ಭ್ರಷ್ಟಾಚಾರ, ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಆರೋಪಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸಿದ ಬಗ್ಗೆ ಸಾಕ್ಷ್ಯ ಇರುವುದು ಕಡ್ಡಾಯ ಎಂದಿದೆ. ರೈತನಿಗೆ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸರ್ಕಾರಿ ನೌಕರ ಖುಲಾಸೆ ಪ್ರಕರಣದ ಬಗ್ಗೆ ತಿಳಿಯಿರಿ.

ಬೆಂಗಳೂರು (ಜೂ.30): ರಾಜ್ಯಾದ್ಯಂತ ಲೋಕಾಯುಕ್ತ ಮಿಂಚಿನ ದಾಳಿ ನಡೆಸಿ ಕರ್ನಾಟಕ ಲೋಕಾಯುಕ್ತರು ಭ್ರಷ್ಟರ ಹೆಡೆಮುರಿ ಕಟ್ಟುತ್ತಿದ್ದರೂ ಇಲಾಖೆಗಳಲ್ಲಿ ಭ್ರಷ್ಟಾಚಾರ, ಲಂಚಕ್ಕೆ ಬೇಡಿಕೆಗೆ ಕಡಿವಾಣ ಬಿದ್ದಿಲ್ಲ. ಇದೀಗ ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಹೈಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭ್ರಷ್ಟಾಚಾರ, ಲಂಚಕ್ಕೆ ಬೇಡಿಕೆಗೆ ಸ್ವೀಕರಿಸಿದ ಸಾಕ್ಷ್ಯ ಕಡ್ಡಾಯ:

ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಸರ್ಕಾರಿ ಅಧಿಕಾರಿಗಳಿಂದ ಕೇವಲ ಹಣ ವಶಪಡಿಸಿಕೊಂಡರೆ ಅಪರಾಧ ಸಾಬೀತಾಗುವುದಿಲ್ಲ. ಆರೋಪಿಗಳು ಲಂಚಕ್ಕೆ ಬೇಡಿಕೆಯಿಟ್ಟ ಮತ್ತು ಸ್ವೀಕರಿಸಿದ ಸಾಕ್ಷ್ಯಗಳು ಕಡ್ಡಾಯವಾಗಿರಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?

ಭ್ರಷ್ಟಾಚಾರ ಕೇಸಲ್ಲಿ ಚಿಕ್ಕಬಳ್ಳಾಪುರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಮಗೆ ವಿಧಿಸಿದ್ದ ಶಿಕ್ಷೆ ರದ್ದು ಕೋರಿ ಶಿಡ್ಲಘಟ್ಟ ತಾಲೂಕು ಕಚೇರಿ ಬೆರಳಚ್ಚುಗಾರ ಜಯಚಂದ್ರ ಎಂಬವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿ ಲಂಚ ಪಡೆದ ಆರೋಪದಿಂದ ಜಯಚಂದ್ರನನ್ನು ಖುಲಾಸೆಗೊಳಿಸಿದೆ.

ಪ್ರಕರಣದ ವಿವರ:

ಪ್ರಕರಣದ ದೂರುದಾರ ರೈತರೊಬ್ಬರು ತಮ್ಮ ಟ್ರ್ಯಾಕ್ಟರ್ ನೋಂದಣಿ ಮಾಡಬೇಕಿತ್ತು. ಅದಕ್ಕೆ ತಾವು ಕೃಷಿಕರೆಂಬುದನ್ನು ದೃಢೀಕರಿಸಿ ಪ್ರಮಾಣಪತ್ರ ವಿತರಿಸುವಂತೆ ಕೋರಿ ಶಿಡ್ಲಘಟ್ಟ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ತಹಸೀಲ್ದಾರ್ ಅವರು ಪ್ರಮಾಣಪತ್ರ ನೀಡಲು ಶಿಫಾರಸು ಮಾಡಿದ್ದ ಕಡತ ಕಚೇರಿಯ ಗುಮಾಸ್ತರಾಗಿದ್ದ ಜಯಚಂದ್ರ ಅವರ ಬಳಿ ಇತ್ತು. ಈ ಪ್ರಮಾಣಪತ್ರ ನೀಡಲು ಜಯಚಂದ್ರ ಒಂದು ಸಾವಿರ ರು. ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ರೈತ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, 2006ರ ನ.29ರಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಹಣ ಸ್ವೀಕರಿಸುತ್ತಿದ್ದಾಗ ಜಯಚಂದ್ರ ಅವರನ್ನು ವಶಕ್ಕೆ ಪಡೆದಿದ್ದರು. ಆತನಿಗೆ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಆ ಆದೇಶ ರದ್ದು ಕೋರಿ ಜಯಚಂದ್ರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಹಣ ವಶಪಡಿಸಿಕೊಂಡು ಅಪರಾಧ ನಿರ್ಣಯ ಮಾಡುವುದು ತಾರ್ಕಿಕವಲ್ಲ, ಈ‌ ಪ್ರಕರಣದಲ್ಲಿ ಆರೋಪಿಗೆ ದೂರುದಾರರು ತಮಗೆ ಪ್ರಮಾಣ ಪತ್ರ ಸಿಕ್ಕ ನಂತರ ತಾವಾಗಿಯೇ ಒಂದು ಸಾವಿರ ರು. ನೀಡಿದ್ದಾಗಿ ಹೇಳಿದ್ದಾರೆಯೇ ಹೊರತು, ಆರೋಪಿಯು ಹಣಕ್ಕಾಗಿ ಪಟ್ಟು ಹಿಡಿದಿದ್ದ ಬಗ್ಗೆ ಸಾಕ್ಷ್ಯ ನುಡಿದಿಲ್ಲ. ಅತ್ತ ನೆರಳು (ಶ್ಯಾಡೋ) ಸಾಕ್ಷಿಯಾಗಿ ಹೋಗಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯೂ ಸಹ, ಆರೋಪಿ ಪ್ರಮಾಣಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.

ಲಂಚದ ಬೇಡಿಕೆಯೇ ಇಲ್ಲದ ಸಂದರ್ಭದಲ್ಲಿ ಕೇವಲ ಹಣ ವಶಪಡಿಸಿಕೊಳ್ಳಲಾಗಿದೆ ಎಂಬ ಕಾರಣಕ್ಕೆ ಅಪರಾಧ ನಿರ್ಣಯ ಮಾಡುವುದು ತಾರ್ಕಿಕವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಜಯಚಂದ್ರಗೆ ಅಧೀನ ನ್ಯಾಯಾಲಯ ವಿಧಿಸಿದ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದೆ.