ಧಾರವಾಡದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ವೇಳೆ, ಕರ್ನಾಟಕದಲ್ಲಿ ರಾಜಕಾರಣಿಗಳು ಹೀನಾಯ ಅಪರಾಧಗಳಲ್ಲಿ ಭಾಗಿಯಾಗುವುದು ವಿರಳ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಸಿಬಿಐ ವಾದವನ್ನು ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿದೆ.
ಬೆಂಗಳೂರು (ಜೂ.30): ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ(Karnataka)ದಲ್ಲಿ ಸರ್ಕಾರಿ ಅಧಿಕಾರಿಗಳು(Government official) ಅಥವಾ ರಾಜಕೀಯ ಮುಖಂಡರು(Political Leaders) ಹೀನಾಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅತ್ಯಂತ ವಿರಳ ಎಂದು ಹೈಕೋರ್ಟ್(Karnataka HC) ಸೋಮವಾರ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಧಾರವಾಡ ಯೋಗೀಶ್ ಗೌಡ ಕೊಲೆ ಪ್ರಕರಣ:
ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ತಮಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಬೇಕು ಎಂದು ಕೋರಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ(Vinay kulkarni) ಮತ್ತು ಚಂದ್ರಶೇಖರ್ ಇಂಡಿ ಸಲ್ಲಿಸಿರುವ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಜಿ. ಬಸವರಾಜ ಅವರ ವಿಭಾಗೀಯ ಪೀಠ ಸೋಮವಾರವೂ ಮುಂದೂಡಿತು. ಸಿಬಿಐ ಪರ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ವಾದಿಸಿದರು. ಆಗ ನ್ಯಾಯಮೂರ್ತಿ ನವಾಜ್ ಅವರು, ಸರ್ಕಾರಿ ಅಧಿಕಾರಿಗಳು ಅಥವಾ ರಾಜಕಾರಣಿಗಳು ಹೀನಾಯ ಕೃತ್ಯಗಳಲ್ಲಿ ಭಾಗವಹಿಸುವುದು ಬೇರೆ ರಾಜ್ಯಗಳಲ್ಲಿ ಹೆಚ್ಚು. ಕರ್ನಾಟಕದಲ್ಲಿ ಇದು ವಿರಳ ಎಂದರು.
ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಹೇಯ ಕೃತ್ಯಗಳಲ್ಲಿ ಭಾಗಿಯಾಗಿರುವ ಉದಾಹರಣೆಗಳಿವೆ. ಇಂತಹ ಘೋರ ಕೃತ್ಯಗಳನ್ನು ಒಪ್ಪಲಾಗದು. ಇದು ಎಲ್ಲಾ ಕಡೆ ಇದ್ದು, ಕೆಲ ಕಾರಣಗಳಿಗೆ ಕೆಲ ಸಂದರ್ಭದಲ್ಲಿ ಕೆಲವರು ಪಾರಾಗುತ್ತಾರೆ. ಕೆಲವರು ಆರೋಪಿಗಳಾದರೂ ಕೆಲವರು ಮಾತ್ರ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ನುಡಿಯಿತು.
ಆಗ ಎಸ್.ವಿ.ರಾಜು ಅವರು, ಕರ್ನಾಟಕದಲ್ಲಿ ಹೀನ ಕೃತ್ಯಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಭಾಗಿಯಾಗುವುದು ಕಡಿಮೆ ಎಂದು ಕೇಳಲು ಸಂತೋಷವಾಗುತ್ತದೆ. ತಾನು ಶಾಸಕ ಎಂದ ಮಾತ್ರಕ್ಕೆ ಏನು ಮಾಡಿದರೂ ಗೆದ್ದುಕೊಳ್ಳಬಲ್ಲೆ ಎಂಬುದಕ್ಕೆ ಅವಕಾಶ ನೀಡಬಾರದು. ಹೀಗಾಗಿ, ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿದರೆ ಪ್ರಭಾವಿಯಾಗಿರುವುದರಿಂದ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ದಟ್ಟವಾಗಲಿದೆ. ಅದನ್ನು ಮೊಗ್ಗಿನಲ್ಲೇ ಚಿವುಟಿ ಹಾಕಬೇಕು. ಭ್ರಷ್ಟ ರಾಜಕಾರಣಿಗಳನ್ನು ಸರ್ಕಾರಗಳೇ ರಕ್ಷಿಸಿರುವ ಸಾಕಷ್ಟು ಪ್ರಕರಣಗಳಿವೆ. ಸರ್ಕಾರ ಬದಲಾದ ತಕ್ಷಣ ಪ್ರಾಸಿಕ್ಯೂಷನ್‌ಗೆ ಅನುಮತಿಸಿದ್ದನ್ನು ಹಿಂಪಡೆದಿರುವ ಉದಾಹರಣೆ ಇದೆ ಎಂದರು. ಅಂತಿಮವಾಗಿ ನ್ಯಾಯಾಲಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.


