ಸಹಾಯದಿಂದ ಮಂಗಳನ ಮಣ್ಣನ್ನೇ ಇಟ್ಟೆಗೆ ಸೃಷ್ಟಿಗೆ ಬಳಸಬಹುದಾದರೂ, ಅದರಲ್ಲಿರುವ ಪರ್ಕ್ಲೋರೇಟ್‌ ಎಂಬ ಅಂಶ ಇದಕ್ಕೆ ಅಡ್ಡಿ ಮಾಡುತ್ತದೆ.

ಈ ಮೊದಲು ಸ್ಪೋರೊಸಾರ್ಸಿನಾ ಪ್ಯಾಸ್ಚೂರಿ ಎಂಬ ಬ್ಯಾಕ್ಟೀರಿಯಾವನ್ನು ಯೂರಿಯಾ ಮತ್ತು ಕ್ಯಾಲ್ಸಿಯಂ ಜತೆ ಬೆರೆಸಿ ಅಂಟನ್ನು ಸೃಷ್ಟಿಸಲಾಗಿತ್ತು. ಆದರೆ ಇತ್ತೀಚಿನ ಸಂಶೋಧನೆಯಲ್ಲಿ ಇನ್ನೊಂದು ಹೆಜ್ಜೆ ಮುಂದುವರೆದು, ಬೆಂಗಳೂರಿನ ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾ ಬಳಸಿದಾಗ ಅದಕ್ಕಿಂತಲೂ ಗಟ್ಟಿಯಾದ ಇಟ್ಟಿಗೆಗಳು ತಯಾರಾದವು ಎಂದು ಲೇಖನದಲ್ಲಿದೆ.

ಗಗನಯಾನಿ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಗೌರವ:

ಇತ್ತೀಚೆಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಗನಯಾನಿ, ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರಿಗೆ ಅಶೋಕ ಚಕ್ರವನ್ನು ನೀಡಿ ಸೋಮವಾರ ಸನ್ಮಾನಿಸಿದರು. ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯಪಥದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಶುಕ್ಲಾ ಅವರು ಪೈಲಟ್‌ ಆಗಿ 2000 ಗಂಟೆಗಳ ಕಾಲ ವಿವಿಧ ಯುದ್ಧ ವಿಮಾನಗಳನ್ನು ಹಾರಿಸಿದ ಅನುಭವ ಹೊಂದಿದ್ದಾರೆ. ಕಳೆದ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಈ ಮೂಲಕ ಅಲ್ಲಿಗೆ ತೆರಳಿದ ಮೊದಲ ಭಾರತೀಯ ಎನ್ನಿಸಿಕೊಂಡಿದ್ದರು.