Asianet Suvarna News Asianet Suvarna News

ಗಗನಯಾನ ಯೋಜನೆಯ ಪ್ರಮುಖ ಪ್ಯಾರಾಶೂಟ್ ಸುರಕ್ಷತಾ ಪರೀಕ್ಷೆಗೆ ಸಿದ್ಧವಾದ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಗಗನಯಾನ ಕ್ರ್ಯೂ ಮಾಡ್ಯುಲ್‌ನ ಮೊದಲ ಇಂಟಿಗ್ರೇಟೆಡ್ ಏರ್ ಡ್ರಾಪ್ ಟೆಸ್ಟ್‌ಗೆ ಸಿದ್ಧತೆ ನಡೆಸುತ್ತಿದೆ. ಈ ಪ್ರಮುಖ ಪರೀಕ್ಷೆ ಗಗನಯಾತ್ರಿಗಳು ಬಾಹ್ಯಾಕಾಶದಿಂದ ಭೂಮಿಗೆ ಮರಳಲು ಅತ್ಯವಶ್ಯಕವಾದ ಪ್ಯಾರಾಶೂಟ್ ವ್ಯವಸ್ಥೆ ಮತ್ತು ಕ್ಯಾಪ್ಸೂಲ್‌ನ ಮೌಲ್ಯೀಕರಣ ನಡೆಸಲು ನೆರವಾಗುತ್ತದೆ.

ISRO gears up to test critical parachute sefety in Gaganyaan Mission rav
Author
First Published Apr 24, 2024, 10:27 AM IST

- ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಗಗನಯಾನ ಕ್ರ್ಯೂ ಮಾಡ್ಯುಲ್‌ನ ಮೊದಲ ಇಂಟಿಗ್ರೇಟೆಡ್ ಏರ್ ಡ್ರಾಪ್ ಟೆಸ್ಟ್‌ಗೆ ಸಿದ್ಧತೆ ನಡೆಸುತ್ತಿದೆ. ಈ ಪ್ರಮುಖ ಪರೀಕ್ಷೆ ಗಗನಯಾತ್ರಿಗಳು ಬಾಹ್ಯಾಕಾಶದಿಂದ ಭೂಮಿಗೆ ಮರಳಲು ಅತ್ಯವಶ್ಯಕವಾದ ಪ್ಯಾರಾಶೂಟ್ ವ್ಯವಸ್ಥೆ ಮತ್ತು ಕ್ಯಾಪ್ಸೂಲ್‌ನ ಮೌಲ್ಯೀಕರಣ ನಡೆಸಲು ನೆರವಾಗುತ್ತದೆ.

ಪ್ರಸ್ತುತ ಏರ್ ಡ್ರಾಪ್ ಪರೀಕ್ಷೆ ದೈನಂದಿನ ಪ್ರಕ್ರಿಯೆಗಳನ್ನು ಮೀರಿದ ಪರೀಕ್ಷೆಯಾಗಿದ್ದು, ಗಗನಯಾತ್ರಿಗಳ ಸುರಕ್ಷತೆಗಾಗಿ ಅತ್ಯಂತ ಉನ್ನತ ಮಟ್ಟದ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಇಸ್ರೋದ ಬದ್ಧತೆಗೆ ಸಾಕ್ಷಿಯಾಗಿದೆ. ಈ ಪರೀಕ್ಷೆಯ ಯಶಸ್ಸು ಭಾರತದ ಪಾಲಿಗೆ ಮಹತ್ವದ ಮೈಲಿಗಲ್ಲಾಗಿರಲಿದ್ದು, 2025ರಲ್ಲಿ ಉದ್ದೇಶಿಸಲಾಗಿರುವ ಭಾರತದ ಮೊದಲ ಮಾನವ ಸಹಿತ ಗಗನಯಾತ್ರೆಯ ಗುರಿಯನ್ನು ಈಡೇರಿಸುವಲ್ಲಿ ಮುಖ್ಯವಾಗಿದೆ.

ಇಸ್ರೋ ಪ್ರಸ್ತುತ ಪರೀಕ್ಷೆಗೆ ಸಂಬಂಧಿಸಿದಂತೆ ನೋಟಿಸ್ ಟು ಏರ್‌ಮೆನ್ (NotAm) ಬಿಡುಗಡೆಗೊಳಿಸಿದೆ. ಆದರೆ ಪರೀಕ್ಷೆಯ ನಿರ್ದಿಷ್ಟ ದಿನಾಂಕ ಇನ್ನೂ ಬಹಿರಂಗಪಡಿಸಲಾಗಿಲ್ಲ.ವರದಿಗಳ ಅನುಸಾರವಾಗಿ, ಈ ಯೋಜನೆಗೆ ಸಂಬಂಧಿಸಿದ ಮೂಲಗಳು ಪರೀಕ್ಷೆ ಈ ವಾರದಲ್ಲಿ ಒಂದು ದಿನ ನೆರವೇರಲಿದೆ ಎಂದಿದ್ದಾರೆ. ಪರೀಕ್ಷೆಯ ದಿನವನ್ನು ಸೂಕ್ತ ವಾತಾವರಣ ಮತ್ತು ತಾಂತ್ರಿಕ ಸಿದ್ಧತೆಗಳ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ.

ಬಾಹ್ಯಾಕಾಶದಿಂದ ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟ ಇಸ್ರೋ!

ಅತ್ಯಂತ ಮಹತ್ವದ ಸಿದ್ಧತೆಗಳಲ್ಲೊಂದು

ಪ್ರಸ್ತುತ ಪರೀಕ್ಷೆ ಗಗನಯಾನ ಯೋಜನೆಯ ಆರಂಭಿಕ ಮಾನವ ರಹಿತ ಹಾರಾಟ ಪರೀಕ್ಷೆಯ ಅಂತಿಮ ಹಂತದ ಪರೀಕ್ಷೆಗಳಲ್ಲಿ ಒಂದಾಗಿದೆ. ಮಹತ್ವದ ಜೀವ ಬೆಂಬಲ ವ್ಯವಸ್ಥೆಗಳು ಮತ್ತು ಸಿಬ್ಬಂದಿಗಳ ತುರ್ತು ನಿರ್ಗಮನ ವ್ಯವಸ್ಥೆಗಳನ್ನು ಅಳವಡಿಸಿರುವ ಕ್ರ್ಯೂ ಮಾಡ್ಯುಲ್, ಭವಿಷ್ಯದ ಮಾನವ ಸಹಿತ ಗಗನಯಾತ್ರೆಯ ಸುರಕ್ಷತೆ ಖಾತ್ರಿಪಡಿಸಲು ಅವಶ್ಯಕವಾಗಿದೆ.

ಕ್ರ್ಯೂ ಕ್ಯಾಪ್ಸುಲ್ ಅನ್ನು ಅಲ್ಯುಮಿನಿಯಮ್ ಮತ್ತು ಉಕ್ಕಿನಂತಹ ಗಟ್ಟಿಯಾದ ಉತ್ಪನ್ನಗಳಿಂದ ನಿರ್ಮಿಸಲಾಗಿದ್ದು, ಇದನ್ನು ಚಿನೂಕ್ ರಾಕೆಟ್ ಒಂದರ ಕೆಳಭಾಗಕ್ಕೆ ಅಳವಡಿಸಲಾಗುತ್ತದೆ. ಒಂದು ಬಾರಿ ಹೆಲಿಕಾಪ್ಟರ್ ನಿರ್ದಿಷ್ಟ ಎತ್ತರವನ್ನು ತಲುಪಿದ ಬಳಿಕ, ಕ್ಯಾಪ್ಸುಲ್ ಅನ್ನು ಸಮುದ್ರದ ಮೇಲ್ಭಾಗದಲ್ಲಿ ಕೆಳಬಿಡಲಾಗುತ್ತದೆ. ಇದಾದ ಬಳಿಕ, ಹಲವು ಹಂತಗಳಲ್ಲಿ ಪ್ಯಾರಾಶೂಟ್ ತೆರೆಯುವಿಕೆ ನಡೆದು, ಕ್ರ್ಯೂ ಕ್ಯಾಪ್ಸುಲ್ ಪತನ ನಿಧಾನಗೊಂಡು, ಅಂತಿಮವಾಗಿ ಅದು ನಿಯಂತ್ರಿತ ವೇಗದಲ್ಲಿ ಸಮುದ್ರದ ಮೇಲೆ ಇಳಿಯುತ್ತದೆ.

ಉದ್ದೇಶಿತ ಪರೀಕ್ಷೆಯಲ್ಲಿ, ಭಾರತೀಯ ವಾಯುಪಡೆಯ ವಿಮಾನವನ್ನು ಬಳಸಿ, ಕ್ರ್ಯೂ ಕ್ಯಾಪ್ಸುಲ್ ಅನ್ನು 3.5 ರಿಂದ 4 ಕಿಲೋಮೀಟರ್ ಎತ್ತರದಿಂದ ಕೆಳಬಿಡಲಾಗುತ್ತದೆ. ಪ್ಯಾರಾಶೂಟ್‌ಗಳು ಹೇಗೆ ಕಾರ್ಯಾಚರಿಸುತ್ತವೆ, ಅವುಗಳ ತೆರೆಯುವಿಕೆ ಹೇಗೆ, ಅವುಗಳು ಒತ್ತಡವನ್ನು ಹೇಗೆ ನಿಭಾಯಿಸುತ್ತವೆ, ಕ್ರ್ಯೂ ಮಾಡ್ಯುಲ್ ಸುರಕ್ಷಿತವಾಗಿ ಬಂಗಾಳ ಕೊಲ್ಲಿಯಲ್ಲಿ ಇಳಿಯುವ ನಿಟ್ಟಿನಲ್ಲಿ ಅದನ್ನು ಸ್ಥಿರ ಮತ್ತು ನಿಯಂತ್ರಿತವಾಗಿ ಹೇಗೆ ಚಲಿಸಲಾಗಿತ್ತದೆ ಎನ್ನುವುದನ್ನು ಈ ಪರೀಕ್ಷೆ ವಿವರಿಸಲಿದೆ.

ಪ್ಯಾರಾಶೂಟ್ ಪರೀಕ್ಷೆಯ ಪ್ರಮುಖ ಅಂಶಗಳು

ಕಾರ್ಯಾಚರಣೆ: ವಾಸ್ತವ ಪರಿಸ್ಥಿತಿಯಲ್ಲಿ ಪ್ಯಾರಾಶೂಟ್ ವ್ಯವಸ್ಥೆಯ ಪ್ರತಿಯೊಂದು ಬಿಡಿಭಾಗವೂ ಸರಿಯಾಗಿ ಕಾರ್ಯಾಚರಿಸುತ್ತದೆ ಎಂದು ಖಾತ್ರಿಪಡಿಸುವುದು.

ನಿಯೋಜನೆ: ಸಮಯಕ್ಕೆ ಸರಿಯಾಗಿ ಮತ್ತು ಪರಿಣಾಮಕಾರಿಯಾಗಿ ಪ್ಯಾರಾಶೂಟ್‌ಗಳು ಹೇಗೆ ನಿಯೋಜನೆಗೊಳ್ಳುತ್ತವೆ ಎನ್ನುವುದನ್ನು ಗಮನಿಸುವುದು.

ಒತ್ತಡಗಳ ನಿರ್ವಹಣೆ: ನಿಯೋಜನೆ ಮತ್ತು ಕೆಳಗಿಳಿಯುವ ಸಂದರ್ಭದಲ್ಲಿ ಉಂಟಾಗುವ ಒತ್ತಡಗಳನ್ನು ಪ್ಯಾರಾಶೂಟ್‌ಗಳ ಪಟ್ಟಿಗಳು ಮತ್ತು ಸಂಪರ್ಕಗಳು ಹೇಗೆ ನಿಭಾಯಿಸಿ, ಯಾವುದೇ ವೈಫಲ್ಯ ಉಂಟಾಗದಂತೆ ತಡೆಯುತ್ತವೆ ಎನ್ನುವುದನ್ನು ಪರೀಕ್ಷಿಸುವುದು.

ನಿಯಂತ್ರಿತ ಇಳಿಯುವಿಕೆ: ಕ್ರ್ಯೂ ಮಾಡ್ಯುಲ್ ಸುರಕ್ಷಿತವಾಗಿ ಸಮುದ್ರದ ಮೇಲ್ಮೈಯಲ್ಲಿ ಇಳಿಯುವಂತೆ ಮಾಡಲು ಪ್ಯಾರಾಶೂಟ್‌ಗಳು ಹೇಗೆ ವೇಗ ಮತ್ತು ಪಥವನ್ನು ನಿಯಂತ್ರಿಸುತ್ತವೆ ಎನ್ನುವುದನ್ನು ತಿಳಯುವುದು.

ಗಗನಯಾನ ಯೋಜನೆಯ ವಿವರಗಳು

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾಲ್ವರು ಗಗನಯಾತ್ರಿಗಳು (ಎಲ್ಲರೂ ಭಾರತೀಯ ವಾಯುಪಡೆಯ ಪರೀಕ್ಷಾ ಪೈಲಟ್‌ಗಳು) ಗಗನಯಾನ ಯೋಜನೆಯ ಭಾಗವಾಗಲು ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದರು. ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಹಾಗೂ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರು ಗಗನಯಾನ ಯೋಜನೆಯ ಗಗನಯಾತ್ರಿಗಳಾಗಿದ್ದಾರೆ.

ಗಗನಯಾನ ಯೋಜನೆ ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಾನವರನ್ನು ಭಾರತೀಯ ನಿರ್ಮಾಣದ ರಾಕೆಟ್ ಬಳಸಿ ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ. ಇಸ್ರೋದ ತಂಡ ಪ್ರಸ್ತುತ ಯೋಜನೆಯ ಎಲ್ಲ ಬಿಡಿಭಾಗಗಳು ನಂಬಿಕಾರ್ಹವಾಗಿವೆ ಮತ್ತು ಗಗನಯಾತ್ರಿಗಳಿಗೆ ಸುರಕ್ಷಿತವಾಗಿವೆ ಎಂದು ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ. ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳುವ ಮುನ್ನ, ಗಗನಯಾತ್ರಿಗಳು ಇಲ್ಲದೆಯೇ ಎರಡು ಪ್ರಾಯೋಗಿಕ ಹಾರಾಟ ನೆರವೇರಲಿವೆ. ಈ ಪರೀಕ್ಷೆಗಳು ಯಶಸ್ವಿಯಾದರೆ, ಇಸ್ರೋ ತನ್ನ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯನ್ನು 2025ರಲ್ಲಿ ನೆರವೇರಿಸಲಿದೆ.

ಗಗನಯಾನ ಬಾಹ್ಯಾಕಾಶ ನೌಕೆ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ಆದರೆ ಇಸ್ರೋ ಅಧ್ಯಕ್ಷರಾದ ಎಸ್ ಸೋಮನಾಥ್ ಅವರು ಆರಂಭಿಕ ಯೋಜನೆಯಲ್ಲಿ ಕೇವಲ ಓರ್ವ ಗಗನಯಾತ್ರಿ ತೆರಳುವ ಸಾಧ್ಯತೆಗಳಿವೆ ಎಂದಿದ್ದಾರೆ. ಈ ಯೋಜನೆಗಾಗಿ, ಗಗನಯಾತ್ರಿಗಳ ಮಾನಸಿಕ ಆರೋಗ್ಯಕ್ಕೂ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮೊದಲ ಗಗನಯಾನ ಹಾರಾಟದಲ್ಲಿ, ಗರಿಷ್ಠ ಇಬ್ಬರು ಗಗನಯಾತ್ರಿಗಳನ್ನು ಭೂಮಿಯ ಮೇಲೆ 400 ಕಿಲೋಮೀಟರ್ ಎತ್ತರದಲ್ಲಿ ಇಬ್ಬರು ಗಗನಯಾತ್ರಿಗಳನ್ನು ಏಳು ದಿನಗಳ ಕಾಲ ಪ್ರಯಾಣ ನಡೆಸುವಂತೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

ಮೋದಿ ಮೋಡಿ: ಲೋಕಸಭಾ ಚುನಾವಣಾ ಕಾಳಜಿ, ಸವಾಲು, ಗಿರೀಶ್ ಲಿಂಗಣ್ಣ

ನಾಲ್ವರು ತರಬೇತಿ ಪಡೆದ ಗಗನಯಾತ್ರಿಗಳಲ್ಲಿ  ಇಬ್ಬರು ಗಗನಯಾತ್ರಿಗಳನ್ನು ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಉಳಿದಿಬ್ಬರು ಗಗನಯಾತ್ರಿಗಳನ್ನು ಮೀಸಲಾಗಿ ಇಡಲಾಗುತ್ತದೆ. ಅದರೊಡನೆ, ಗಗನಯಾನ ಯೋಜನೆ ಉಡಾವಣೆಗೊಳ್ಳುವ ಮುನ್ನ, ಭಾರತದ ನಾಲ್ವರಲ್ಲಿ ಓರ್ವ ಗಗನಯಾತ್ರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ಅವಕಾಶ ಲಭಿಸುವ ಸಾಧ್ಯತೆಳಿವೆ. ಇನ್ನಷ್ಟು ಅಂಕಣಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios