ಯಾದಗಿರಿ ಜಿಲ್ಲೆಯ ಕೆಂಭಾವಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕರು, ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿನಿಯರೊಂದಿಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಅರೆಬೆತ್ತಲೆಯಾಗಿ ಮೋಜು-ಮಸ್ತಿ ಮಾಡಿದ್ದಾರೆ. ಈ ಅಸಭ್ಯ ವರ್ತನೆಗೆ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ
ಯಾದಗಿರಿ (ಡಿ.22): ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕಾದ ಶಿಕ್ಷಕರೇ, ಪ್ರವಾಸದ ವೇಳೆ ಅರೆಬೆತ್ತಲೆಯಾಗಿ ವಿದ್ಯಾರ್ಥಿನಿಯರೊಂದಿಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೋಜು-ಮಸ್ತಿ ಮಾಡುವ ಮೂಲಕ ನೈತಿಕ ಅಧಃಪತನ ಮೆರೆದಿದ್ದಾರೆ.
ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕರ ಜಲಕ್ರೀಡೆ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕರು ಶೈಕ್ಷಣಿಕ ಪ್ರವಾಸದ ಹೆಸರಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಜಲಕ್ರೀಡೆಯಲ್ಲಿ ತೊಡಗಿದ್ದಾರೆ. 9 ಮತ್ತು 10ನೇ ತರಗತಿಯ ಒಟ್ಟು 93 ವಿದ್ಯಾರ್ಥಿನಿಯರನ್ನು ಮೂರು ದಿನಗಳ ಕಾಲ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿದ್ದ ಸ್ವಿಮ್ಮಿಂಗ್ ಪೂಲ್‌ಗೆ ಅರೆಬೆತ್ತಲೆಯಾಗಿ ಇಳಿದ ಶಿಕ್ಷಕರು, ಅವರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ.
ನಾಲ್ವರು ಶಿಕ್ಷಕರ ಅಸಭ್ಯ ವರ್ತನೆ
ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಂಬಿ ಪಾಟೀಲ್, ಶಿಕ್ಷಕರಾದ ಯಮೇಶ್, ಗುರುರಾಜ್ ಕುಲಕರ್ಣಿ ಮತ್ತು ಓರ್ವ ಅತಿಥಿ ಶಿಕ್ಷಕ ಸೇರಿ ನಾಲ್ವರು ಈ ಅಸಭ್ಯವಾಗಿ ವರ್ತಿಸಿದ್ದಾರೆ. ಹೆಣ್ಣು ಮಕ್ಕಳ ಸುರಕ್ಷತೆಯ ಜವಾಬ್ದಾರಿ ಹೊತ್ತಿದ್ದ ಶಿಕ್ಷಕರೇ ಮರ್ಯಾದೆ ಬಿಟ್ಟು ವಿದ್ಯಾರ್ಥಿನಿಯರೊಂದಿಗೆ ಸ್ನಾನಕ್ಕಿಳಿದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋಗಳನ್ನು ಸ್ಟೇಟಸ್ ಹಾಕಿಕೊಂಡ ಶಿಕ್ಷಕರು!
ತಮ್ಮ ಅಸಭ್ಯ ನಡವಳಿಕೆಯ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲದ ಈ ಶಿಕ್ಷಕರು, ವಿದ್ಯಾರ್ಥಿನಿಯರೊಂದಿಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೋಜು ಮಾಡಿದ ವಿಡಿಯೋಗಳನ್ನು ತಮ್ಮ ಮೊಬೈಲ್ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದರು. ಶಿಕ್ಷಕರ ಮೊಬೈಲ್ ಸ್ಟೇಟಸ್ ನೋಡಿದ ಪೋಷಕರು ಮತ್ತು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ವಿದ್ಯಾರ್ಥಿನಿಯರ ಪಾಲಿನ ರಕ್ಷಕರೇ ಇಂತಹ ಕೀಳುಮಟ್ಟದ ಕೆಲಸಕ್ಕೆ ಕೈಹಾಕಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯ ಶಿಕ್ಷಕ ಸೇರಿ ನಾಲ್ವರ ಅಮಾನತಿಗೆ ಆಗ್ರಹ
ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೆಂಭಾವಿ ಭಾಗದ ಪೋಷಕರು ಶಿಕ್ಷಕರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕೂಡಲೇ ಮುಖ್ಯ ಶಿಕ್ಷಕ ಎಂಬಿ ಪಾಟೀಲ್ ಸೇರಿದಂತೆ ಘಟನೆಯಲ್ಲಿ ಭಾಗಿಯಾದ ನಾಲ್ವರು ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸುತ್ತಿದ್ದು, ಶಾಲಾ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.


