ಭಾರತೀಯ ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯದ ಐತಿಹಾಸಿಕ ಹೋರಾಟವನ್ನು ಈ ಲೇಖನ ವಿಶ್ಲೇಷಿಸುತ್ತದೆ. ಸ್ಥಳೀಯ ಸಂಸ್ಥೆಗಳ ಮೀಸಲಾತಿಯ ಯಶಸ್ಸಿನಿಂದ ಹಿಡಿದು, 'ನಾರಿಶಕ್ತಿ ವಂದನಾ ಕಾಯ್ದೆ'ಯ ಮೂಲಕ ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ಉಳಿಸದೆ, ನಿರ್ಣಾಯಕ ಶಕ್ತಿಯಾಗಿ ರೂಪಿಸುವ ದೂರದೃಷ್ಟಿ ಚರ್ಚಿಸುತ್ತದೆ.
-ಡಾ। ಎಂ.ಆರ್.ವೆಂಕಟೇಶ್
ಭಾರತೀಯ ಸಮಾಜದಲ್ಲಿ ಮಹಿಳೆಯರ ಪಾತ್ರದ ಕುರಿತು ನಡೆಯುತ್ತಿರುವ ಚರ್ಚೆಗಳು ಹೊಸದಾಗಿ ಹುಟ್ಟಿದವುಗಳಲ್ಲ. ಅವು ನಮ್ಮ ನಾಗರಿಕತೆಯ ಅಂತರಂಗದಲ್ಲೇ ಬೇರು ಬಿಟ್ಟಿರುವ ಪ್ರಶ್ನೆಗಳು. ಶಕ್ತಿಯ ತತ್ವವನ್ನು ಪೂಜಿಸುವ ಸಂಸ್ಕೃತಿಯೊಂದರಲ್ಲಿ, ಆ ಶಕ್ತಿಗೆ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ಸಮರ್ಪಕ ಸ್ಥಾನ ಸಿಕ್ಕಿದೆಯೇ ಎಂಬ ಪ್ರಶ್ನೆ ಕಾಲಕಾಲಕ್ಕೆ ಮರುಕಳಿಸುತ್ತಲೇ ಬಂದಿದೆ. ಇತಿಹಾಸವನ್ನು ತಿರುಗಿ ನೋಡಿದರೆ, ಮಹಿಳೆ ಕೇವಲ ಕುಟುಂಬದ ಅಂತರಾಳದಲ್ಲಷ್ಟೇ ಅಲ್ಲ, ಆಡಳಿತ ಮತ್ತು ನಾಯಕತ್ವದ ಶಿಖರದಲ್ಲಿಯೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾಳೆ. ಅಹಲ್ಯಾಬಾಯಿ ಹೋಳ್ಕರ್ ಅವರ ಸೂಕ್ಷ್ಮ ಆಡಳಿತ, ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ತ್ಯಾಗ- ಇವು ಕೇವಲ ಕಥೆಗಳಲ್ಲ, ಮಹಿಳಾ ನಾಯಕತ್ವದ ಜೀವಂತ ಸಾಕ್ಷ್ಯಗಳು. ಈ ಉದಾಹರಣೆಗಳು ಮಹಿಳೆಯ ನಾಯಕತ್ವವು ಯಾವಾಗಲೋ ಒಮ್ಮೆ ಕಾಣಸಿಗುವ ಓಯಾಸಿಸ್ ಅಲ್ಲ, ಅವಕಾಶ ದೊರೆತಾಗ ಅದು ಸಹಜವಾಗಿಯೇ ಅರಳುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಂಡ ನಂತರ ಒಂದು ವಿಚಿತ್ರ ವಿರೋಧಾಭಾಸ ಭಾರತದಲ್ಲಿ ಕಾಣಿಸಿತು. ಸೈದ್ಧಾಂತಿಕವಾಗಿ ಮಹಿಳೆಯರಿಗೆ ರಾಜಕೀಯ ಹಕ್ಕುಗಳು ಸಮಾನವಾಗಿದ್ದರೂ, ಪ್ರಾತಿನಿಧ್ಯದಲ್ಲಿ ಅಸಮಾನತೆ ಮುಂದುವರಿಯಿತು. ಸಂವಿಧಾನ ಶಿಲ್ಪಿ ಡಾ। ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನ ಮತದಾನದ ಹಕ್ಕು ನೀಡುವ ಮೂಲಕ ಸಮಾನತೆಯ ಬಾಗಿಲು ತೆರೆದರು. ಆದರೆ, ಆ ಬಾಗಿಲಿನ ಒಳಗೆ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸುವುದಕ್ಕೆ ರಾಜಕೀಯ ವ್ಯವಸ್ಥೆಯ ಒಳಗಿನ ಅಡೆತಡೆಗಳು ಇನ್ನೂ ಉಳಿದುಕೊಂಡವು.
ಸ್ವಾತಂತ್ರ್ಯಾನಂತರದ ಚುನಾವಣೆಗಳ ಇತಿಹಾಸವನ್ನು ಗಮನಿಸಿದರೆ, ಮಹಿಳೆಯರ ಪ್ರಾತಿನಿಧ್ಯ ನಿಧಾನವಾಗಿ ಏರಿಕೆ ಆದರೂ ಅದು ತೃಪ್ತಿಕರ ಮಟ್ಟ ತಲುಪಲಿಲ್ಲ. ಮೊದಲ ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಪ್ರಮಾಣ ಕೇವಲ ಸುಮಾರು ಶೇ.5 ಮಾತ್ರವಿತ್ತು. 2019ರ ಲೋಕಸಭೆ ಚುನಾವಣೆಯ ವೇಳೆಗೆ ಅದು ಸುಮಾರು ಶೇ.14ರ ಮಟ್ಟಕ್ಕೆ ಏರಿಕೆಯಾಯಿತು. ಸಂಖ್ಯಾತ್ಮಕವಾಗಿ ಇದು ಏರಿಕೆಯಾಗಿದ್ದರೂ, ಸಮಾಜದ ಅರ್ಧಭಾಗಕ್ಕೆ ಇದು ಇನ್ನೂ ಅಪೂರ್ಣ ಪ್ರಾತಿನಿಧ್ಯವೇ ಆಗಿದೆ. ಆದರೆ ಇಲ್ಲಿ ಒಂದು ಗಮನಾರ್ಹ ಬದಲಾವಣೆ ಇದೆ. ಮಹಿಳಾ ಮತದಾರರ ಭಾಗವಹಿಸುವಿಕೆಯಲ್ಲಿ ಹೆಚ್ಚಳ. ಇತ್ತೀಚಿನ ಚುನಾವಣೆಗಳಲ್ಲಿ ಮಹಿಳೆಯರ ಮತದಾನ ಪ್ರಮಾಣವು ಪುರುಷರನ್ನು ಸಮನಾಗಿಯೇ ಅಥವಾ ಕೆಲವು ರಾಜ್ಯಗಳಲ್ಲಿ ಮೀರಿಯೇ ಇದೆ. ಅಂದರೆ, ಪ್ರಜಾಪ್ರಭುತ್ವದ ‘ಮತದಾರ’ ಹಂತದಲ್ಲಿ ಮಹಿಳೆ ಸಕ್ರಿಯಳಾಗಿದ್ದರೂ, ‘ನಿರ್ಣಾಯಕ’ ಹಂತದಲ್ಲಿ ಇನ್ನೂ ಹಿಂದೆ ಉಳಿದಿದ್ದಾಳೆ. ಈ ವ್ಯತ್ಯಾಸವೇ ಮಹಿಳಾ ಮೀಸಲಾತಿಯ ಅವಶ್ಯಕತೆಯನ್ನು ಮತ್ತಷ್ಟು ಗಟ್ಟಿಯಾಗಿ ಸೂಚಿಸುತ್ತದೆ.
ಈ ಅಂತರವನ್ನು ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ಹೆಜ್ಜೆ ಎಂದರೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವುದಾಗಿತ್ತು. 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಶೇ.33ರಷ್ಟು ಮೀಸಲಾತಿ ನೀಡಲಾಯಿತು. ಹಲವು ರಾಜ್ಯಗಳು ಅದನ್ನು ಶೇ.50ರವರೆಗೆ ಹೆಚ್ಚಿಸಿವೆ. ಇದರ ಪರಿಣಾಮವಾಗಿ ಇಂದು ದೇಶದಾದ್ಯಂತ ಸುಮಾರು 14 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸ್ಥಳೀಯ ಆಡಳಿತದಲ್ಲಿ ಆಯ್ಕೆಯಾಗಿದ್ದಾರೆ. ಇದು ವಿಶ್ವದ ಅತಿದೊಡ್ಡ ಮಹಿಳಾ ರಾಜಕೀಯ ಸಬಲೀಕರಣದ ಪ್ರಯೋಗಗಳಲ್ಲಿ ಒಂದಾಗಿದೆ. ಹಲವು ಅಧ್ಯಯನಗಳು ತೋರಿಸಿದಂತೆ, ಮಹಿಳೆಯರು ಆಡಳಿತದಲ್ಲಿದ್ದ ಗ್ರಾಮಗಳಲ್ಲಿ ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕತೆ ಮುಂತಾದ ಮೂಲಭೂತ ಅಗತ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಂದರೆ, ಮಹಿಳೆಯರ ಪ್ರಾತಿನಿಧ್ಯವು ನೀತಿಯ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಇಲ್ಲಿ ಪ್ರಾತಿನಿಧ್ಯವು ಕೇವಲ ಸ್ಥಾನವಲ್ಲ, ಅದು ಅನುಭವಗಳ ಪ್ರತಿನಿಧಿತ್ವ ಎಂಬ ತಾತ್ತ್ವಿಕ ಅರ್ಥ ಸ್ಪಷ್ಟವಾಗುತ್ತದೆ.
ಒಂದು ಕಾಲದಲ್ಲಿ ಸಾಮಾಜಿಕ ಚಳವಳಿಗಳ ಒತ್ತಡದಿಂದಾದರೂ ಸುಧಾರಣೆಗಳನ್ನು ಅಳವಡಿಸಿಕೊಂಡ ಕಾಂಗ್ರೆಸ್, ಇಂದು ಅದೇ ವಿಷಯಗಳಲ್ಲಿ ನಿರ್ಣಾಯಕ ಇಚ್ಛಾಸಕ್ತಿಯನ್ನು ತೋರಿಸಲು ಹಿಂಜರಿಯುತ್ತಿರುವುದು ಅದರ ಬೌದ್ಧಿಕ ಅಧಃಪತನವನ್ನು ತೋರಿಸುತ್ತಿದೆ. ಇದು ಕೇವಲ ಒಂದು ಪಕ್ಷ ಅಥವಾ ಕಾಲಘಟ್ಟದ ವಿಮರ್ಶೆಯಲ್ಲ. ಬದಲಾಗಿ, ಸಮಕಾಲೀನ ರಾಜಕೀಯದ ಆದ್ಯತೆಗಳ ಕುರಿತು ಎತ್ತುವ ಒಂದು ಮೂಲಭೂತ ಪ್ರಶ್ನೆಯಾಗಿದೆ.
ಮೋದಿಯವರ ದೂರದರ್ಶಿತ್ವ:
ಇದೇ ತಾತ್ತ್ವಿಕ ನೆಲೆಯ ಮೇಲೆ 1996ರಲ್ಲಿ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ ಒಂದು ಮಹತ್ವದ ಹೆಜ್ಜೆಯಾಗಿತ್ತು. ಆದರೆ, ಆ ಮಸೂದೆ ರಾಜಕೀಯ ಲೆಕ್ಕಾಚಾರಗಳ ಮಧ್ಯೆ ಸಿಲುಕಿ ದಶಕಗಳ ಕಾಲ ನಿರೀಕ್ಷೆಯಲ್ಲೇ ಉಳಿಯಿತು. ಇದು ಕೇವಲ ಒಂದು ಕಾನೂನು ಪ್ರಕ್ರಿಯೆಯ ವಿಳಂಬವಲ್ಲ. ಸಮಾಜದಲ್ಲಿ ಮಹಿಳೆಯರಿಗೆ ನೀಡಬೇಕಿದ್ದ ಅಧಿಕಾರವನ್ನು ಮುಂದೂಡುವ ಮನೋಭಾವದ ಪ್ರತಿಬಿಂಬವೂ ಆಗಿತ್ತು.
ಈ ಹಿನ್ನೆಲೆಯಲ್ಲಿಯೇ 2023ರಲ್ಲಿ ‘ನಾರಿಶಕ್ತಿ ವಂದನಾ ಕಾಯ್ದೆ’ಯನ್ನು ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದರು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಈ ನಿರ್ಧಾರವು ಪ್ರಜಾಪ್ರಭುತ್ವದ ಗುಣಾತ್ಮಕ ಬದಲಾವಣೆಯತ್ತ ಒಂದು ಹೆಜ್ಜೆ. ಇಲ್ಲಿ ಕೇವಲ ಸಂಖ್ಯಾತ್ಮಕ ಹೆಚ್ಚಳ ಮುಖ್ಯವಲ್ಲ. ನಿರ್ಧಾರ ಪ್ರಕ್ರಿಯೆಯಲ್ಲಿ ಮಹಿಳೆಯರ ದೃಷ್ಟಿಕೋನ ಸೇರಿಕೊಳ್ಳುವುದು ಮುಖ್ಯ. ಸಮಾಜದ ಅರ್ಧಭಾಗದ ಅನುಭವಗಳು, ಅಗತ್ಯಗಳು ಮತ್ತು ಕನಸುಗಳು ನೇರವಾಗಿ ನೀತಿಗಳ ರೂಪದಲ್ಲಿ ಪ್ರತಿಬಿಂಬಿಸುವ ಸಾಧ್ಯತೆ ಇಲ್ಲಿಂದ ಹುಟ್ಟುತ್ತದೆ. ಇದು ಕೇವಲ ಪ್ರಾತಿನಿಧ್ಯವಲ್ಲ, ಪ್ರಜಾಪ್ರಭುತ್ವದ ಆಳವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ ಎನ್ನುವುದನ್ನು ಇದೀಗ ಮಹಿಳಾ ಮಸೂದೆಯನ್ನು ತಡೆದಿರುವ ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ ಮುಂತಾದವು ತಿಳಿಯಬೇಕು.
ಮಹಿಳಾ ಮೀಸಲಾತಿ ಎನ್ನುವುದನ್ನು ಆಧುನಿಕ ಯುಗದ ಸನ್ನಿವೇಶದಲ್ಲಿ ನೋಡಿದರೆ, ಮಹಿಳೆಯರ ಪಾತ್ರವು ಇನ್ನಷ್ಟು ವ್ಯಾಪಕವಾಗಿದೆ. ರಾಜಕೀಯ ಮಾತ್ರವಲ್ಲದೆ, ವಿಜ್ಞಾನ, ರಕ್ಷಣೆ, ಅಂತರಿಕ್ಷ, ಕ್ರೀಡೆ, ಉದ್ಯಮಶೀಲತೆ… ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿ ಕಾಣಿಸುತ್ತಿದ್ದಾರೆ. ಇಸ್ರೋದಲ್ಲಿ ವಿಜ್ಞಾನಿಗಳಾಗಿ, ಸೈನ್ಯದಲ್ಲಿ ಅಧಿಕಾರಿಗಳಾಗಿ, ಸ್ಟಾರ್ಟ್‌ಅಪ್‌ಗಳ ಸ್ಥಾಪಕರಾಗಿ, ಕ್ರೀಡಾಂಗಣದಲ್ಲಿ ಪದಕ ವಿಜೇತರಾಗಿ ಮಹಿಳೆಯರು ದೇಶದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಿದ್ದಾರೆ. ಈ ಬದಲಾವಣೆ ಒಂದು ಮುಖ್ಯ ಸಂದೇಶವನ್ನು ನೀಡುತ್ತದೆ. ಅದೆಂದರೆ, ಅವಕಾಶ ದೊರೆತರೆ ಮಹಿಳೆಯ ಸಾಮರ್ಥ್ಯದಲ್ಲಿ ಯಾವುದೇ ಮಿತಿಯಿಲ್ಲ ಎನ್ನುವುದು. ಆದರೆ, ಈ ಸಾಮರ್ಥ್ಯವು ವ್ಯವಸ್ಥಾತ್ಮಕವಾಗಿ ಪ್ರತಿಬಿಂಬಿಸಬೇಕಾದರೆ, ರಾಜಕೀಯ ಪ್ರಾತಿನಿಧ್ಯವೂ ಅದಕ್ಕೆ ಅನುಗುಣವಾಗಿರಬೇಕು.
ಮಹಿಳಾ ಮೀಸಲಾತಿ ಕೇವಲ ಒಂದು ರಾಜಕೀಯ ನಿರ್ಧಾರವಲ್ಲ. ಅದು ಸಮಾಜದ ಶಕ್ತಿಯ ಹಂಚಿಕೆಯಲ್ಲಿ ನಡೆಯುವ ಮೂಲಭೂತ ಪರಿವರ್ತನೆ. ಇಂತಹ ಪರಿವರ್ತನೆಗಳು ಆರಂಭದಲ್ಲಿ ಕೆಲವರಲ್ಲಿ ಅಸಮಾಧಾನ ಹುಟ್ಟಿಸಿದರೂ, ದೀರ್ಘಾವಧಿಯಲ್ಲಿ ಸಮಾನತೆಯತ್ತ ದಾರಿ ತೋರಿಸುತ್ತವೆ. ಒಂದೆಡೆ ಗ್ಯಾರಂಟಿಯಂತಹ ಆರ್ಥಿಕ ಸಹಾಯ ಯೋಜನೆಗಳ ಮೂಲಕ ಮಹಿಳೆಯರಿಗೆ ನೆರವು ನೀಡುವ ಮಾದರಿಯನ್ನು ಅನುಸರಿಸಲಾಗುತ್ತಿದೆ. ಇವು ತಕ್ಷಣದ ಸಂಕಷ್ಟಗಳಿಗೆ ಪರಿಹಾರ ನೀಡುತ್ತವೆ ಎನ್ನುವುದು ಸರಿ. ಅವುಗಳನ್ನು ಕೀಳಾಗಿಯೇನೂ ಕಾಣಬೇಕಿಲ್ಲ. ಆದರೆ, ಈ ಮಾದರಿ ಮಹಿಳೆಯನ್ನು ಶಾಶ್ವತವಾಗಿ ‘ಫಲಾನುಭವಿ’ ಆಗಿ ಉಳಿಸುವ ಸಾಧ್ಯತೆಯೂ ಇದೆ. ಮತ್ತೊಂದೆಡೆ, ಮಹಿಳೆಯನ್ನು ನಿರ್ಧಾರ ತೆಗೆದುಕೊಳ್ಳುವ ಸ್ಥಾನಕ್ಕೆ ತರುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಇದು ‘ಸಬಲೀಕರಣ’ದ ಆಳವಾದ ರೂಪ. ಇಲ್ಲಿ ಮಹಿಳೆ ಕೇವಲ ಸಹಾಯ ಸ್ವೀಕರಿಸುವವಳಲ್ಲ, ಬದಲಾಗಿ ಸಮಾಜದ ದಿಕ್ಕನ್ನು ನಿರ್ಧರಿಸುವವಳಾಗುತ್ತಾಳೆ. ಯಾವುದು ಮುಖ್ಯ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.
ಕ್ಷೇತ್ರ ಪುನರ್ವಿಂಗಡಣೆ ಏಕೆ?:
ಮಹಿಳಾ ಮೀಸಲಾತಿ ಹೆಚ್ಚಳ ಮಾಡಿದ ಕೂಡಲೇ ಒಂದು ಪ್ರಶ್ನೆ ಎದುರಾಗುತ್ತದೆ. ಇದೀಗ ದೇಶದಲ್ಲಿ ಚಾಲ್ತಿಯಲ್ಲಿರುವ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳು 2001ರ ಜನಗಣತಿ ಆಧಾರದಲ್ಲಿ ರೂಪುಗೊಂಡವು. ಆ ಜನಗಣತಿಯ ಪ್ರಕಾರ ಭಾರತದಲ್ಲಿ 1,028,737,436 (ನೂರು ಕೋಟಿ) ಜನರಿದ್ದರು. ಅದಕ್ಕೆ ಅನುಗುಣವಾಗಿ 543 ಲೋಕಸಭೆ ಕ್ಷೇತ್ರಗಳನ್ನು ರಚಿಸಲಾಗಿತ್ತು. ಇದೀಗ ಭಾರತದ ಜನಸಂಖ್ಯೆ ಅಂದಾಜು 150 ಕೋಟಿ ಆಗಿದೆ. 2008ರ ಜನಗಣತಿ ಆಧಾರದಲ್ಲಿ ಒಂದು ಲೋಕಸಭೆ ಕ್ಷೇತ್ರದ ಸರಾಸರಿ ಜನಸಂಖ್ಯೆ (ಮತದಾರರಲ್ಲ) 18-19 ಲಕ್ಷದಷ್ಟಿತ್ತು. ದೇಶದ ಇಂದಿನ ಜನಸಂಖ್ಯೆಗೆ ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಸರಾಸರಿ 27 ಲಕ್ಷದಷ್ಟಾಗುತ್ತದೆ. ಕೆಲವು ದೊಡ್ಡ ಲೋಕಸಭೆ ಕ್ಷೇತ್ರಗಳಲ್ಲಿ ಈ ಸಂಖ್ಯೆ 32 ಲಕ್ಷವನ್ನೂ ದಾಟಬಹುದು. ಹಾಗಾಗಿ ಹೆಚ್ಚಿನ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಕ್ಷೇತ್ರಗಳನ್ನು ವಿಸ್ತರಿಸುವ ಅನಿವಾರ್ಯತೆ ಇದೆ. ಈ ಹಂತದಲ್ಲಿ ಮಹಿಳಾ ಮೀಸಲಾತಿ ಜಾರಿಯಾದರೆ ಈಗಾಗಲೇ ಇರುವ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಏರುಪೇರಾಗುತ್ತದೆ. ಯಾವ ರಾಜಕಾರಣಿಗಳು ತಮ್ಮ 30-40 ವರ್ಷದ ಜೀವನವನ್ನು ಸಮಾಜಕ್ಕಾಗಿ, ರಾಜಕಾರಣಕ್ಕಾಗಿ ಮೀಸಲಿಟ್ಟು ದುಡಿದಿದ್ದಾರೆಯೋ ಅವರೆಲ್ಲರ ಅನುಭವದ ಲಾಭವೂ ಮುಂದಿನ ಪೀಳಿಗೆಯ ರಾಜಕಾರಣಿಗಳಿಗೆ ದೊರಕುವುದಿಲ್ಲ. ಹೌದು, ಕೆಲವು ರಾಜಕಾರಣಿಗಳು ಬೇಗ ನಿವೃತ್ತರಾದರೇ ಅನುಕೂಲ ಎಂಬ ಆಲೋಚನೆಯೂ ಸಾಮಾನ್ಯರಲ್ಲಿ ಬರುತ್ತದೆ. ಆದರೆ ಅನೇಕ ಹಿರಿಯ, ಅನುಭವಿಗಳು ಇಂದಿಗೂ ಸಮಾಜದ ಸಮತೋಲನವನ್ನು ಕಾಪಾಡುತ್ತಿದ್ದಾರೆ. ಈ ಸಮಯದಲ್ಲಿ ಲೋಕಸಭೆ ಸದಸ್ಯರ ಸಂಖ್ಯೆಯನ್ನೂ ಹೆಚ್ಚಳ ಮಾಡುವುದರಿಂದ ಮೂರೂ ಕಾರ್ಯಗಳು ಒಟ್ಟಿಗೆ ಆಗುತ್ತವೆ. ಮೊದಲನೆಯದಾಗಿ, ಆಡಳಿತಾತ್ಮಕವಾಗಿ ಅನುಕೂಲಕರ ಎನ್ನುವಷ್ಟು ಜನಸಂಖ್ಯೆಯು ಪ್ರತಿ ಲೋಕಸಭಾ ಹಾಗೂ ವಿಧಾನಸಭಾ ಸದಸ್ಯರಿಗೆ ಸಿಕ್ಕುತ್ತದೆ. ಎರಡನೆಯದಾಗಿ, ಅನುಭವಿ ಜನಪ್ರತಿನಿಧಿಗಳ ಕೊರತೆಯೂ ಕಾಣುವುದಿಲ್ಲ. ಮೂರನೆಯದಾಗಿ, ಮಹಿಳೆಯರ ಪ್ರಾತಿನಿಧ್ಯವೂ ಹೆಚ್ಚುತ್ತದೆ.
ಇಂತಹದ್ದೊಂದು ದೂರಗಾಮಿ ಆಲೋಚನೆಯನ್ನು ಇಟ್ಟುಕೊಂಡು, ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಎಲ್ಲ ರಾಜ್ಯಗಳಿಗೂ ಶೇ.50 ಸ್ಥಾನ ಹೆಚ್ಚಿಸುವ ಅತ್ಯಂತ ಪ್ರಾಯೋಗಿಕ ನಿರ್ಧಾರವನ್ನು ಪ್ರಧಾನಿ ಮೋದಿ ಸರ್ಕಾರ ರೂಪಿಸಿತ್ತು. ಮಹಿಳಾ ಮಸೂದೆ ಮತ್ತು ಕ್ಷೇತ್ರ ಪುನರ್ವಿಂಗಡಣೆಯನ್ನು ಒಟ್ಟೊಟ್ಟಿಗೇ ನೋಡಬೇಕಾಗುತ್ತದೆ. ಹಾಗಾಗಿ, ಮೀಸಲಾತಿ ಮಸೂದೆ ಮಾತ್ರ ತಂದಿದ್ದರೆ ನಾವು ಬೆಂಬಲ ನೀಡುತ್ತಿದ್ದೆವು, ಕ್ಷೇತ್ರ ಪುನರ್ವಿಂಗಡಣೆಯನ್ನೂ ಜೋಡಿಸಿದ್ದರಿಂದ ಬೆಂಬಲ ನೀಡಲಿಲ್ಲ ಎಂಬ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ವಾದ ಎಷ್ಟು ಸ್ವಾರ್ಥತೆಯಿಂದ ಕೂಡಿದೆ, ಎಷ್ಟು ಅಲ್ಪದೃಷ್ಟಿಯಿಂದ ಕೂಡಿದೆ ಎನ್ನುವುದನ್ನು ತೋರಿಸುತ್ತದೆ.
ಈ ಚರ್ಚೆಯ ಸಾರ ಒಂದು ಸರಳ ಪ್ರಶ್ನೆಯಲ್ಲಿ ಹೇಳಬೇಕು ಎನ್ನುವುದಾದರೆ, ನಾವು ಮಹಿಳೆಯನ್ನು ಕೇವಲ ರಕ್ಷಿಸಬೇಕಾದ ವ್ಯಕ್ತಿಯಾಗಿ ನೋಡುತ್ತೇವೆಯೇ ಅಥವಾ ಸಮಾಜವನ್ನು ರೂಪಿಸುವ ಶಕ್ತಿಯಾಗಿ ಸ್ವೀಕರಿಸುತ್ತೇವೆಯೇ ಎನ್ನುವುದು. ಇತಿಹಾಸ, ಸ್ಥಳೀಯ ಆಡಳಿತದ ಅನುಭವ ಮತ್ತು ಆಧುನಿಕ ಸಾಧನೆಗಳನ್ನು ನೋಡಿದರೆ ಸಿಗುವುದು ಒಂದೇ ಉತ್ತರ. ಮಹಿಳೆಯು ಅಭಿವೃದ್ಧಿಯಲ್ಲಿ ಕೇವಲ ಮೂಕಪ್ರೇಕ್ಷಕಳಾಗಿರುವವಳಲ್ಲ, ನಾಯಕತ್ವ ವಹಿಸುವವಳೂ ಹೌದು ಎನ್ನುವುದು. ಭಾರತವನ್ನು 2047ಕ್ಕೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ಆದರೆ ಯಾವುದೇ ದೇಶದ ಶೇ.50ರಷ್ಟಿರುವ ಮಹಿಳೆಯರನ್ನು ಉತ್ಪಾದಕ ಕಾರ್ಯಗಳಲ್ಲಿ, ನೀತಿ ನಿರೂಪಣೆಯಲ್ಲಿ ತೊಡಗಿಸದೆ ಒಂದು ದೇಶ ಹೇಗಾದರೂ ಅಭಿವೃದ್ಧಿಯಾಗುತ್ತದೆ?

