ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಸುಲಭವಾಗಿ ಡೇಟಾ ಎಲ್ಲಾ ಭಾಗದಲ್ಲೂ ನೆಟ್‌ವರ್ಕ್ ಲಭ್ಯವಿದೆ. ಇದೀಗ ಡೇಟಾ ಬಳಕೆಯಲ್ಲೂ ದಾಖಲೆ ನಿರ್ಮಾಣವಾಗಿದೆ. ಜಿಯೋ ಇದೀಗ ವಿಶ್ವದ ಅತೀ ದೊಡ್ಡ ಮೊಬೈಲ್ ಆಪರೇಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಡೇಟಾ ಬಳಕೆಯಲ್ಲಿ ಜಿಯೋ ಚೀನಾ ಮೊಬೈಲ್ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ. 

ನವದೆಹಲಿ(ಏ.23): ಭಾರತದಲ್ಲಿ ಮೊಬೈಲ್ ನೆಟ್‌ವರ್ಕ್, ಡೇಟಾ, ಇಂಟರ್ನೆಟ್ ವಲಯದಲ್ಲಿ ಕ್ರಾಂತಿಯಾಗಿದೆ. ದೇಶ ಮೂಲೆ ಮೂಲೆಯಲ್ಲಿ ಇದೀಗ 5ಜಿ ನೆಟ್‌ವರ್ಕ್ ಲಭ್ಯವಿದೆ. ಸಂಪರ್ಕ ಸುಲಭವಾಗಿದೆ. ಇದರ ನಡುವೆ ಟೆಲಿಕಾಂ ಸೇವೆ ಒದಗಿಸುತ್ತಿರುವ ಭಾರತೀಯ ಕಂಪನಿಗಳು ವಿಶ್ವಮಟ್ಟದಲ್ಲೇ ಸದ್ದು ಮಾಡುತ್ತಿದೆ. ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಿದ ನಂತರ ಇದೀಗ ರಿಲಯನ್ಸ್ ಜಿಯೋ ಡೇಟಾ ಬಳಕೆಯಲ್ಲಿ ಹೊಸ ಜಾಗತಿಕ ದಾಖಲೆ ನಿರ್ಮಾಣ ಮಾಡಿದೆ. ರಿಲಯನ್ಸ್ ಜಿಯೋ ಡೇಟಾ ದಟ್ಟಣೆಯಲ್ಲಿ (ಟ್ರಾಫಿಕ್‌) ವಿಶ್ವದ ನಂಬರ್ ಒನ್ ಕಂಪನಿ ಆಗಿದೆ. ಕಳೆದ ತ್ರೈಮಾಸಿಕದಲ್ಲಿ ಒಟ್ಟು ಡೇಟಾ ದಟ್ಟಣೆಯು 40.9 ಎಕ್ಸಾಬೈಟ್‌ಗಳಲ್ಲಿ ದಾಖಲಾಗಿದೆ. ಅದೇ ಹೊತ್ತಿಗೆ ಡೇಟಾ ಟ್ರಾಫಿಕ್‌ನಲ್ಲಿ ಇದುವರೆಗೆ ನಂಬರ್ ಒನ್ ಕಂಪನಿಯಾಗಿದ್ದ ಚೀನಾ ಮೊಬೈಲ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಅದರ ನೆಟ್‌ವರ್ಕ್‌ನಲ್ಲಿನ ಡೇಟಾ ಬಳಕೆ ತ್ರೈಮಾಸಿಕದಲ್ಲಿ 40 ಎಕ್ಸಾಬೈಟ್‌ಗಳಿಗಿಂತ ಕಡಿಮೆಯಿತ್ತು. 

ಚೀನಾದ ಮತ್ತೊಂದು ಕಂಪನಿ ಆದ ಚೀನಾ ಟೆಲಿಕಾಂ ಡೇಟಾ ಬಳಕೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಭಾರತದ ಏರ್‌ಟೆಲ್ ನಾಲ್ಕನೇ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಟೆಲಿಕಾಂ ಕಂಪನಿಗಳ ಡೇಟಾ ದಟ್ಟಣೆ ಮತ್ತು ಗ್ರಾಹಕರ ನೆಲೆಯನ್ನು ಮೇಲ್ವಿಚಾರಣೆ ಮಾಡುವ ಟಿಎಫಿಶಿಯೆಂಟ್ ತನ್ನ ವರದಿಯಲ್ಲಿ ಈ ಮಾಹಿತಿಯನ್ನು ನೀಡಿದೆ.

ಜಿಯೋದಿಂದ 250 ರೂ. ಗೆ ಭರ್ಜರಿ ರೀಚಾರ್ಜ್‌ ಪ್ಲಾನ್‌, ಏರ್‌ಟೆಲ್‌ಗಿಂತ ಅತ್ಯಧಿಕ ಡೇಟಾ ಲಭ್ಯ!

5ಜಿ ಸೇವೆಗಳ ಪ್ರಾರಂಭದ ನಂತರ, ರಿಲಯನ್ಸ್ ಜಿಯೊದ ಡೇಟಾ ಬಳಕೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 35.2ರಷ್ಟು ಜಿಗಿತವನ್ನು ಕಂಡಿದೆ. ಈ ಹೆಚ್ಚಳಕ್ಕೆ ಮುಖ್ಯ ಕಾರಣವೆಂದರೆ ಜಿಯೋದ ಟ್ರೂ 5ಜಿ ನೆಟ್‌ವರ್ಕ್ ಮತ್ತು ಜಿಯೋ ಏರ್ ಫೈಬರ್‌ನ ವಿಸ್ತರಣೆ. ರಿಲಯನ್ಸ್ ಜಿಯೋ ತ್ರೈಮಾಸಿಕ ಫಲಿತಾಂಶಗಳ ಪ್ರಕಾರ, 10.8 ಕೋಟಿ ಗ್ರಾಹಕರನ್ನು ಜಿಯೋ ನೆಟ್‌ವರ್ಕ್ ಜಿಯೋ ಟ್ರೂ 5ಜಿ ನೆಟ್‌ವರ್ಕ್‌ಗೆ ಸೇರಿಸಲಾಗಿದೆ ಮತ್ತು ಜಿಯೋದ ಒಟ್ಟು ಡೇಟಾ ದಟ್ಟಣೆ ಸುಮಾರು ಶೇ 28ರಷ್ಟು ಈಗ 5ಜಿ ನೆಟ್‌ವರ್ಕ್‌ನಿಂದ ಬರುತ್ತಿದೆ. ಮತ್ತೊಂದೆಡೆ, ಜಿಯೋ ಏರ್ ಫೈಬರ್ ದೇಶಾದ್ಯಂತ 5,900 ನಗರಗಳಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಿದೆ.

ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ತ್ರೈಮಾಸಿಕ ಫಲಿತಾಂಶಗಳಲ್ಲಿ ನೀಡಿದ ಮಾಹಿತಿಯ ಪ್ರಕಾರ, ಜಿಯೋ ನೆಟ್‌ವರ್ಕ್‌ನಲ್ಲಿ ಪ್ರತಿ ಗ್ರಾಹಕನ ಮಾಸಿಕ ಡೇಟಾ ಬಳಕೆ 28.7 ಜಿಬಿಗೆ (ಗಿಗಾಬೈಟ್) ಹೆಚ್ಚಾಗಿದ್ದು, ಇದು ಮೂರು ವರ್ಷಗಳ ಹಿಂದೆ ಕೇವಲ 13.3 ಜಿಬಿ ಆಗಿತ್ತು. 2018ರಲ್ಲಿ, ಭಾರತದಲ್ಲಿ ಒಂದು ತ್ರೈಮಾಸಿಕದಲ್ಲಿ ಒಟ್ಟು ಮೊಬೈಲ್ ಡೇಟಾ ಟ್ರಾಫಿಕ್ ಕೇವಲ 4.5 ಎಕ್ಸಾಬೈಟ್‌ಗಳು ಇತ್ತು ಎಂಬುದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕಿದೆ.

ಭಾರತದಲ್ಲಿ ಅತೀ ಅಗ್ಗದ 5G ಫೋನ್ ಬಿಡುಗಡೆ ಮಾಡಲಿದೆ ರಿಲಯನ್ಸ್‌ ಜಿಯೋ, ಬೆಲೆ ಇಷ್ಟೊಂದ್ ಕಡಿಮೆನಾ?