ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್‌ಗೆ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯಗೆ ಇದೀಗ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಸಿದ್ದರಾಮಯ್ಯ ಅವರನ್ನು CWC ಸದಸ್ಯರಾಗಿ ನೇಮಕಗೊಳಿಸಿದೆ.

ದೆಹಲಿ (ಜೂ.02) ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದ್ದ ಭಾರಿ ಚರ್ಚೆಗಳು, ಕುತೂಹಲಗಳು ಇದೀಗ ಸಂಪುಟ ಸೇರ್ಪಡೆಯತ್ತ ನೆಟ್ಟಿದೆ. ಯಾರಿಗೆ ಸಚಿವ ಸ್ಥಾನ ಅನ್ನೋ ಕುರಿತು ಕಾಂಗ್ರೆಸ್ ಹೈಕಮಾಂಡ್ ಸತತ ಚರ್ಚೆ ನಡೆಸುತ್ತಿದೆ. ಇದರ ನಡುವೆ ಮಹತ್ವದ ಆದೇಶ ಹೊರಬಿದ್ದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮ್ಯಗೆ ಕಾಂಗ್ರೆಸ್ ಕಾರ್ಯಕಾರಿ ಸಮತಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಸಿದ್ದರಾಮಯ್ಯ ಅವರನ್ನು CWC ಸದಸ್ಯರಾಗಿ ನೇಮಕಗೊಳಿಸಿ ಕೆಸಿ ವೇಣುಗೋಪಾಲ್ ಅದೇಶ ಹೊರಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎಂ ಸ್ಥಾನ ತ್ಯಜಿಸಿದ ಸಿದ್ದರಾಮಯ್ಯಗೆ ಹೊಸ ಜವಾಬ್ದಾರಿ

ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್ ವಲಯದಲ್ಲೇ ಕಳೆದ ಎರಡು ವರ್ಷದಿಂದ ಭಾರಿ ಚರ್ಚೆಯಾಗುತ್ತಿತ್ತು. ಕೊನೆಗೆ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಬಳಿಕ ಸ್ವತಃ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು. ಇತ್ತ ಉಪ ಮುಖ್ಯಮಂತ್ರಿಯಾಗಿದ್ದ ಡಿಕೆ ಶಿವಕುಮಾರ್ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದರ ನಡುವೆ ರಾಜ್ಯದಲ್ಲಿ ಕೋರ್ ಕಮಿಟಿಗೆ ಸಿದ್ದರಾಮಯ್ಯ ಭಾರಿ ಒತ್ತಾಯಿಸಿದ್ದರು. ಇದೀಗ ಅಳೆದು ತೂಗಿ ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ ಮಾಡಿದೆ.

ಸಿದ್ದರಾಮಯ್ಯ ರಾಜೀನಾಮೆ ಬಳಿಕ ನಡೆದ ಚರ್ಚೆಯಲ್ಲಿ ಹೈಕಮಾಂಡ್ ಮುಂದೆ ಮಹತ್ವದ ಬೇಡಿಕೆ ಮುಂದಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕೋರ್ ಕಮಿಟಿ ರಚನೆಗೆ ಒತ್ತಾಯಿಸಿದ್ದು. ಈ ಕೋರ್ ಕಮಿಟಿಯ ನೇತೃತ್ವ ವಹಿಸಿಕೊಳ್ಳಲು ಸಿದ್ದರಾಮಯ್ಯ ಲೆಕ್ಕಾಚಾರ ಹಾಕಿದ್ದರು. ಆದರೆ ಹೈಕಮಾಂಡ್ ರಾಜ್ಯದಲ್ಲಿ ಕೋರ್ ಕಮಿಟಿ ರಚನೆ ಬಗ್ಕೆ ನಿರಾಸಕ್ತಿ ತೋರಿದೆ. ಮುಖ್ಯಮಂತ್ರಿ ಸ್ಥಾನ ತೊರೆದ ಸಿದ್ದರಾಮಯ್ಯಗೆ ಇದೀಗ CWC ಸದಸ್ಯ ಜವಾಬ್ದಾರಿ ನೀಡಿದೆ.

ಹೈಕಮಾಂಡ್ ಸಿದ್ದರಾಮಯ್ಯಗೆ CWC ಸದಸ್ಯರಾಗಿ ನೇಮಿಸಿದ್ದು ಯಾಕೆ..?

  • ಈವರೆಗೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ (CWC)ಯ ವಿಶೇಷ ಆಹ್ವಾನಿತ ಸದಸ್ಯರಾಗಿದ್ದ ಸಿದ್ದರಾಮಯ್ಯ
  • ಈಗ ಪೂರ್ಣ ಪ್ರಮಾಣದ CWC ಸದಸ್ಯರಾಗಿ ನೇಮಕ
  • ಕಾಂಗ್ರೆಸ್‌ನ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಮಿತಿಯಲ್ಲಿ ಸ್ಥಾನ
  • ಸಿದ್ದರಾಮಯ್ಯ ಪದತ್ಯಾಗ ಮಾಡಿದರೂ ಪಕ್ಷದ ಪ್ರಮುಖ ನಾಯಕ ಎಂಬ ಸ್ಪಷ್ಟ ಸಂದೇಶ ರವಾನಿಸಿದ ಹೈಕಮಾಂಡ್
  • ಕರ್ನಾಟಕ ಸಿಎಂ ಸ್ಥಾನದಿಂದ ಹೊರಬಂದ ಬಳಿಕವೂ ರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಪಾತ್ರ
  • ಹಲವು ವರ್ಷಗಳ ಸೇವೆ ಹಾಗೂ ಪಕ್ಷದ ನಿರ್ಧಾರದ ನಿಷ್ಠೆಗಾಗಿ ಹೈಕಮಾಂಡ್‌ನಿಂದ ಗೌರವ
  • ಕಾಂಗ್ರೆಸ್‌ನ ರಾಷ್ಟ್ರೀಯ ರಾಜಕೀಯ ತಂತ್ರಗಾರಿಕೆ ರೂಪಿಸುವಲ್ಲಿ ಸಿದ್ದರಾಮಯ್ಯ ಪಾತ್ರ ಇರಲಿದೆ
  • ಪಕ್ಷದ ಪ್ರಮುಖ ನಿರ್ಧಾರಗಳ ಮೇಲೆ ಅಧಿಕೃತ ಪ್ರಭಾವ ಬೀರುವ ಅವಕಾಶ
  • ರಾಜ್ಯ ರಾಜಕೀಯದಾಚೆಗೂ ಸಿದ್ದರಾಮಯ್ಯಗೆ ರಾಷ್ಟ್ರೀಯ ಮಟ್ಟದ ಜವಾಬ್ದಾರಿ
  • ಸಿದ್ದರಾಮಯ್ಯರನ್ನು ರಾಷ್ಟ್ರೀಯ ರಾಜಕೀಯದಲ್ಲಿ ಸಕ್ರಿಯವಾಗಿಡುವ ಹೈಕಮಾಂಡ್‌ನ ಮಹತ್ವದ ನಡೆ
  • ಕಾಂಗ್ರೆಸ್ ಸಂಘಟನೆಯಲ್ಲಿ ಸಿದ್ದರಾಮಯ್ಯ ಸ್ಥಾನಮಾನ ಮತ್ತಷ್ಟು ಬಲಪಡಿಸಿದ ಈ ನೇಮಕ

ಸಂಪುಟ ಸೇರ್ಪಡೆ ಚರ್ಚೆ ಮುಗಿಸಿ ಬೆಂಗಳೂರಿಗೆ ವಾಪಸ್

ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಸತತ ಸಭೆ ನಡೆಸಿದ್ದಾರೆ. ಸಂಪುಟ ಸೇರ್ಪಡೆ ಕುರಿತು ಉಭಯ ನಾಯಕರು ತಮ್ಮದೇ ಆದ ಲಿಸ್ಟ್ ನೀಡಿದ್ದರು. ಈ ಕುರಿತು ಹಲವು ಸುತ್ತಿನ ಮಾತುಕತೆ ನಡೆದಿದೆ. ಕೊನೆಗೆ 14 ಸಚಿವರು ಡಿಕೆ ಶಿವಕುಮಾರ್ ಜೊತೆ ಪ್ರಮಾಣವಚನ ಸ್ವೀಕರಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ.