ಬೆಂಗಳೂರು (ಡಿ.28): ರಸ್ತೆ ಗುಂಡಿ, ಕಾಮಗಾರಿ ವಿಳಂಬ, ಮರ ತೆರವು, ಮಳೆ ನೀರುಗಾಲುವೆ, ಬೀದಿನಾಯಿ ಹಾವಳಿ, ಸೊಳ್ಳೆ ಕಾಟ, ಬೀದಿ ದೀಪ, ಹಾವು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರಕ್ಕೆ ಬಿಬಿಎಂಪಿಯ ‘ಸಹಾಯ 2.0 ಅವತರಣಿಕೆ’ ಅನ್ನು ಹೊಸ ವರ್ಷಕ್ಕೆ ಲೋಕಾರ್ಪಣೆಗೊಳಿಸುತ್ತಿದೆ.

ನಗರದ 198 ವಾರ್ಡ್‌ಗಳ ನಾಗರಿಕರ ಕುಂದು ಕೊರತೆ ಆಲಿಸುವುದಕ್ಕೆ 24/7 ನಿಯಂತ್ರಣ ಕೊಠಡಿ ಇದೆ. ಜತೆಗೆ ಬಿಬಿಎಂಪಿಯ ಎಂಟು ವಲಯಗಳಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಸಹಾಯ ಮತ್ತು ಫಿಕ್ಸ್‌ ಮೈ ಸ್ಟ್ರೀಟ್‌ ಅಪ್ಲಿಕೇಷನ್‌ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಇದರಿಂದ ಸಾರ್ವಜನಿಕರ ಸಮಸ್ಯೆಗಳು ನಿಗದಿತ ಅವಧಿಯಲ್ಲಿ ಪರಿಹಾರ ಆಗುತ್ತಿಲ್ಲ ಎಂಬ ಸಾಕಷ್ಟುದೂರುಗಳು ಕೇಳಿ ಬರುತ್ತಿವೆ. ಹೀಗಾಗಿ, ಬಿಬಿಎಂಪಿ ಸಹಾಯ ಅಪ್ಲಿಕೇಷನ್‌ ಅನ್ನು ಇನ್ನಷ್ಟುನಾಗರಿಕ ಸ್ನೇಹಿಗೊಳಿಸಿ ಹೊಸ ವರ್ಷಕ್ಕೆ ‘ಸಹಾಯ 2.0’ ಅವತರಿಣಿಕೆ ಬಿಡುಗಡೆಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

ಈಗೀರುವ ಸಹಾಯ ಆ್ಯಪ್‌ನಲ್ಲಿರುವ ದೋಷಗಳು:

ನಿಗದಿತ ಅವಧಿಯಲ್ಲಿ ಸಮಸ್ಯೆ ಪರಿಹಾರ ಸಾಧ್ಯವಾಗುತ್ತಿಲ್ಲ. ದಾಖಲೆಗಳಲ್ಲದೇ ದೂರು ಸಲ್ಲಿಕೆ, ದೂರುದಾರರಿಗೆ ದೂರು ಸ್ವೀಕಾರದ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಕೆ, ದೂರುಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಲಭ್ಯವಾಗುವುದಿಲ್ಲ ಎಂಬ ದೂರುಗಳು ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಹೀಗಾಗಿ, ಬಿಬಿಎಂಪಿ ಸಹಾಯ ಆ್ಯಪ್‌ ಅನ್ನು ಇನ್ನಷ್ಟುಉನ್ನತ್ತಿಕರಿಸಿ 2.0 ಅವತರಿಣಿಕೆಯಲ್ಲಿ ಬಿಡುಗಡೆ ಮಾಡುತ್ತಿದೆ.

ಹೊಸ ಅವತರಣಿಕೆ:

ಸಹಾಯ 2.0 ಅವತರಣಿಕೆ ಬಳಕೆದಾರ ಸ್ನೇಹಿಯಾಗಿದೆ. ಒಟ್ಟು ಮೂರು ರೀತಿ ಅಪ್ಲಿಕೇಷನ್‌ಗಳು ಇರಲಿವೆ. ಕಚೇರಿ ಅಪ್ಲಿಕೇಷನ್‌, ನಾಗರಿಕರ ಅಪ್ಲಿಕೇಷನ್‌, ಸಿಬ್ಬಂದಿ ಅಪ್ಲಿಕೇಷನ್‌ ಪ್ರತ್ಯೇಕವಾಗಿ ಇರಲಿದೆ. ನಾಗರಿಕ ಆ್ಯಪ್‌ನಲ್ಲಿ ದೂರು ಸಲ್ಲಿಕೆ ಮಾಡಿದ ತಕ್ಷಣ ಎಸ್‌ಎಂಎಸ್‌ ಮೂಲಕ ದೂರು ಸ್ವೀಕಾರದ ಬಗ್ಗೆ ಸಂದೇಶ ರವಾನೆ ಆಗಲಿದೆ. ದೂರು ನೇರವಾಗಿ ಸಂಬಂಧ ಪಟ್ಟವಿಭಾಗದ ಮುಖ್ಯಸ್ಥರಿಗೆ, ವಲಯ, ವಾರ್ಡ್‌ನ ಅಧಿಕಾರಿಗೆ ರವಾನೆಯಾಗಲಿದೆ. ಜತೆಗೆ ಇಲಾಖೆಯ ಮುಖ್ಯಸ್ಥರ ಗಮನಕ್ಕೂ ಬರಲಿದೆ.

ದೂರುದಾರ ಸಮಸ್ಯೆ ಕುರಿತು ಫೋಟೋ, ವಿಡಿಯೋ ಸಹ ಆ್ಯಪ್‌ ಮೂಲಕ ಸಲ್ಲಿಸಬಹುದು. ದೂರು ಪರಿಹಾರದ ನಂತರ ದೂರುದಾರಿಗೆ ಸಂದೇಶ ರವಾನೆಯಾಗಲಿದೆ. ಈ ಎಲ್ಲ ಮಾಹಿತಿ ಕಚೇರಿ ಅಪ್ಲಿಕೇಷನ್‌ನಲ್ಲಿ ದಾಖಲಾಗಲಿದೆ. ಜತೆಗೆ ಎಷ್ಟುದೂರು ಬಾಕಿ ಇವೆ. ಎಷ್ಟುಪರಿಹಾರವಾಗಿವೆ ಎಂಬುದನ್ನು ಗಮನಿಸಬಹುದಾಗಿದೆ. ಇನ್ನು ಡ್ಯಾಶ್‌ ಬೋರ್ಡ್‌ನಲ್ಲಿ ದೂರು ಯಾವ ಹಂತದಲ್ಲಿ ಎಂಬುದನ್ನು ಗಮನಿಸಬಹುದಾಗಿದೆ.

ಜನವರಿ 1ರಂದು ಸಹಾಯ 2.0 ಅವತರಣಿಕೆ ಬಿಡುಗಡೆ ಮಾಡಲಾಗುವುದು. ಮುಖ್ಯವಾಗಿ ನಾಗರಿಕ ಸ್ನೇಹಿ, ನಿಗದಿತ ಸಮಯದಲ್ಲಿ ಸಮಸ್ಯೆ ಪರಿಹಾರ, ಆನ್‌ಲೈನ್‌ ಮೂಲಕ ದೂರು ಸಲ್ಲಿಕೆ ಮತ್ತು ಪರಿಹಾರ ಮಾಡುವುದು ಬಿಬಿಎಂಪಿ ಉದ್ದೇಶವಾಗಿದೆ. ಎಲ್ಲ ರೀತಿಯ ಮೊಬೈಲ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಬಳಸಬಹುದಾಗಿದೆ.

-ಬಿ.ಎಚ್‌.ಅನಿಲ್‌ಕುಮಾರ್‌ ಬಿಬಿಎಂಪಿ ಆಯುಕ್ತ.