ಹುಬ್ಬಳ್ಳಿ: ಅನ್ನಭಾಗ್ಯದ ಹಣಕ್ಕಾಗಿ ಬ್ಯಾಂಕ್ ಎದುರು ಸಾಲುಗಟ್ಟಿದ ಮಹಿಳೆಯರು!
ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯದ ಹಣವನ್ನು ರಾಜ್ಯ ಸರ್ಕಾರ ಅಕೌಂಟ್‌ಗೆ ಜಮಾ ಮಾಡಿದ್ದು, ಅದನ್ನು ಪಡೆಯಲು ಸಾವಿರಾರು ಮಹಿಳೆಯರು ಇಡೀ ದಿನ ಬ್ಯಾಂಕ್ ಮುಂದೆ ಕಾದರೂ ನಯಾ ಪೈಸೆ ಸಿಗದೇ ಮರಳಿ ಹೋದ ಪ್ರಸಂಗ ಬುಧವಾರ ನಡೆದಿದೆ.
ಹುಬ್ಬಳ್ಳಿ (ಜು.20) : ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯದ ಹಣವನ್ನು ರಾಜ್ಯ ಸರ್ಕಾರ ಅಕೌಂಟ್‌ಗೆ ಜಮಾ ಮಾಡಿದ್ದು, ಅದನ್ನು ಪಡೆಯಲು ಸಾವಿರಾರು ಮಹಿಳೆಯರು ಇಡೀ ದಿನ ಬ್ಯಾಂಕ್ ಮುಂದೆ ಕಾದರೂ ನಯಾ ಪೈಸೆ ಸಿಗದೇ ಮರಳಿ ಹೋದ ಪ್ರಸಂಗ ಬುಧವಾರ ನಡೆದಿದೆ.
ಗೋಕುಲ ರಸ್ತೆಯಲ್ಲಿರುವ ಕೈಗಾರಿಕೆ ಅಭಿವೃದ್ಧಿ (ಐಡಿಬಿಐ) ಹೆಸರಿನ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದ್ದು, ಎರಡ್ಮೂರು ದಿನಗಳಿಂದ ಅಲೆದಾಡಿದರೂ ಬ್ಯಾಂಕಿನವರು ಹಣವೂ ಇಲ್ಲ, ಪಾಸ್‌ಬುಕ್ ಕೊಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಸಾಗಹಾಕುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಗೃಹ ಲಕ್ಷ್ಮೀ ಯೋಜನೆ ಜಾರಿ ಬೆನ್ನಲ್ಲೇ ಆಧಾರ ಕೇಂದ್ರಕ್ಕೆ ಮುಗಿಬಿದ್ದ ಜನರು
ರಾಜ್ಯ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ .170 ಗಳಂತೆ 5 ಕೆಜಿ ಅಕ್ಕಿಯ ಹಣವನ್ನು ಬಿಪಿಎಲ್ ಕಾರ್ಡ್ ಫಲಾನುಭವಿಗಳ ಅಕೌಂಟ್‌ಗೆ ಜಮಾ ಮಾಡಿದೆ. ಈ ಹಣ ಫಲಾನುಭವಿಗಳು ಮೊಟ್ಟಮೊದಲ ಬಾರಿಗೆ ಯಾವ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದಾರೋ ಆ ಖಾತೆ ಜಮಾ ಆಗಿರುತ್ತದೆ. ಹಣ ಜಮಾ ಆಗಿರುವ ಬಗ್ಗೆ ಸರಕಾರವು ಆಯಾ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ ರವಾನಿಸಿದೆ. ಇದನ್ನು ಗಮನಿಸಿ ಹಣ ಪಡೆಯಲು ಎರಡ್ಮೂರು ದಿನಗಳಿಂದ ಬ್ಯಾಂಕ್‌ಗೆ ಎಡತಾಕುತ್ತಿದ್ದೇವೆ. ಬ್ಯಾಂಕ್‌ನವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬ್ಯಾಂಕಿಗೆ ಬಂದಿದ್ದ ಮಹಿಳೆಯರು ದೂರಿದರು.
ಇದೇ ಬ್ಯಾಂಕಿನಲ್ಲೇ ಏಕೆ ಬಂದಿದೆ ಎಂಬ ಪ್ರಶ್ನೆಗೆ, ಶ್ರೀ ಧರ್ಮಸ್ಥಳ ಸ್ವ ಸಹಾಯ ಸಂಘ ಸದಸ್ಯೆಯರಿಗೆ ಸಾಲ ವಿತರಣೆಯನ್ನು ಈ ಬ್ಯಾಂಕ್ ಮೂಲಕ ಮಾಡುತ್ತಿದೆ. ಬಹಳಷ್ಟುಮಹಿಳಾ ಸದಸ್ಯೆಯರು ಮೊದಲ ಬಾರಿಗೆ ಈ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದಾರೆ. ಹಾಗಾಗಿ, ಗ್ಯಾರಂಟಿ ಅಕ್ಕಿ ಹಣವು ಈ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ಮಹಿಳೆಯರು ವಿವರಿಸಿದರು.
ನಗರದ ಸುತ್ತಲಿನ ಹಳ್ಳಿ ಹಾಗೂ ನಗರದ ಮಹಿಳೆಯರು ಸ್ವ ಸಹಾಯ ಸಂಘದ ಸದಸ್ಯೆಯರಾಗಿದ್ದು, ಅವರೆಲ್ಲರೂ ಅಕ್ಕಿ ಹಣ ಬಂದಾವು ಕೊಡ್ರಿ ಎಂದು ಬ್ಯಾಂಕ್‌ನವರ ಮುಂದೆ ಗೋಗರೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬ್ಯಾಂಕಿನವರು ಕಿಂಚಿತ್ ಗಮನಹರಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ಮಂಗಳವಾರ, ಬುಧವಾರ ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲೇ ಮಹಿಳೆಯರು ನಿಂತುಕೊಂಡು ಸುಸ್ತಾಗಿದ್ದರು.
ಗೃಹಲಕ್ಷ್ಮೀಗೂ ಬಿಡಲಿಲ್ಲ ಟೆಕ್ನಿಕಲ್ ಪ್ರಾಬ್ಲಂ, ನೋಂದಣಿಗೆ ಪರದಾಡಿದ ಮಹಿಳೆಯರು!
ಆಧಾರ್ ಕಾರ್ಡ್ ಕೊಟ್ಟು ಹೋಗಿರಿ ನೋಡಿ ಚೆಕ್ ಮಾಡುತ್ತೇವೆ. ಸದ್ಯಕ್ಕೆ ಹಣ ಕೊಡುವುದಿಲ್ಲ ಎಂದು ಬ್ಯಾಂಕಿನವರು ಸ್ಪಷ್ಟವಾಗಿ ತಿಳಿಸಿದರು ಎಂದು ರಾಧಿಕಾ ಎಂಬವರು ಅಲವತ್ತುಕೊಂಡರು. ಬಡ ಮಹಿಳೆಯರ ಬಗ್ಗೆ ಬ್ಯಾಂಕ್ ಸಿಬ್ಬಂದಿ ಉದಾಸೀನತೆ ತೋರುತ್ತಿದ್ದಾರೆ ಎಂದು ಅವರು ಆರೋಪಿಸಿದರು.