ಕಸ ಸಂಗ್ರಹ ಮಾಡಲು ಯಾರೂ ಬರುತ್ತಿಲ್ಲ, ಇತ್ತ ವಿಲೇವಾರಿ ಮಾಡಲು ಆಗದೆ, ಮನೆಯಲ್ಲಿ ಇಡಲು ಆಗದೆ ಸಮಸ್ಯೆ ಅನುಭವಿಸುತ್ತಿದ್ದೀರಾ? ಇದೀಗ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಇದೀಗ ಸ್ಥಳದಲ್ಲೇ ಕಸ ವಿಲೇವಾರಿ ಮಾಡುವ ಸೇಫ್ ಡಿಸ್‌ಪೋಸ್‌ಗೆ ಚಾಲನೆ ನೀಡಲಾಗಿದೆ.
ಬೆಂಗಳೂರು (ಜೂ.02) ಬೆಂಗಳೂರಲ್ಲಿ ಕಸದ ಸಮಸ್ಯೆ ತೀವ್ರವಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಡುವುದು, ಕಸ ವಿಲೇವಾರಿ ಮಾಡದೇ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ, ಮನೆಯಲ್ಲಿನ ಕಸ ವಿಲೇವಾರಿಯಾಗದೆ ಎದುರಾಗುವ ಸಮಸ್ಯೆಗಳಿಗೆ ಇದೀಗ ಮುಕ್ತಿ ನೀಡಲು ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ. ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಯೋಗದೊಂದಿಗೆ ನಿಯೋ ಸ್ಯಾನ್ ಇದೀಗ ಅತ್ಯಾಧುನಿಕ ಸ್ಮಾರ್ಟ್ ಬಿನ್ ಡಿಸ್‌ಪೋಸ್ ಮಶಿನ್ ಅಳವಡಡಿಸುತ್ತಿದೆ.ಇದರಿಂದ ಸ್ಥಳದಲ್ಲೇ ಕಸ ವಿಲೇವಾರಿ ಸಮಸ್ಯೆ ಮುಗಿಯಲಿದೆ.
ಕಸದ ಸಮಸ್ಯೆಗೆ ಪರಿಹಾರ
ಸ್ಥಳದಲ್ಲೇ ತ್ಯಾಜ್ಯ ವಿಲೇವಾರಿ ಮಾಡುವ ಉನ್ನತ ತಂತ್ರಜ್ಞಾನದ ಥರ್ಮಲ್ ವೇಸ್ಟ್-ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸುವ ಬೆಂಗಳೂರು ಮೂಲದ ಕ್ಲೀನ್-ಟೆಕ್ ಕಂಪನಿ 'ನಿಯೋ ಸ್ಯಾನ್ ಹೊಸ ಮಶಿನ್ ಅಳವಡಿಸುತ್ತಿದೆ. ಬೆಳೆಯುತ್ತಿರುವ ನಗರದಲ್ಲಿನ ಕಸದ ಸವಾಲು ಪರಿಹರಿಸಲು ದಿಟ್ಟ ಹೆಜ್ಜೆಯಾಗಿದೆ. ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ನಗರದ ವಿವಿಧ ಸೌಲಭ್ಯಗಳಲ್ಲಿ ಸ್ಥಳದಲ್ಲೇ ತ್ಯಾಜ್ಯ ನಿರ್ವಹಣೆ ಮಾಡಲು ನಿಯೋ ಸ್ಯಾನ್ ಮಶಿನ್ ಬಳಸಲಾಗುತ್ತದೆ. ಶೀಘ್ರದಲ್ಲೇ ಆರಂಭವಾಗಲಿರುವ ಈ ಯೋಜನೆಯು, ನಗರದಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ, ಸ್ಥಳದಲ್ಲೇ ಸ್ಯಾನಿಟರಿ ಮತ್ತು ಜೈವಿಕ-ವೈದ್ಯಕೀಯ ತ್ಯಾಜ್ಯಗಳನ್ನು ಸಂಸ್ಕರಿಸುವ ಪ್ರಮಾಣೀಕೃತ ವ್ಯವಸ್ಥೆಯನ್ನು ತರಲಿದ್ದು, ತ್ಯಾಜ್ಯ ನಿರ್ವಹಣೆಯ ಅತ್ಯಂತ ಸವಾಲಿನ ಸಮಸ್ಯೆಯನ್ನು ನಿವಾರಿಸಲಿದೆ.
ಎರಡನೇ ನಗರ ಬೆಂಗಳೂರು
ಈ ಯೋಜನೆಯು ಸುಸ್ಥಿರತೆ, ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿನೂತನ ಪರಿಹಾರಗಳನ್ನು ಬೆಂಬಲಿಸುತ್ತದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಂತರ ಈ ಜಾಗತಿಕ ಉಪಕ್ರಮಕ್ಕೆ ಆತಿಥ್ಯ ವಹಿಸುತ್ತಿರುವ ವಿಶ್ವದ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.
ಸುರಕ್ಷಿತ ಕಲ ವಿಲೇವಾರಿ
ನಿಯೋ ಸ್ಯಾನ್‌ಗೆ ಒದಗಿಸಲಾದ ಅನುದಾನವನ್ನು 'ನಿಯೋ-ಎಕ್ಸ್' ಘಟಕಗಳ ಅಳವಡಿಕೆಗೆ ಬಳಸಿಕೊಳ್ಳಲಾಗುವುದು. ಇವು ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳದಲ್ಲೇ ಅದನ್ನು ಸುರಕ್ಷಿತವಾಗಿ ಸಂಸ್ಕರಿಸುತ್ತವೆ. ಬೆಂಗಳೂರಿನಾದ್ಯಂತ ಇರುವ ಕಾಲೇಜುಗಳು, ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs), ಮಹಿಳಾ ಹಾಸ್ಟೆಲ್‌ಗಳು, ಸರ್ಕಾರಿ ವಸತಿ ಸಮುಚ್ಚಯಗಳು ಮತ್ತು ಇತರ ಕಟ್ಟಡಗಳಲ್ಲಿ ಹಂತಹಂತವಾಗಿ ಈ ಯಂತ್ರಗಳನ್ನು ಅಳವಡಿಸಲಾಗುವುದು. ಇದರಿಂದ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ. ಅಲ್ಲದೆ, ಅಪಾಯಕಾರಿ ತ್ಯಾಜ್ಯವನ್ನು ಕೈಯಾರೆ ವಿಂಗಡಿಸುವ ಪೌರಕಾರ್ಮಿಕರಿಗೆ ಸುರಕ್ಷತೆ ಮತ್ತು ಘನತೆ ಒದಗಿಸಲಿದೆ.
ಸರ್ಕಾರಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಮಹಿಳಾ ಹಾಸ್ಟೆಲ್‌ಗಳಲ್ಲಿ ನಿತ್ಯವೂ ಸ್ಯಾನಿಟರಿ ಪ್ಯಾಡ್‌ಗಳು, ಬ್ಯಾಂಡೇಜ್‌ಗಳು, ಬಳಸಿದ ಟಿಶ್ಯೂಗಳು ಮತ್ತು ಕ್ಲಿನಿಕಲ್ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿವೆ. ಆದರೆ, ಇವುಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇರದ ಕಾರಣ, ಇವುಗಳನ್ನು ಬಯಲಿನಲ್ಲಿ ಸುಡುವುದು ಸಾಮಾನ್ಯವಾಗಿತ್ತು. ಬೆಂಗಳೂರಿನ ಒಟ್ಟು PM2.5 ಮಾಲಿನ್ಯದಲ್ಲಿ ಶೇ.11 ರಷ್ಟು ಪಾಲು ಈ ರೀತಿ ತ್ಯಾಜ್ಯ ಸುಡುವುದರಿಂದಲೇ ಆಗುತ್ತಿದ್ದು, ವಾಹನ ಮತ್ತು ಕೈಗಾರಿಕೆಗಳ ನಂತರ ಇದು ನಗರದ ಮೂರನೇ ಅತಿದೊಡ್ಡ ಮಾಲಿನ್ಯ ಮೂಲವಾಗಿದೆ. ಸ್ವಚ್ಛತಾ ಕಾರ್ಮಿಕರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಇದನ್ನು ನಿರ್ವಹಿಸುತ್ತಿದ್ದರು. ನಿಯೋ ಸ್ಯಾನ್ ಈ ಸಮಸ್ಯೆಯನ್ನು ಪರಿಸರ ಸಂರಕ್ಷಣೆ ಮತ್ತು ಮಹಿಳಾ ಸಬಲೀಕರಣದ ದೃಷ್ಟಿಕೋನದಿಂದ ಪರಿಹರಿಸುತ್ತಿದ್ದು, ಸಾರ್ವಜನಿಕ ಆರೋಗ್ಯ, ಕಾರ್ಮಿಕರ ಘನತೆ ಮತ್ತು ಶುದ್ಧ ಗಾಳಿಯ ನಡುವಿನ ಅಂತರವನ್ನು ತುಂಬುತ್ತಿದೆ.


