Winter Session: ಇಂದಿನಿಂದ ಉತ್ತರಾಧಿವೇಶನ: ಸರ್ಕಾರ V/s ಕಾಂಗ್ರೆಸ್‌ ಕದನ!

  • ಇಂದಿನಿಂದ ಉತ್ತರಾಧಿವೇಶನ: ಸರ್ಕಾರ ವರ್ಸಸ್‌ ಕಾಂಗ್ರೆಸ್‌ ಕದನ
  •  ಚುನಾವಣೆ ಹೊಸ್ತಿಲಲ್ಲಿ 10 ದಿನ ರಾಜಕೀಯ ಮೇಲಾಟಕ್ಕೆ ಬೆಳಗಾವಿ ಸಜ್ಜು
  •  ಸರ್ಕಾರ ತರಾಟೆಗೆ ವಿಪಕ್ಷ ಸನ್ನದ್ಧ
  • ತಿರುಗೇಟು ನೀಡಲು ಸರ್ಕಾರವೂ ರೆಡಿ
Winter session starts in Belagavi from today rav

 ಬೆಳಗಾವಿ ಸುವರ್ಣಸೌಧ (ಡಿ.19) : ಚುನಾವಣಾ ಸಾಮೀಪ್ಯವು ಸೋಮವಾರದಿಂದ ಕುಂದಾನಗರಿ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನವನ್ನು ತಮ್ಮ ಪ್ರಚಾರದ ಅಖಾಡವಾಗಿ ಪರಿವರ್ತಿಸಲು ಆಡಳಿತ ಹಾಗೂ ಪ್ರತಿಪಕ್ಷಗಳನ್ನು ಸಜ್ಜಾಗುವಂತೆ ಮಾಡಿದ್ದು, ಪರಿಣಾಮ ಮುಂದಿನ 10 ದಿನಗಳ ಕಾಲ ರಾಜಕೀಯಪ್ರೇರಿತ ವಿಚಾರಗಳ ಮೇಲಾಟವನ್ನು ಉಭಯ ಕಲಾಪಗಳಲ್ಲಿ ನಿರೀಕ್ಷಿಸಬಹುದು.

ಗಡಿ ವಿವಾದದ ಕಿಚ್ಚು ಆರುವ ಮೊದಲೇ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಭ್ರಷ್ಟಾಚಾರ, ಚಿಲುಮೆ ಮತದಾರರ ಪಟ್ಟಿಹಗರಣ, ಪಿಎಸ್‌ಐ ಹಗರಣದಂತಹ ವಿಷಯ ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.

Assembly session: ಬೆಳಗಾವಿ ಸುವರ್ಣಸೌಧದಲ್ಲಿ ವೀರ್ ಸಾವರ್ಕರ್‌ ಫೋಟೋ ಅನಾವರಣ

ಕಾಂಗ್ರೆಸ್‌ ಅಸ್ತ್ರಗಳು

  •  ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದ ಸರ್ಕಾರದ ಕಾರ್ಯವೈಖರಿ
  •  ಚಿಲುಮೆ ಸಂಸ್ಥೆ ನಡೆಸಿದ ಮತದಾರರ ಮಾಹಿತಿಗಳ ಸಂಗ್ರಹ ಪ್ರಕರಣ
  • . ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿಯಲ್ಲಿ ನಡೆದಿರುವ ಹಗರಣ
  •  ಸರ್ಕಾರ ಗ್ರಾಪಂ, ತಾಪಂ, ಜಿಪಂ ಚುನಾವಣೆ ನಡೆಸಿಲ್ಲದಿರುವುದು
  •  ಮಹದಾಯಿ, ಕೃಷ್ಣಾ ಯೋಜನೆ ಅನುಷ್ಠಾನದಲ್ಲಿ ಆಗಿರುವ ನಿಧಾನ

ಸರ್ಕಾರದ ಪ್ರತ್ಯಸ್ತ್ರ

  •  ಮಂಗಳೂರು ಕುಕ್ಕರ್‌ ಬಾಂಬ್‌ ಕುರಿತು ಡಿ.ಕೆ.ಶಿವಕುಮಾರ್‌ ನೀಡಿದ ಹೇಳಿಕೆ
  •  ಸಾವರ್ಕರ್‌ ಫೋಟೋ ಅನಾವರಣ, ಏಕರೂಪ ನಾಗರಿಕ ಸಂಹಿತೆ ಜಾರಿ ಯತ್ನ
  •  ಎಸ್ಸಿ, ಎಸ್ಟಿಮೀಸಲು ಹೆಚ್ಚಳ ಸುಗ್ರೀವಾಜ್ಞೆಗೆ ವಿಧೇಯಕ ರೂಪ ನೀಡಲು ಸಜ್ಜು
  • . ಒಳ ಮೀಸಲಾತಿ ಕುರಿತು ಸರ್ಕಾರದಿಂದ ಅಧಿವೇಶನದಲ್ಲಿ ನಿರ್ಣಯ ಸಂಭವ
  •  ತನ್ಮೂಲಕ ಕಾಂಗ್ರೆಸ್ಸಿನ ಮತ ಬ್ಯಾಂಕ್‌ ಅನ್ನೇ ಸೆಳೆಯಲು ಭರ್ಜರಿ ತಯಾರಿ

ಸಂಭಾವ್ಯ ಮಸೂದೆಗಳು

  •  7 ದಿನದಲ್ಲಿ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲು ಭೂಪರಿವರ್ತನೆ ವಿಧೇಯಕ
  •  ಕನ್ನಡ ಭಾಷೆಗೆ ಸಂಬಂಧಿಸಿದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ
  •  ಪರಿಶಿಷ್ಟಜಾತಿ, ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಕಾಯಿದೆ ರೂಪ ಕೊಡಲು ವಿಧೇಯಕ
  • ಕಾಂಗ್ರೆಸ್‌ ವಿರೋಧದ ನಡುವೆಯೂ ಏಕರೂಪ ನಾಗರಿಕ ಸಂಹಿತೆ ಕುರಿತು ಮಸೂದೆ ಸಂಭವ
  •  ಭೂಕಂದಾಯ ತಿದ್ದುಪಡಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಮಂಡನೆ ನಿರೀಕ್ಷೆ

ಇದೇ ವೇಳೆ ಆಡಳಿತಾರೂಢ ಬಿಜೆಪಿಯು ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ವಿಧೇಯಕ ರೂಪ ನೀಡಲು ಹಾಗೂ ಒಳ ಮೀಸಲಾತಿ ಕುರಿತು ಅಧಿವೇಶನದ ಅವಧಿಯಲ್ಲೇ ನಿರ್ಣಯ ಮಾಡುವ ಮೂಲಕ ಕಾಂಗ್ರೆಸ್‌ ಹೂಡುವ ಬಾಣಗಳನ್ನು ಮರೆಗೆ ಸರಿಸಲು ಮತ್ತು ದಶಕಗಳಿಂದ ಕಾಂಗ್ರೆಸ್‌ ಪಕ್ಷದ ಮತ ಬ್ಯಾಂಕ್‌ನಂತಿರುವ ಪರಿಶಿಷ್ಟವರ್ಗಗಳನ್ನು ತಮ್ಮ ಸೆಳೆಯಲು ಕಾರ್ಯಸೂಚಿ ಸಿದ್ಧಪಡಿಸಿದೆ. ಇದಕ್ಕೆ ಸದನವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲು ಬಿಜೆಪಿ ಸಜ್ಜಾಗಿದೆ.

ಇದು ಕಾರ್ಯಸಾಧುವಲ್ಲದ ಚುನಾವಣಾ ಗಿಮಿಕ್‌ ಎಂದು ಬಿಂಬಿಸಲು ಕಾಂಗ್ರೆಸ್‌ ಸಿದ್ಧತೆಯಲ್ಲಿದೆ. ಹೀಗಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳ ರಾಜಕೀಯ ಮೇಲಾಟಕ್ಕೆ ಅಧಿವೇಶನ ಸಾಕ್ಷಿಯಾಗುವ ಸಾಧ್ಯತೆಯೇ ಹೆಚ್ಚು.

ಒಳಮೀಸಲಿಗಾಗಿ ಈಗ ದಲಿತರ ಹೋರಾಟ: ಬೆಂಗಳೂರಿನಲ್ಲಿ ಪ್ರತಿಭಟನೆ

ಬೆಳಗಾವಿ ಗಡಿ ವಿವಾದದಲ್ಲಿ ಮಹಾರಾಷ್ಟ್ರ ಆಕ್ರಮಣಕಾರಿ ವರ್ತನೆ ತೋರುವ ಜತೆಗೆ ಕಾನೂನಾತ್ಮಕ ಹೋರಾಟ ನಡೆಸಿದ್ದರೂ ಪ್ರತಿಪಕ್ಷಗಳು ಎಚ್ಚರಿಸುವವರೆಗೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಜತೆಗೆ ವಿವಾದ ಸುಪ್ರೀಂಕೋರ್ಚ್‌ ಅಂಗಳದಲ್ಲಿರುವಾಗ ಕೇಂದ್ರ ಸಚಿವ ಅಮಿತ್‌ ಶಾ ಜತೆ ಸಭೆ ನಡೆಸುವ ಮೂಲಕ ಮುಖ್ಯಮಂತ್ರಿಗಳು ಎಡವಟ್ಟು ಮಾಡಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳಿಂದ ಮಹಾರಾಷ್ಟ್ರ ಹಾಗೂ ಎಂಇಎಸ್‌ ಪುಂಡರ ಆಟಾಟೋಪ ಮಿತಿ ಮೀರಿದ್ದು, ಅವರನ್ನು ಮಟ್ಟಹಾಕಲೂ ಸಹ ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಲು ಕಾಂಗ್ರೆಸ್‌ ಸಜ್ಜಾಗಿದೆ.

ಜತೆಗೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳ ವಿಳಂಬ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದಿರುವುದು, ನ್ಯಾಯಾಧಿಕರಣದ ತೀರ್ಪು ರಾಜ್ಯದ ಪರವಾಗಿದ್ದರೂ ಮಹದಾಯಿ ಯೋಜನೆ ಹಾಗೂ ಕೃಷ್ಣಾ ಯೋಜನೆಗಳಲ್ಲಿ ವಿಳಂಬ ಧೋರಣೆ ಅನುಸರಿಸಿರುವುದನ್ನು ಪ್ರಸ್ತಾಪಿಸಲು ಸಿದ್ಧತೆ ಮಾಡಿಕೊಂಡಿದೆ.

ಈ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ ಮುಂದಾದರೆ ಆ ದಾಳಿಯಿಂದ ತಪ್ಪಿಸಿಕೊಂಡು ಚರ್ಚೆಯ ಹಾದಿ ಬೇರೆಡೆ ತಿರುಗಿಸಲು ಕುಕ್ಕರ್‌ ಬಾಂಬ್‌ ಸ್ಫೋಟದ ಬಗ್ಗೆ ಡಿ.ಕೆ.ಶಿವಕುಮಾರ್‌ ನೀಡಿದ್ದ ಹೇಳಿಕೆಯನ್ನು ಬಿಜೆಪಿ ವಿವಾದ ಮಾಡುವ ಸಾಧ್ಯತೆಯಿದೆ. ಇದಲ್ಲದೆ ವಿ.ಡಿ.ಸಾವರ್ಕರ್‌ ಅವರ ಫೋಟೋ ಸುವರ್ಣಸೌಧದಲ್ಲಿ ಅನಾವರಣ, ಪಠ್ಯಕ್ರಮ ತಿದ್ದುಪಡಿಯಂತಹ ಮತ್ತೊಂದು ವಿವಾದಕ್ಕೆ ಜನ್ಮ ನೀಡುವ ಸಾಧ್ಯತೆಯಿದೆ.

ಮೊದಲ ದಿನದ ಕಲಾಪ ಸಂತಾಪಕ್ಕೆ ಸೀಮಿತ:

ಮೊದಲ ದಿನವಾದ ಸೋಮವಾರ ಕಳೆದ ಅಧಿವೇಶನದಿಂದ ಈಚೆಗೆ ನಿಧನರಾಗಿರುವ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು, ಉದ್ಯಮಿ ಟಿ.ಮೋಹನ್‌ದಾಸ್‌ ಪೈರಂತಹ ಗಣ್ಯರಿಗೆ ಸಂತಾಪ ಸೂಚಿಸಲು ಸೀಮಿತವಾಗಲಿದೆ. ಎರಡನೇ ದಿನದಿಂದ ಕದನ ಕಾವು ತೀವ್ರಗೊಳ್ಳಲಿದೆ.

ಇದು ಈ ಸರ್ಕಾರದ ಅವಧಿಯಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಅಂತಿಮ ಅಧಿವೇಶನ ಹಾಗೂ ವಿಷಯಾಧಾರಿತವಾಗಿ ನಡೆಯುವ ಸರ್ಕಾರದ ಕೊನೆಯ ಕಲಾಪವಾಗಿದೆ. ಜತೆಗೆ ಸದನದ ಒಳಗಿನ ಹೋರಾಟವಲ್ಲದೆ ಸದನದ ಹೊರಗಡೆಯೂ ಸರ್ಕಾರದ ವಿರುದ್ಧ 61 ಪ್ರತಿಭಟನೆಗಳಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ಸದನದ ಒಳ ಹಾಗೂ ಹೊರಗಿನ ಹೋರಾಟಗಳು ಕುತೂಹಲ ಹುಟ್ಟುಹಾಕಿವೆ.

ಹಾಜರಾತಿ ಕೊರತೆ ಕಾಡುವ ಸಾಧ್ಯತೆ:

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರು ಸದನದಲ್ಲಿ ಭಾಗವಹಿಸಲು ಆಸಕ್ತಿ ತೋರಲಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಕ್ಷೇತ್ರದಲ್ಲಿ ಸಂಚಾರ, ಜನ ಸಂಪರ್ಕ, ಪ್ರತಿಯೊಂದು ಮದುವೆ, ಸಾವು, ಹುಟ್ಟುಹಬ್ಬ, ನಾಮಕರಣದ ಆಹ್ವಾನಗಳಲ್ಲಿ ಯಾವುದನ್ನೂ ಕಡೆಗಣಿಸಲಾಗದ ಸಮಯವಾದ್ದರಿಂದ ಮೂರೂ ಪಕ್ಷಗಳ ಶಾಸಕರು ಕಲಾಪದತ್ತ ಆಸಕ್ತಿ ತೋರುವ ಲಕ್ಷಣ ಕಾಣುತ್ತಿಲ್ಲ. ಹೀಗಾದರೆ ಸದನ ಕಳೆಗುಂದುವ ಸಾಧ್ಯತೆಯಿದೆ.

ಮಂಡನೆಯಾಗಲಿರುವ ಪ್ರಮುಖ ವಿಧೇಯಕ:

ಭೂ ಪರಿವರ್ತನೆಯನ್ನು ಏಳು ದಿನಗಳ ಒಳಗಾಗಿ ಮಾಡುವ ಕುರಿತು ಕರ್ನಾಟಕ ಭೂಪರಿವರ್ತನೆ ವಿಧೇಯಕ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಕರ್ನಾಟಕ ಪ್ರದೇಶ ವಿಶೇಷ ಹೂಡಿಕೆ ವಿಧೇಯಕ, ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿ ಬೆಳೆ ಬೆಳೆದಿರುವವರಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ನೀಡುವ ಬಗೆಗಿನ ಕಂದಾಯ ತಿದ್ದುಪಡಿ ಕಾಯಿದೆ ಸೇರಿ ಆರು ಪ್ರಮುಖ ವಿಧೇಯಕ ಮಂಡನೆಗೆ ನಿರ್ಧಾರ ಮಾಡಲಾಗಿದೆ.

Belagavi Session: ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡನೆಗೆ ಸಾಕ್ಷಿಯಾಗುತ್ತಾ ಬೆಳಗಾವಿ ಅಧಿವೇಶನ?

ಜತೆಗೆ ಎಸ್ಸಿ ಹಾಗೂ ಎಸ್ಟಿಮೀಸಲಾತಿ ಹೆಚ್ಚಳಕ್ಕೆ ಕಾಯಿದೆ ರೂಪ ನೀಡುವ ವಿಧೇಯಕ ಹಾಗೂ ಏಕರೂಪ ನಾಗರಿಕ ಸಂಹಿತೆ ಕಾಯಿದೆಯನ್ನೂ ಜಾರಿ ಮಾಡುವ ಸಾಧ್ಯತೆಯಿದೆ. ಏಕರೂಪ ನಾಗರಿಕ ಕಾಯಿದೆ ಜಾರಿಯಾದರೆ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಸಲುವಾಗಿ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿರುವುದರಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಲಿದೆ.

ಸದನದ ಹೊರಗೂ ಹೋರಾಟದ ಬಿಸಿ:

ಕಬ್ಬು ಬೆಳೆಗಾರರ ಬೇಡಿಕೆ, ರೈತರ ಸಮಸ್ಯೆ, ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳ ಸೇರಿದಂತೆ 61ಕ್ಕೂ ಹೆಚ್ಚು ಪ್ರತಿಭಟನೆಗಳು ಸುವರ್ಣಸೌಧದ ಎದುರು ನಡೆಯಲಿವೆ. ಪಿಎಸ್‌ಐ ಆಕಾಂಕ್ಷಿಗಳು, ಮೇಕೆದಾಟು, ಎತ್ತಿನಹೊಳೆ, ಕಳಸಾ ಬಂಡೂರಿ ನೀರಾವರಿ ಯೋಜನೆಗಳ ಫಲಾನುಭವಿ ರೈತರೂ ಹೋರಾಟ ಮಾಡುವುದರಿಂದ ಸರ್ಕಾರಕ್ಕೆ ಹೋರಾಟದ ಬಿಸಿ ತಾಗಲಿದೆ.

Latest Videos
Follow Us:
Download App:
  • android
  • ios