ಗೃಹ ಲಕ್ಷ್ಮೀ ಯೋಜನೆ ಜಾರಿ ಬೆನ್ನಲ್ಲೇ ಆಧಾರ ಕೇಂದ್ರಕ್ಕೆ ಮುಗಿಬಿದ್ದ ಜನರು
ಕೆಲ ದಿನಗಳಿಂದ ಆಧಾರ್ ಸೇವಾ ಕೇಂದ್ರದಲ್ಲಿ ಜನರ ಗದ್ದಲ ಕೊಂಚ ಇಳಿಕೆ ಕಂಡಿತ್ತು. ಈಗ ಮತ್ತೆ ಜನರು ಲಗ್ಗೆ ಇಡುವುದು ಹೆಚ್ಚಾಗಿದೆ. ಬುಧವಾರದಿಂದ ಆರಂಭವಾದ ಗೃಹಲಕ್ಷ್ಮೇ ಯೋಜನೆಯ ಸೌಲಭ್ಯ ಪಡೆಯಲು ನೋಂದಣಿಗಾಗಿ ಮತ್ತೆ ಜನರು ಆಧಾರ್ ಸೇವಾಕೇಂದ್ರಕ್ಕೆ ಲಗ್ಗೆ ಇಡುತ್ತಿದ್ದಾರೆ.
ಹುಬ್ಬಳ್ಳಿ (ಜು.20) : ಕೆಲ ದಿನಗಳಿಂದ ಆಧಾರ್ ಸೇವಾ ಕೇಂದ್ರದಲ್ಲಿ ಜನರ ಗದ್ದಲ ಕೊಂಚ ಇಳಿಕೆ ಕಂಡಿತ್ತು. ಈಗ ಮತ್ತೆ ಜನರು ಲಗ್ಗೆ ಇಡುವುದು ಹೆಚ್ಚಾಗಿದೆ. ಬುಧವಾರದಿಂದ ಆರಂಭವಾದ ಗೃಹಲಕ್ಷ್ಮೇ ಯೋಜನೆಯ ಸೌಲಭ್ಯ ಪಡೆಯಲು ನೋಂದಣಿಗಾಗಿ ಮತ್ತೆ ಜನರು ಆಧಾರ್ ಸೇವಾಕೇಂದ್ರಕ್ಕೆ ಲಗ್ಗೆ ಇಡುತ್ತಿದ್ದಾರೆ. ಇನ್ನು ಕೆಲ ಬ್ಯಾಂಕ್‌ಗಳ ಎದುರಿಗೆ ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಲು ದಾಂಗುಡಿ ಇಡುತ್ತಿದ್ದಾರೆ.
ನಗರದ ಕೋರ್ಚ್ ಬಳಿ ಇರುವ ಆಧಾರ್ ಸೇವಾ(Adhar seva kendra hubballi)ಕೇಂದ್ರಕ್ಕೆ ಮೊದಮೊದಲು ಹೊಸ ಆಧಾರ್ ಕಾರ್ಡ್, ತಿದ್ದುಪಡಿ, ಸೇರ್ಪಡೆಗಾಗಿ ಬೆರಳೆಣಿಕೆ ಪ್ರಮಾಣದಲ್ಲಿ ಜನರು ಆಗಮಿಸುತ್ತಿದ್ದರು. ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಂತೆ ಆಧಾರ ಸೇವಾ ಕೇಂದ್ರಗಳು ಜನರಿಂದ ತುಂಬಿ ಹೋಗುತ್ತಿವೆ. ನಿತ್ಯವೂ ಬರುವ ಜನರನ್ನು ನಿಯಂತ್ರಿಸುವುದೇ ಇಲ್ಲಿನ ಸಿಬ್ಬಂದಿಗಳಿಗೆ ಸಾಕಾಗಿ ಹೋಗಿದೆ.
ಗೃಹಲಕ್ಷ್ಮೀಗೂ ಬಿಡಲಿಲ್ಲ ಟೆಕ್ನಿಕಲ್ ಪ್ರಾಬ್ಲಂ, ನೋಂದಣಿಗೆ ಪರದಾಡಿದ ಮಹಿಳೆಯರು!
ಕೇಂದ್ರದಲ್ಲಿ ನಿತ್ಯವು ಸುಮಾರು 250 ಜನರಿಗೆ ಹೊಸ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಡಲಾಗುತ್ತಿದೆ. ಗ್ಯಾರಂಟಿ ಪೂರ್ವದಲ್ಲಿ ದಿನಕ್ಕೆ 150ರಿಂದ 180ರ ವರಗೆ ಮಾತ್ರ ಬರುತ್ತಿದ್ದರು. ಆದರೆ, ಕಳೆದ ಒಂದು ತಿಂಗಳಿಂದ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಸೇವಾ ಕೇಂದ್ರಕ್ಕೆ ಲಗ್ಗೆಯಿಡುತ್ತಿರುವುದರಿಂದ ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಜನರನ್ನು ನಿಯಂತ್ರಿಸುವುದೇ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜನರ ನಿಯಂತ್ರಣಕ್ಕಾಗಿಯೇ ಈಚೆಗೆ ಇಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.
ಹಿಂದೆ 400-500 ಜನಕ್ಕೆ ಟೋಕನ್:
ಒಂದು ತಿಂಗಳ ಹಿಂದೆ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ದಿನಕ್ಕೆ 400-500 ಜನರಿಗೆ ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಇಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೆ ಹೆಚ್ಚಿನ ಹೊರೆಯಾಗುತ್ತಿರುವುದರಿಂದ ಮೊದಲಿದ್ದಂತೆ ದಿನಕ್ಕೆ 250 ಜನರಿಗೆ ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿದೆ.
ಬ್ಯಾಂಕ್‌ಗಳ ರಶ್:
ಇನ್ನು ಬ್ಯಾಂಕ್‌ಗಳ ಮುಂದೆ ಗ್ರಾಹಕರು ಮುಗಿ ಬಿಳುತ್ತಿರುವುದು ಕಂಡು ಬರುತ್ತಿದೆ. ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಆಗಮಿಸುತ್ತಿದ್ದರು. ಇದರಿಂದ ಪ್ರತಿದಿನ ಖಾಲಿ ಖಾಲಿಯಾಗಿರುತ್ತಿದ್ದ ಬ್ಯಾಂಕ್‌ಗಳೂ ಬುಧವಾರ ರಶ್ ಆಗಿದ್ದು ಕಂಡು ಬಂತು. ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿನ ಐಡಿಬಿಐ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಮಹಿಳೆಯರ ದೊಡ್ಡ ದೊಡ್ಡ ಸರತಿ ಸಾಲು ಇದ್ದಿರುವುದು ಕಂಡು ಬಂತು.
ವಾರದ ನಂತರ ಬರುವ ಸರದಿ:
ನಾನು ಇಂದೇ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ತಿದ್ದುಪಡಿ ಮಾಡಿಸುತ್ತೇನೆ ಎಂದರೆ ಸಾಧ್ಯವಿಲ್ಲ. ಇಂದು ಹೋಗಿ ಟೋಕನ್ ಪಡೆದಲ್ಲಿ ನಿಮ್ಮ ಸರದಿ ಬರುವುದು ಒಂದು ವಾರದ ನಂತರವೇ. ಅಷ್ಟೊಂದು ಪ್ರಮಾಣದಲ್ಲಿ ಜನರು ಬರುತ್ತಿದ್ದಾರೆ. ದಿನಕ್ಕೆ 250 ಜನರಿಗೆ ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ನಿತ್ಯವು ಸಾವಿರಾರು ಸಂಖ್ಯೆಯಲ್ಲಿ ಬಂದು ಸೇವಾ ಕೇಂದ್ರ ಎದುರು ಕ್ಯೂ ನಿಲ್ಲುತ್ತಿರುವುದರಿಂದ ಅನಿವಾರ್ಯವಾಗಿ ಮುಂದಿನ ದಿನಗಳ ಟೋಕನ್ ನೀಡಿ ಕಳಿಸಲಾಗುತ್ತಿದೆ. ಬುಧವಾರ ಬೆಳಗ್ಗೆಯೇ ಮಳೆಯಲ್ಲೂ ಸುಮಾರು 800ಕ್ಕೂ ಅಧಿಕ ಜನರು ಸೇವಾ ಕೇಂದ್ರದ ಎದುರು ಸರದಿಯಲ್ಲಿ ನಿಂತಿದ್ದು, ಅವರು ಮುಂದಿನ 27ರ ವರೆಗೂ ಟೋಕನ್ ಪಡೆದುಕೊಂಡು ಹೋಗಿದ್ದಾರೆ ಎಂದು ಸೇವಾ ಕೇಂದ್ರದ ಸಿಬ್ಬಂದಿ ತಿಳಿಸುತ್ತಾರೆ.
ಮಂಗಳೂರು: ಪಡಿತರ ಚೀಟಿಗೆ ಹೆಸರು ಸೇರಿಸಲಾಗದೆ ಪರದಾಟ
ನಿತ್ಯವು ಜನರ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಜನರನ್ನು ನಿಯಂತ್ರಿಸುವುದೇ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಟೋಕನ್ ನೀಡಿದರೂ ಪದೇ ಪದೇ ಬಂದು ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿಯೇ ಇಬ್ಬರು ಸಿಬ್ಬಂದಿ ನೇಮಿಸಲಾಗಿದೆ. ಆದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
ಲೋಹಿತ್, ಆಧಾರ ಸೇವಾಕೇಂದ್ರದ ನಿರ್ವಾಹಕ
ಏನ್ ಗದ್ಲಾ ಐತಿರೀ... ಆಧಾರ ಕಾರ್ಡಿನ್ಯಾಗ ನಮ್ಮವ್ವನ ಹೆಸ್ರು ತಿದ್ದುಪಡಿ ಮಾಡಿಕೊಳ್ಳಾಕ ಐದಾರ್ ದಿನಾ ಆತ್ರಿ ಬರಾಕುಂತು ಇವತ್ತ ಪಾಳೆ ಬಂದಿದ್ದು ಈಗ ತಿದ್ದುಪಡಿ ಮಾಡಿಸ್ಕೊಂಡು ಬಂದೀನ್ರಿ.
ಮಹೇಶ ಕಡಕೋಳ, ಹಳೇ ಹುಬ್ಬಳ್ಳಿ ನಿವಾಸಿ
ನನ್ನ ಮಗನ ಹೆಸರು ತಿದ್ದುಪಡಿ ಮಾಡಿಕೊಳ್ಳಲು ನಾನು ಕಳೆದ ಜು. 13ರಂದು ಬಂದು ಟೋಕನ್ ಪಡೆದು ಹೋಗಿದ್ದೆ. ಬುಧವಾರ ಸರದಿ ಬಂದಿರುವುದರಿಂದ ಇಂದು ಬಂದು ಹೆಸರು ತಿದ್ದುಪಡಿ ಮಾಡಿಸಿಕೊಂಡಿದ್ದೇನೆ.
ಹನುಮವ್ವ ಭಜಂತ್ರಿ, ಗೋಪನಕೊಪ್ಪದ ನಿವಾಸಿ
ನಾನು ಕಳೆದ 2-3 ದಿನಗಳಿಂದ ಆಧಾರ ಸೇವಾ ಕೇಂದ್ರಕ್ಕೆ ಬರುತ್ತಿದ್ದೇನೆ. ಬುಧವಾರ ಬೆಳಗ್ಗೆ ನನಗೆ ಜು. 23ರ ದಿನಾಂಕದ ಟೋಕನ್ ಸಿಕ್ಕಿದೆ. ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿರುವುದು ಒಳ್ಳೆಯದು. ಆದರೆ, ಅದಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಈ ರೀತಿ ಗದ್ದಲದಿಂದಾಗಿ ಆಧಾರ್ ಕಾರ್ಡ್ ತಿದ್ದುಪಡಿಗೆ ತೊಂದರೆಯಾಗುತ್ತಿದೆ.
ಅಮೃತ ನರಗುಂದ, ನವನಗರದ ಯುವಕ
ಹುಬ್ಬಳ್ಳಿಯ ಕೋರ್ಚ್ ವೃತ್ತದ ಬಳಿ ಇರುವ ಆಧಾರ ಸೇವಾಕೇಂದ್ರದಲ್ಲಿ ಆಧಾರ್ ತಿದ್ದುಪಡಿಗಾಗಿ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಜನತೆ.