ಸೂಡಾನ್‌ನಿಂದ ಕರ್ನಾಟಕಕ್ಕೆ ಬಂದವರಲ್ಲಿ ಹಳದಿ ಜ್ವರದ ಭೀತಿ..!

ಗಲಭೆ ಪೀಡಿತ ಸೂಡಾನ್‌ ಸೇರಿದಂತೆ ಸೌತ್‌ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, ರಿಪಬ್ಲಿಕ್‌ ಆಫ್‌ ಕಾಂಗೋ, ದಕ್ಷಿಣ ಅಮೆರಿಕಾದ ಕೆಲ ಭಾಗದಲ್ಲಿ ಹಳದಿ ಜ್ವರ ಹೆಚ್ಚಾಗಿದೆ. ಹೀಗಾಗಿ, ಈ ದೇಶಗಳಿಂದ ಆಗಮಿಸುವವರಿಗೆ ಹಳದಿ ಜ್ವರದ ಲಸಿಕೆ ಕಡ್ಡಾಯವಾಗಿದೆ. 

Yellow Fever Scare Who Came From Sudan to Karnataka grg

ಬೆಂಗಳೂರು(ಏ.29):  ಆತಂರಿಕ ಯುದ್ಧಪೀಡಿತ ಸೂಡಾನ್‌ನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ ಭಾರತೀಯರ ಪೈಕಿ ಸುಮಾರು 45 ಮಂದಿ ಹಳದಿ ಜ್ವರದ ಲಸಿಕೆ (ಎಲ್ಲೋ ಫೀವರ್‌) ಪಡೆಯದಿರುವುದು ಆತಂಕಕ್ಕೀಡು ಮಾಡಿಸಿದೆ. ಗಲಭೆ ಪೀಡಿತ ಸೂಡಾನ್‌ ಸೇರಿದಂತೆ ಸೌತ್‌ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, ರಿಪಬ್ಲಿಕ್‌ ಆಫ್‌ ಕಾಂಗೋ, ದಕ್ಷಿಣ ಅಮೆರಿಕಾದ ಕೆಲ ಭಾಗದಲ್ಲಿ ಹಳದಿ ಜ್ವರ ಹೆಚ್ಚಾಗಿದೆ. ಹೀಗಾಗಿ, ಈ ದೇಶಗಳಿಂದ ಆಗಮಿಸುವವರಿಗೆ ಹಳದಿ ಜ್ವರದ ಲಸಿಕೆ ಕಡ್ಡಾಯವಾಗಿದೆ. ಆದರೆ, ‘ಆಪರೇಷನ್‌ ಕಾವೇರಿ’ ಕಾರ್ಯಾಚರಣೆಯಡಿ ಶುಕ್ರವಾರ ಸೂಡಾನ್‌ನಿಂದ ಬೆಂಗಳೂರಿಗೆ ಬಂದ 362 ಮಂದಿ ಪೈಕಿ 45 ಮಂದಿಯು ಹಳದಿ ಜ್ವರದ ಲಸಿಕೆ ಪಡೆಯದಿರುವುದು ಆರೋಗ್ಯ ತಪಾಸಣೆ ವೇಳೆ ಕಂಡು ಬಂದಿದೆ. ಹೀಗಾಗಿ, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌:

ಹಳದಿ ಜ್ವರದ ಲಸಿಕೆ ಪಡೆಯದ 45 ಮಂದಿಯನ್ನು ಬೆಂಗಳೂರಿನ ರಾಜೀವ್‌ ಗಾಂಧಿ ಹೃದ್ರೋಗ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. 45 ಮಂದಿಯನ್ನು ಸುರಕ್ಷಿತವಾಗಿ ಶುಕ್ರವಾರ ಆಸ್ಪತ್ರೆಗೆ ಕರೆತರಲಾಗಿದೆ. ಹಳದಿ ಜ್ವರಕ್ಕೆ ಸಂಬಂಧಿಸಿದಂತೆ ಒಟ್ಟು ಆರು ದಿನ ಕ್ವಾರಂಟೈನ್‌ ಮಾಡಬೇಕು. ಆದರೆ, ಈಗಾಗಲೇ ಸೂಡಾನ್‌ನಿಂದ ಪ್ರಯಾಣದ ಅವಧಿಯಲ್ಲಿ ಎರಡು ದಿನ ಕಳೆದಿದ್ದಾರೆ. ಹೀಗಾಗಿ, ಮೂರರಿಂದ ನಾಲ್ಕು ದಿನ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಹಳದಿ ಜ್ವರದ ಲಕ್ಷಣಗಳು ಪತ್ತೆಯಾಗದಿದ್ದರೆ, ಕ್ವಾರಂಟೈನ್‌ ಮುಕ್ತಗೊಳಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಸುಡಾನ್ ನಲ್ಲಿ ಸಿಲುಕಿದ್ದ 362 ಕನ್ನಡಿಗರು ತವರಿಗೆ, ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಹೆಲ್ತ್ ಕಮಿಷನರ್

ಕನ್ನಡಿಗರೆಲ್ಲ ಲಸಿಕೆ ಪಡೆದಿದ್ದಾರೆ:

ಶುಕ್ರವಾರ ಬೆಂಗಳೂರಿಗೆ ಆಗಮಿಸಿದ 362 ಮಂದಿಯ ಪೈಕಿ 114 ಮಂದಿ ಕರ್ನಾಟಕದವರಿದ್ದಾರೆ. ಕರ್ನಾಟಕದವರು ಆರೋಗ್ಯ ತಪಾಸಣೆ ವೇಳೆ ಹಳದಿ ಜ್ವರಕ್ಕೆ ಲಸಿಕೆ ಪಡೆದುಕೊಂಡಿರುವ ಬಗ್ಗೆ ಪ್ರಮಾಣ ಪತ್ರವನ್ನು ಆರೋಗ್ಯ ಇಲಾಖೆಗೆ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ, ಎಲ್ಲ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಹಳದಿ ಜ್ವರದ ಲಸಿಕೆ ಪಡೆಯದವರೆಲ್ಲರೂ ಹೊರ ರಾಜ್ಯದವಾಗಿದ್ದಾರೆ.

ಹಳದಿ ಜ್ವರದ ಲಕ್ಷಣ

ಹಳದಿ ಜ್ವರದ ಅತ್ಯಂತ ಗುರುತಿಸಬಹುದಾದ ಲಕ್ಷಣವೆಂದರೆ ಚರ್ಮ ಮತ್ತು ಕಣ್ಣುಗಳು ಹಳದಿ (ಕಾಮಾಲೆ) ಬಣ್ಣಕ್ಕೆ ತಿರುಗುವುದು. ಮಾತ್ರವಲ್ಲ ಜ್ವರ ತರಹದ ಲಕ್ಷಣಗಳು ಸ್ನಾಯು ನೋವು, ತಲೆನೋವು, ವಾಕರಿಕೆ ಮತ್ತು ವಾಂತಿಯನ್ನು ಒಳಗೊಂಡಿರಬಹುದು. ಹಳದಿ ಜ್ವರ ಬಂದರೆ ಸುಮಾರು 15 ಪ್ರತಿಶತದಷ್ಟುಜನರು ರಕ್ತಸ್ರಾವ, ಆಘಾತ, ಅಂಗಾಂಗ ವೈಫಲ್ಯ ಮತ್ತು ಕೆಲವೊಮ್ಮೆ ಸಾವಿಗೆ ಕಾರಣವಾಗುವ ಗಂಭೀರ ರೋಗ ಲಕ್ಷಣಗಳನ್ನು ಅನುಭವಿಸುತ್ತಾರೆ.

ಸೂಡಾನ್‌ನಿಂದ ಬೆಂಗಳೂರಿಗೆ ಆಗಮಿಸಿದವರ ಪೈಕಿ 45 ಮಂದಿಯ ಬಳಿ ಹಳದಿ ಜ್ವರ ಲಸಿಕೆ ಪಡೆದ ಪ್ರಮಾಣ ಪತ್ರವಿಲ್ಲ. ಹಾಗಾಗಿ, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಮೂರ್ನಾಲ್ಕು ದಿನ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಅವರೆಲ್ಲರೂ ಹೊರ ರಾಜ್ಯದವರಾಗಿದ್ದಾರೆ ಅಂತ ಆರೋಗ್ಯ ಇಲಾಖೆ ಆಯುಕ್ತ ಡಾ.ಡಿ.ರಂದೀಪ್‌ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios