ಗೂಗಲ್ ಮ್ಯಾಪ್ ಬಳಸುವವರೇ ಎಚ್ಚರ... ಈ ದಾರಿ ಅಲ್ಲಿಗೆ ಹೋಗಲ್ಲ!
ತಂತ್ರಜ್ಞಾನ ಬೆಳೆದಂತೆ ಮನುಷ್ಯ ಅವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗುತ್ತಿದ್ದಾನೆ. ತಂತ್ರಜ್ಞಾನ ಬಳಸುವಾಗ ಬಹುತೇಕ ಮಟ್ಟಿಗೆ ಮಾನವ ಹಸ್ತಕ್ಷೇಪದ ಅಗತ್ಯವಿರುವುದಿಲ್ಲ. ಆದರೆ, ಅದರರ್ಥ ಬಳಕೆದಾರರು ಕಣ್ಮುಚ್ಚಿ ಬಳಸಬಹುದಂತಲ್ಲ!
ಎಲ್ಲಿಗೂ ಹೋಗ್ಬೇಕಾದರೆ ದಾರಿ ತಿಳಿದುಕೊಳ್ಳಲು ಇಂದು ಎಲ್ಲರೂ ಮೊದಲು ನೋಡೋದು ಗೂಗಲ್ ಮ್ಯಾಪ್! ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಗೂಗಲ್ ಒಂದು ‘ಗೈಡ್’ ಆಗಿರುವುದು ಹೊಸತೇನಲ್ಲ.
ಸ್ಥಳ ಎಲ್ಲಿದೆ? ಎಷ್ಟು ದೂರ ಇದೆ? ಯಾವ ದಾರಿಯಲ್ಲಿ ಹೋಗ್ಬೇಕು? ಎಂಬಿತ್ಯಾದಿ ಎಲ್ಲಾ ವಿವರಗಳನ್ನು ಗೂಗಲ್ ಮ್ಯಾಪ್ ಬೆರಳ ತುದಿಯಲ್ಲೇ ಒದಗಿಸುತ್ತದೆ. ಗಾಡಿ ನಿಲ್ಲಿಸ್ಬೇಕು, ಅಲ್ಲಿದ್ದವರನ್ನು ಕೇಳ್ಬೇಕು, ಗೊತ್ತಿಲ್ಲ ಅಂದ್ರೆ ಮತ್ತೊಬ್ಬರನ್ನು ಹಿಡೀಬೇಕು... ಗೂಗಲ್ ಮ್ಯಾಪ್ ಇದ್ದರೆ ಈ ಎಲ್ಲಾ ಕಿರಿಕಿರಿಯೇ ಇಲ್ಲ.
ಗೂಗಲ್ ಮ್ಯಾಪ್ ನೋಡಿಕೊಂಡು ಹೋದ ಚಾಲಕ ಟ್ರಕ್ಕನ್ನು ನದಿಗೆ ಬೀಳಿಸಿದ ಘಟನೆಯನ್ನು ಕಳೆದ ವಾರ ನೀವು ಇಲ್ಲಿ ಓದಿರಬಹುದು. ಈಗ ಆನ್‌ಲೈನ್ ಮ್ಯಾಪ್ ಸೇವೆಯ ಅಂತಹ ಮತ್ತೊಂದು ಅವಾಂತರ ನಮ್ಮ ನೆರೆಯ ಗೋವಾದಿಂದ ವರದಿಯಾಗಿದೆ.
Hahaha. @googlemaps what's the route to Baga beach? 😀
— Sumanth Raj Urs (@sumanthrajurs) February 16, 2019
Photo credits: masud. pic.twitter.com/0K2wK2TQD2
ಮೇಲ್ಕಂಡ ಫೋಟೋವನ್ನು ಸುಮಂತ್ ರಾಜ್ ಅರಸ್ ಎಂಬವರು ಟ್ವೀಟ್ ಮಾಡಿರುವುದು ಇದೀಗ ವೈರಲ್ ಆಗಿದೆ.
ಬಾಗಾ ಬೀಚ್ ಎಂಬುವುದು ಗೋವಾದ ಪ್ರಸಿದ್ಧ ಬೀಚ್‌ಗಳಲ್ಲೊಂದು. ಆದರೆ ಗೂಗಲ್ ಮ್ಯಾಪ್ ಮೂಲಕ ಹುಡುಕಿಕೊಂಡು ಹೋದರೆ ನೀವು ದಾರಿತಪ್ಪುವುದು ಖಂಡಿತ ಎಂಬಂತಿತ್ತು ಪರಿಸ್ಥಿತಿ. ಗೂಗಲ್‌ನ ‘ಡ್ಯಾಮೇಜ್ ಕಂಟ್ರೋಲ್’ ಮಾಡೋದು ಉದ್ದೇಶನೋ ಅಥವಾ ದಾರಿತಪ್ಪಿದವರ ಕಿರಿಕಿರಿಯಿಂದ ಪಾರಾಗುವ ಉಪಾಯನೋ ಗೊತ್ತಿಲ್ಲ, ಅದಕ್ಕಾಗಿ ಸ್ಥಳೀಯರು ಸೇರಿ ಈ ಬ್ಯಾನರನ್ನು ಕಟ್ಟಿದ್ದಾರೆ.
ಇದನ್ನೂ ಓದಿ: ಎಲ್ಲರ ಬಳಿ ಇರುವ ಈ ಮೊಬೈಲ್ ಆ್ಯಪ್ ಬಳಸಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ..!
ಗೂಗಲ್ ನಿಮ್ಮನ್ನು ಮೂರ್ಖನಾಗಿಸುತ್ತಿದೆ. ಈ ರಸ್ತೆ ಬಾಗಾ ಬೀಚ್‌ಗೆ ಹೋಗಲ್ಲ. ಇಲ್ಲಿಂದ ಹಿಂತಿರುಗಿ, ಎಡ ಬದಿ ತಿರುಗಿ. 1 ಕಿ.ಮೀ. ಕ್ರಮಿಸಿದರೆ ಬಾಗಾ ಬೀಚ್ ಸಿಗುತ್ತೆ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.
ಮಸೂದ್ ಎಂಬವರು ಈ ಫೋಟೋ ತೆಗೆದಿದ್ದಾರೆ. ಯಾವಾಗ ಕ್ಲಿಕ್ಕಿಸಿದ್ದಾರೆ ಗೊತ್ತಿಲ್ಲ, ಆದರೆ ಗೂಗಲ್ ತನ್ನ ತಪ್ಪನ್ನು ಈಗಾಗಲೇ ಸರಿಪಡಿಸಿಕೊಂಡಿದೆ ಎನ್ನಲಾಗಿದೆ.
ಹಾಗಾಗಿ, ಯಾವುದೇ ತಂತ್ರಜ್ಞಾನವಿರಲಿ, ಎಷ್ಟೇ ಮುಂದುವರಿದಿರಲಿ, ಬಳಕೆದಾರರು ತಮ್ಮ ಬುದ್ದಿಯನ್ನು ಕೆಲವೊಮ್ಮೆ ಉಪಯೋಗಿಸಲೇಬೇಕು. ಇಲ್ಲದಿದ್ದರೆ ತಾಪತ್ರಯ ಕಟ್ಟಿಟ್ಟ ಬುತ್ತಿ...
ಇದನ್ನೂ ಓದಿ: ಜಾತಕಪಕ್ಷಿಯಂತೆ ಕಾಯ್ತಿದ್ದೀರಾ? ಅಂತೂ ಇಂತೂ Redmi Note 7 ಡೇಟ್ ಬಂತು!