51 ಸಾವಿರ ಅತಿಥಿ ಶಿಕ್ಷಕರ ನೇಮಕವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಸಾಧನೆ ಎಂದಿರುವುದು ನಿರುದ್ಯೋಗಿ ಪದವೀಧರರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಕಾಯಂ ಹುದ್ದೆಗಳ ಭರ್ತಿಗೂ ಮುನ್ನ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

ಬೆಂಗಳೂರು/ದಾವಣಗೆರೆ (ಫೆ.28): ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ 70 ಸಾವಿರಕ್ಕೂ ಅಧಿಕ ಕಾಯಂ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ನೂರಾರು ಸರ್ಕಾರಿ ಶಾಲೆಗಳು ಮುಚ್ಚಿವೆ. ಜೊತೆಗೆ, ಸಾವಿರಾರು ಕನ್ನಡ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಈ ನಡುವೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು '51 ಸಾವಿರ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಿದ್ದನ್ನೇ ತಮ್ಮ ದೊಡ್ಡ ಸಾಧನೆಯೆಂಬಂತೆ' ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆಗೆ ನಿರುದ್ಯೋಗಿ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ.

ವೇದಿಕೆ ಮೇಲೆ ಸಚಿವರ ಮಾತುಗಳು:

ಬೆಂಗಳೂರಿನಲ್ಲಿ ಶನಿವಾರ ನಡೆದ ಶಿಕ್ಷಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ತಮ್ಮ ಇಲಾಖೆಯ ಸಾಧನೆಗಳನ್ನು ಪಟ್ಟಿ ಮಾಡಿದರು. 'ನಾವು ಅಧಿಕಾರಕ್ಕೆ ಬಂದ ಮೇಲೆ 51 ಸಾವಿರ ಅತಿಥಿ ಶಿಕ್ಷಕರನ್ನು ಶಾಲೆಗಳಿಗೆ ನಿಯೋಜಿಸಿದ್ದೇವೆ. ಇದಲ್ಲದೆ 13 ಸಾವಿರ ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಹಿಂದಿನ ಸರ್ಕಾರ ಈ ಕೆಲಸ ಮಾಡಿರಲಿಲ್ಲ' ಎಂದು ಟೀಕಿಸಿದರು. ಇದೇ ವೇಳೆ, ಸರ್ಕಾರಿ ಶಾಲೆಯ ದಾಖಲಾತಿಯನ್ನು ಶೇ. 20ರಷ್ಟು ಹೆಚ್ಚಿಸಲು ಮತ್ತು ಫಲಿತಾಂಶವನ್ನು ಶೇ. 15ರಷ್ಟು ಸುಧಾರಿಸಲು ಶಿಕ್ಷಕರು ಸಿಎಂಗೆ ವಿಶ್ವಾಸ ನೀಡಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.

ಕಷ್ಟದ ಇಲಾಖೆ ಎಂದು ಲೇವಡಿ:

ತಮ್ಮ ಸಚಿವ ಸ್ಥಾನದ ಬಗ್ಗೆಯೂ ಮಾತನಾಡಿದ ಮಧು ಬಂಗಾರಪ್ಪ, 'ಮೊದಲು ನನ್ನ ಇಲಾಖೆಯನ್ನು ಬೇರೆಯವರಿಗೆ ಕೊಟ್ಟಿದ್ದರು. ಆದರೆ ಉಪಮುಖ್ಯಮಂತ್ರಿಗಳು (ಡಿಕೆಶಿ), ಕಷ್ಟದ ಇಲಾಖೆ ಕೊಡಿ ಅವನು ನಿಭಾಯಿಸುತ್ತಾನೆ ಎಂದು ಹೇಳಿ ನನಗೆ ಶಿಕ್ಷಣ ಇಲಾಖೆ ಕೊಡಿಸಿದರು. ಆರಂಭದಲ್ಲಿ ಶಿಕ್ಷಕರು ನನ್ನ ಮನೆ ಮುಂದೆ ಸಾಲುಗಟ್ಟಿ ಬರುತ್ತಿದ್ದರು, ಈಗ ಪರಿಸ್ಥಿತಿ ನಿಭಾಯಿಸುವ ಅನುಭವ ನನಗಾಗಿದೆ' ಎಂದರು. ಅಲ್ಲದೆ, ಶಿಕ್ಷಕರ ವೇತನ ಹೆಚ್ಚಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ವೇದಿಕೆ ಮೇಲೆಯೇ ಮನವಿ ಸಲ್ಲಿಸಿದರು.

ಸಾಧನೆಯೋ ಅಥವಾ ಅಣಕವೋ?

ಸಚಿವರ ಈ 'ಅತಿಥಿ ಶಿಕ್ಷಕರ ಸಾಧನೆ'ಯ ಮಾತಿಗೆ ಬಿಎಡ್ ಮತ್ತು ಡಿಎಡ್ ಪದವೀಧರರು ಹಾಗೂ ನಿರುದ್ಯೋಗಿಗಳ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 'ಸಾವಿರಾರು ಜನರು ಶಿಕ್ಷಕರ ತರಬೇತಿ ಪಡೆದು ಕೆಲಸವಿಲ್ಲದೆ ಬೀದಿಯಲ್ಲಿದ್ದಾರೆ. ಸರ್ಕಾರ ಅವರಿಗೆ ಕಾಯಂ ಕೆಲಸ ನೀಡುವ ಬದಲು ಕೇವಲ 10 ಸಾವಿರ ರೂಪಾಯಿ ಚಿಲ್ಲರೆ ಕಾಸಿಗೆ ಅತಿಥಿ ಶಿಕ್ಷಕರನ್ನಾಗಿ ದುಡಿಸಿಕೊಳ್ಳುತ್ತಿದೆ. ಲಕ್ಷಾಂತರ ಅರ್ಹ ಪದವೀಧರರು ಸರಿಯಾಗಿ ಜೀವನ ಕಟ್ಟಿಕೊಳ್ಳಲಾಗದೇ ಸಮಾಜದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲಾಗದೇ ಹೆಣಗಾಡುವಂತೆ ಮಾಡಿರುವುದನ್ನೇ ಸಾಧನೆ ಎಂದು ಹೇಳಿಕೊಳ್ಳಲು ಸಚಿವರಿಗೆ ನಾಚಿಕೆಯಾಗಬೇಕು' ಎಂದು ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ದಾವಣಗೆರೆಯಲ್ಲಿ 'ಒಳಮೀಸಲಾತಿ' ಕಿಚ್ಚು:

ಇತ್ತ ಬೆಂಗಳೂರಿನಲ್ಲಿ ಸಚಿವರು ಭಾಷಣ ಮಾಡುತ್ತಿದ್ದರೆ, ಅತ್ತ ದಾವಣಗೆರೆಯ ಜಯದೇವ ವೃತ್ತದಲ್ಲಿ ಮಾದಿಗ ಸಮುದಾಯದವರು ದಿಢೀರ್ ಪ್ರತಿಭಟನೆ ನಡೆಸಿದರು. ದಲಿತ ಮುಖಂಡ ಆಲೂರು ನಿಂಗರಾಜ್ ನೇತೃತ್ವದಲ್ಲಿ ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ ಹೋರಾಟಗಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 'ರಾಜ್ಯದಲ್ಲಿ ಖಾಲಿ ಇರುವ 56 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಮುನ್ನ ಎಸ್‌ಸಿ ಒಳಮೀಸಲಾತಿಯನ್ನು ಜಾರಿಗೊಳಿಸಲೇಬೇಕು. ಒಳಮೀಸಲಾತಿ ನೀಡದೆ ನೇಮಕಾತಿ ಅಧಿಸೂಚನೆ ಹೊರಡಿಸಿದರೆ ನಾವು ಸಹಿಸುವುದಿಲ್ಲ' ಎಂದು ಎಚ್ಚರಿಸಿದರು. ಒಂದು ವೇಳೆ ಸರ್ಕಾರ ಹಠಕ್ಕೆ ಬಿದ್ದರೆ ಮುಂದಿನ ದಿನಗಳಲ್ಲಿ ದಾವಣಗೆರೆ ಬಂದ್ ಮಾಡುವುದಾಗಿ ಅವರು ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಒಟ್ಟಾರೆಯಾಗಿ, ಒಂದು ಕಡೆ ಸರ್ಕಾರದ ಸಾಧನೆಯ ಜಪ, ಇನ್ನೊಂದೆಡೆ ಸರಣಿ ಪ್ರತಿಭಟನೆಗಳು ಕರ್ನಾಟಕದ ಶಿಕ್ಷಣ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿವೆ.