Asianet Suvarna News Asianet Suvarna News

ಒಳಮೀಸಲಿಗಾಗಿ ಈಗ ದಲಿತರ ಹೋರಾಟ: ಬೆಂಗಳೂರಿನಲ್ಲಿ ಪ್ರತಿಭಟನೆ

ಮುಂಬರುವ ವಿಧಾನಸಭಾ ಚುನಾವಣೆ ಒಳಗಾಗಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಕ್ರಮ ವಹಿಸಬೇಕು. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸದಿದ್ದರೆ ಸಂಘಟನೆಗಳಿಂದ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ವಿವಿಧ ದಲಿತ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. 

Dalits are now fighting for internal reservation at bengaluru gvd
Author
First Published Dec 12, 2022, 10:30 AM IST

ಬೆಂಗಳೂರು (ಡಿ.12): ಮುಂಬರುವ ವಿಧಾನಸಭಾ ಚುನಾವಣೆ ಒಳಗಾಗಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಕ್ರಮ ವಹಿಸಬೇಕು. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸದಿದ್ದರೆ ಸಂಘಟನೆಗಳಿಂದ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ವಿವಿಧ ದಲಿತ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳಿಂದ ‘ಬೆಂಗಳೂರು ಚಲೋ’ ಅಡಿ ಆಗಮಿಸಿದ ಕಾರ್ಯಕರ್ತರು ಭಾನುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಹೋರಾಟದಲ್ಲಿ ಈ ರೀತಿ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಮುಖಂಡರು ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ಜಾತಿವಾದಿಗಳು ಎಂದು ಪರಿಗಣಿಸುತ್ತೇವೆ. ಆಡಳಿತಾರೂಢ ಬಿಜೆಪಿ ಸೇರಿ ವಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಮತ ನೀಡುವುದಿಲ್ಲ. ಸಂಘಟನೆಗಳಿಂದಲೇ ಚುನಾವಣಾ ಕಣಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪ್ರಕಟಿಸಿದರು. ಮುಖಂಡರಾದ ಎಂಆರ್‌ಎಚ್‌ಎಸ್‌ ರಾಜ್ಯಾಧ್ಯಕ್ಷ ಶಿವರಾಯ್‌ ಅಕ್ಕರಕಿ, ಪ್ರಧಾನ ಸಂಚಾಲಕ ಎಸ್‌.ಮಾರೆಪ್ಪ, ಜಿ.ಬಿ.ರಾಜು, ಅಂಬಣ್ಣ ಅರೋಲಿಕರ್‌, ಬಿ.ಗೋಪಾಲ್‌, ಕರಿಯಪ್ಪ ಗುಡಿಮನಿ, ವೆಂಕಟಗಿರಿಯಯ್ಯ ಸೇರಿ ಹಲವಾರು ಮುಖಂಡರಿದ್ದರು.

ಸರ್ಕಾರದಿಂದ 10 ಕೋಟಿ ಬಂದಿದ್ದು ಮಠದ ಅಭಿವೃದ್ಧಿಗೆ: ವಚನಾನಂದ ಶ್ರೀ

8-10 ದಿನದಲ್ಲಿ ತೀರ್ಮಾನ, ಸೋಮಣ್ಣ: ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ಸದಾಶಿವ ಆಯೋಗದ ವರದಿಯನ್ನು ಯಾವ ರೀತಿಯಲ್ಲಿ ಜಾರಿಗೆ ತರಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಕೂಲಂಕಷವಾಗಿ ಸಮಾಲೋಚನೆ ಮಾಡಿದ್ದಾರೆ. ಮುಂದಿನ ಎಂಟು-ಹತ್ತು ದಿನಗಳ ಒಳಗಾಗಿ ಈ ಬಗ್ಗೆ ಸಕಾರಾತ್ಮಕ ತೀರ್ಮಾನ ಹೊರಬರಲಿದೆ. ಕ್ಯಾಬಿನೆಟ್‌ ಉಪಸಮಿತಿಯನ್ನು ರಚಿಸಿ ಕ್ರಮ ವಹಿಸಿದ್ದೇವೆ. ಪ್ರತಿಭಟನೆ ಕೈಬಿಟ್ಟು ಸಹಕರಿಸಬೆಕು ಎಂದು ಮನವಿ ಮಾಡಿದರು. ಆದರೆ ಇದನ್ನು ಒಪ್ಪದ ಧರಣಿ ನಿರತರು ಮುಖ್ಯಮಂತ್ರಿಗಳು ಸ್ಥಳಕ್ಕೆ ಬರುವಂತೆ ಪ್ರತಿಭಟನೆ ನಡೆಸಿದರು. ಸಂಜೆ 6.30ರ ಸುಮಾರಿಗೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ರಾಗಿ ಖರೀದಿಸುವಲ್ಲೂ ರೈತರಿಗೆ ಬಿಜೆಪಿ ದ್ರೋಹ: ಕಾಂಗ್ರೆಸ್‌ ಕಿಡಿ

ಒಳ ಮೀಸಲಾತಿ ವರ್ಗೀಕರಣದ ಹೋರಾಟ ಶುರುವಾಗಿ 25 ವರ್ಷ ಕಳೆದಿವೆ. ನ್ಯಾ. ಎ.ಜೆ. ಸದಾಶಿವ ಆಯೋಗ ಸರ್ಕಾರಕ್ಕೆ ವರದಿ ನೀಡಿ 10 ವರ್ಷ ಕಳೆದಿವೆ. ನ್ಯಾ. ಅರುಣ್‌ ಮಿಶ್ರಾ ನ್ಯಾಯಾಂಗ ಪೀಠವು ಒಳಮೀಸಲಾತಿ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದ ಬಳಿಕವೂ ಸರ್ಕಾರ ಕೈಕಟ್ಟಿಕುಳಿತಿದೆ ಎಂದು ಮುಖಂಡರು ದೂರಿದರು. ರಾಜ್ಯ ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ ರೀತಿಯಲ್ಲಿ ಒಳ ಮೀಸಲಾತಿ ಜಾರಿಗಾಗಿ ಸುಗ್ರೀವಾಜ್ಞೆ ಹೊರಡಿಸಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸಂವಿಧಾನದ 341(3)ಕ್ಕೆ ತಿದ್ದುಪಡಿ ತರುವುದರ ಮೂಲಕ ಒಳ ಮೀಸಲಾತಿ ಜಾರಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios