ರಾಜ್ಯ ಸರ್ಕಾರದ 40 ಸಾವಿರ ಹುದ್ದೆ ಭರ್ತಿ ಹೇಳಿಕೆ ಸುಳ್ಳು ಎಂದು ಬಿಜೆಪಿ ಆರೋಪಿಸಿದೆ. ಮೀಸಲಾತಿ ಹೆಚ್ಚಳವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಮತ್ತು ಒಳಮೀಸಲಾತಿ ಬಗ್ಗೆ ಗೊಂದಲ ಸೃಷ್ಟಿಸಿರುವ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಫೆ.28): ರಾಜ್ಯದಲ್ಲಿ ಉದ್ಯೋಗ ನೇಮಕಾತಿ ಮತ್ತು ಮೀಸಲಾತಿ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು 'ನಿರುದ್ಯೋಗಿಗಳ ವಿರೋಧಿ ಸರ್ಕಾರ' ಎಂದು ಬಣ್ಣಿಸಿರುವ ಬಿಜೆಪಿ ನಾಯಕರಾದ ಎನ್. ರವಿಕುಮಾರ್ ಮತ್ತು ಛಲವಾದಿ ನಾರಾಯಣಸ್ವಾಮಿ, ಸರ್ಕಾರದ ಇತ್ತೀಚಿನ ನಿರ್ಧಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

40 ಸಾವಿರ ಹುದ್ದೆ ಭರ್ತಿ ಎಂಬುದು ಹಸಿ ಸುಳ್ಳು: ಎನ್. ರವಿಕುಮಾರ್

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಮುಖ್ಯಮಂತ್ರಿಗಳ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. 'ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಈಗ ಹಸಿ ಸುಳ್ಳುಗಳನ್ನು ಹೇಳುತ್ತಿದೆ. 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಹಾಗಿದ್ದರೆ ಆ ಹುದ್ದೆಗಳು ಯಾವ ಇಲಾಖೆಯಲ್ಲಿ ಭರ್ತಿಯಾಗಿವೆ? ಸಿಎಂ ಇಲಾಖಾವಾರು ಮಾಹಿತಿ ನೀಡಲಿ' ಎಂದು ಸವಾಲು ಹಾಕಿದ್ದಾರೆ.

ಮುಂದುವರಿದು ಮಾತನಾಡಿದ ಅವರು, 'ಇಷ್ಟು ವರ್ಷ 56% ಮೀಸಲಾತಿಯಡಿ ನೇಮಕಾತಿ ಮಾಡುತ್ತೇವೆ ಎಂದು ನಂಬಿಸಿ, ಈಗ 50% ಕ್ಕೆ ಮಿತಿ ಹೇರಿರುವುದು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮಾಡಿದ ದ್ರೋಹ. ಬೊಮ್ಮಾಯಿ ಅವರು ತಂದಿದ್ದ ಮೀಸಲಾತಿ ಹೆಚ್ಚಳವನ್ನು ಉಳಿಸಿಕೊಳ್ಳಲು ಈ ಸರ್ಕಾರ ಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸಲೇ ಇಲ್ಲ. ಒಬಿಸಿಗಳಿಗೆ ಭಕ್ತವತ್ಸಲ ವರದಿ ಜಾರಿ ಮಾಡದೆ ಮೋಸ ಮಾಡಲಾಗಿದೆ" ಎಂದು ಕಿಡಿಕಾರಿದರು.

ಗ್ಯಾರಂಟಿ ಅರ್ಧಕ್ಕೆ ನಿಲ್ಲಿಸಲು ಸರ್ಕಾರ ಸಂಚು?

ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ರವಿಕುಮಾರ್, 'ಗ್ಯಾರಂಟಿ ಕೊಡುವಾಗ ಎಲ್ಲರಿಗೂ ಉಚಿತ ಅಂದಿದ್ದ ಸಿಎಂ ಮತ್ತು ಮಂತ್ರಿಗಳು, ಈಗ ಉಳ್ಳವರು ಬಿಟ್ಟುಕೊಡಿ ಎಂದು ಕೇಳುತ್ತಿದ್ದಾರೆ. ಇದರರ್ಥ ಸರ್ಕಾರದ ಖಜಾನೆ ಖಾಲಿ ಆಗಿದೆ. ಗ್ಯಾರಂಟಿಗಳನ್ನು ಅರ್ಧಂಬರ್ಧ ನಿಲ್ಲಿಸಲು ಸರ್ಕಾರ ಹಂಚಿಕೆ ಹಾಕುತ್ತಿದೆ' ಎಂದು ವ್ಯಂಗ್ಯವಾಡಿದರು.

ಒಳಮೀಸಲಾತಿ ಬಗ್ಗೆ ಸ್ಪಷ್ಟನೆ ನೀಡಲಿ: ಛಲವಾದಿ ನಾರಾಯಣಸ್ವಾಮಿ

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒಳಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. 'ಬೊಮ್ಮಾಯಿ ಅವರ ಕಾಲದಲ್ಲಿ ಎಬಿಸಿಡಿ ವರ್ಗೀಕರಣ ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಕಾಂಗ್ರೆಸ್ ಬಂದ ಮೇಲೆ ಹೊಸ ಆಯೋಗಗಳನ್ನು ರಚಿಸಿ ಗೊಂದಲ ಸೃಷ್ಟಿಸಿತು. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ' ಎಂದು ಆರೋಪಿಸಿದರು.

'ರಾಜ್ಯಪಾಲರು ಒಳಮೀಸಲಾತಿ ಮಸೂದೆಗೆ ಅಂಕಿತ ಹಾಕಿದ್ದರೂ, ಅದನ್ನು ಜಾರಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಈಗ ಹಳೆಯ ಮೀಸಲಾತಿ ಪದ್ಧತಿಯಡಿ ಹುದ್ದೆ ಭರ್ತಿಗೆ ಮುಂದಾಗಿರುವುದು ಸರಿಯಲ್ಲ. ಸರ್ಕಾರ ಒಳಮೀಸಲಾತಿ ಒಳಗೊಂಡೋ ಅಥವಾ ಬಿಟ್ಟೋ ನೇಮಕಾತಿ ಮಾಡುತ್ತಿದೆಯಾ? ಈ ಬಗ್ಗೆ ತಕ್ಷಣ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಇದು ಶೋಷಿತ ಸಮುದಾಯಗಳಿಗೆ ಮಾಡುವ ಅತಿ ದೊಡ್ಡ ವಂಚನೆ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.

ಒಟ್ಟಾರೆಯಾಗಿ, ಧಾರವಾಡದ ಉದ್ಯೋಗಾಕಾಂಕ್ಷಿಗಳ ಹೋರಾಟದ ಬೆನ್ನಲ್ಲೇ ಬಿಜೆಪಿ ನಾಯಕರು ಈ ರೀತಿ ಮುಗಿಬಿದ್ದಿರುವುದು ಸರ್ಕಾರಕ್ಕೆ ಹೊಸ ತಲೆನೋವು ತಂದೊಡ್ಡಿದೆ.