Asianet Suvarna News Asianet Suvarna News

Ayodhya ರಾಮಮಂದಿರದಲ್ಲಿ ಸಾಮಾಜಿಕ ಸೇವೆಯೇ ಹರಕೆ: ಪೇಜಾವರ ಶ್ರೀ

ಕೋಟ್ಯಂತರ ಭಕ್ತರ ಆಶಯದಂತೆ ನಿರ್ಮಾಣಗೊಳ್ಳುತ್ತಿರುವ ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನಿಗೆ ಪ್ರತ್ಯೇಕ ಹರಕೆ ಸೇವೆ ಎಂಬುದು ಇರುವುದಿಲ್ಲ. ಬದಲಾಗಿ ಪ್ರತಿಯೊಬ್ಬ ಭಕ್ತರು ಮಾಡಿದ ಸಮಾಜ ಸೇವೆಯನ್ನು ರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೇ ಸೇವೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
 

Vishwaprasanna Tirtha Swamiji Talks Over Ayodhya Ram Mandir At Mangaluru gvd
Author
First Published Nov 17, 2023, 5:23 AM IST

ಮಂಗಳೂರು (ನ.17): ಕೋಟ್ಯಂತರ ಭಕ್ತರ ಆಶಯದಂತೆ ನಿರ್ಮಾಣಗೊಳ್ಳುತ್ತಿರುವ ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನಿಗೆ ಪ್ರತ್ಯೇಕ ಹರಕೆ ಸೇವೆ ಎಂಬುದು ಇರುವುದಿಲ್ಲ. ಬದಲಾಗಿ ಪ್ರತಿಯೊಬ್ಬ ಭಕ್ತರು ಮಾಡಿದ ಸಮಾಜ ಸೇವೆಯನ್ನು ರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೇ ಸೇವೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರೂ ಆಗಿರುವ ಅವರು ಉಡುಪಿ ಮತ್ತು ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಶ್ರೀರಾಮ ಮಂದಿರದ ಮೂಲಕ ದೇಶದಲ್ಲಿ ರಾಮರಾಜ್ಯ ನಿರ್ಮಾಣದ ಕನಸು ಎಲ್ಲರದ್ದು. ಈ ಕನಸು ನನಸಾಗಬೇಕಾದರೆ ಪ್ರತಿಯೊಬ್ಬ ಭಕ್ತರು ಮಾಡಿದ ಸಮಾಜ ಸೇವೆಯನ್ನು ಶ್ರೀರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೇ ಸೇವೆ ಆಗಿರುತ್ತದೆ. ಭಕ್ತರಿಗಾಗಿ ಆರತಿ, ತೀರ್ಥ ಹಾಗೂ ಉತ್ತರ ಭಾರತದ ಸಿಹಿಯ ನೈವೇದ್ಯ ಇರುತ್ತದೆ. ಇದು ಬಿಟ್ಟರೆ ಹರಕೆ, ಸೇವೆ ಯಾವುದೂ ಇಲ್ಲ ಎಂದರು.

ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟಿಸ್: ನಳಿನ್ ಕಟೀಲ್ ಆಕ್ರೋಶ!

ನಮ್ಮ ಪ್ರಮುಖ ಅಪೇಕ್ಷೆ ಇರುವುದು ಶ್ರೀರಾಮನ ಆದರ್ಶ, ರಾಮರಾಜ್ಯ ಸ್ಥಾಪನೆ ಉದ್ದೇಶ. ಇದು ಈಡೇರಬೇಕಾದರೆ, ಭಕ್ತರು ಸ್ವಯಂ ಆಗಿ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅಂದರೆ ರಾಮನ ದರ್ಶನ, ರಾಮನ ಭಕ್ತಿ, ದೇಶ ಸೇವೆ ಎಂದರೆ ಬೇರೆ ಅಲ್ಲ, ಅದೆಲ್ಲವೂ ಒಂದೇ ಎಂಬ ಭಾವದಿಂದ ನಮ್ಮನಮ್ಮ ಊರು, ಕೇರಿ, ಗ್ರಾಮಗಳಲ್ಲಿ ದುರ್ಬಲ, ಅಶಕ್ತರಿಗೆ, ದೀನರಿಗೆ ಕೈಲಾದ ರೂಪದಲ್ಲಿ ನೆರವಾಗಬೇಕು. ಆಡಂಬರದ ವಿವಾಹ, ಆಚರಣೆಗಳ ಬದಲು ಆ ಮೊತ್ತವನ್ನು ಸಮಾಜ ಸೇವೆಗೆ ನೀವೇ ನೀಡಿ ಕೃತಾರ್ಥರಾಗುವುದೇ ರಾಮನ ಸೇವೆ, ಅರ್ಥಾತ್‌ ದೇಶ ಸೇವೆ ಎಂದರು.

48 ದಿನಗಳ ಬ್ರಹ್ಮ ಕಲಶೋತ್ಸವ: ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2024 ಜನವರಿ 22ರಿಂದ ಮಾ.10ರವರೆಗೆ 48 ದಿನಗಳ ಕಾಲ ನಡೆಯಲಿದೆ. ಜ.22ರಂದು ಅಭಿಜಿನ್‌ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ರಾಮನ ಭವ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ‍್ಳಲು ಅನನುಕೂಲ ಆಗಬಹುದು. ಆದರೆ ಉಳಿದ 48 ದಿನಗಳ ಮಂಡಲೋತ್ಸವದಲ್ಲಿ ದೇಶದ ಎಲ್ಲ ಜನ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡುವುದಾಗಿ ಶ್ರೀ ಹೇಳಿದರು.

ದೀಪೋತ್ಸವ ಮೂಲಕ ಪ್ರತಿಷ್ಠಾಚರಣೆ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆ ಹಾಗೂ ಮಂದಿರ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂದು ರಾತ್ರಿ 5 ಶತಮಾನದ ಸಂಕೇತವಾಗಿ ಐದು ದೀಪಗಳನ್ನು ಪ್ರತಿ ಮನೆಗಳಲ್ಲಿ ಬೆಳಗುವ ಮೂಲಕ ಇದನ್ನು ದೀಪೋತ್ಸವವಾಗಿಯೂ ಆಚರಿಸಬೇಕು. ಇಡೀ ದಿನ ದೇವಸ್ಥಾನ, ಮಂದಿರ, ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಭಜನೆ ನಡೆಸಬೇಕು ಎಂದು ಶ್ರೀ ಆಶಿಸಿದರು.

ಸಮಾಜ ಸೇವೆ ಮಾಡಿದವರಿಗೆ ಕಲಶಸೇವೆ ಅವಕಾಶ: ಒಟ್ಟು 48 ದಿನಗಳ ಕಾಲ ಅಯೋಧ್ಯೆಯಲ್ಲಿ ಮಂಡಲ ಉತ್ಸವ ನಡೆಯಲಿದ್ದು, ಈ ವೇಳೆ ಕಲಶ ಸೇವೆ ಸಲ್ಲಿಸಬಹುದು. ಒಂದು ರಜತ ಕಲಶಕ್ಕೆ 1 ಲಕ್ಷ ರು. ನಿಗದಿ ಮಾಡಲಾಗಿದ್ದು, ಕಲಶಾಭಿಷೇಕದ ನಂತರ ಪ್ರಸಾದ ರೂಪದಲ್ಲಿ ಅದನ್ನು ಸೇವಾಕರ್ತರಿಗೆ ಮರಳಿಸಲಾಗುವುದು ಎಂದು ಪೇಜಾವರ ಶ್ರೀ ತಿಳಿಸಿದರು. ಕಲಶ ಸೇವಾ ಬಾಬ್ತಿನ 10 ಪಟ್ಟು ಹಣವನ್ನು ಅವರು ಸಮಾಜ ಸೇವೆಗೆ ವಿನಿಯೋಗಿಸಿದ್ದರೆ ಮಾತ್ರ ಈ ಕಲಶ ಸೇವೆಗೆ ಅರ್ಹರಾಗುತ್ತಾರೆ. ಇದರ ನೋಂದಣಿಗಾಗಿ ವಿಶೇಷ ಆ್ಯಪ್‌ ರೂಪಿಸಲಾಗಿದೆ ಎಂದರು.

2023-24ನೇ ಹಣಕಾಸು ವರ್ಷದಲ್ಲಿ ಮನೆ ನಿರ್ಮಾಣ, ರೋಗಿಗಳಿಗೆ, ಶಿಕ್ಷಣಕ್ಕೆ, ಗೋಸೇವೆ ಇತ್ಯಾದಿಗಳಿಗೆ 10 ಲಕ್ಷ ರು. ಮಿಕ್ಕಿ ವಿನಿಯೋಗಿಸಿದವರು ತಮ್ಮ ಸೇವೆಯ ವಿವರಗಳನ್ನು ಗೆಜೆಟೆಡ್ ಆಫೀಸರ್ ಮೂಲಕ ದೃಢಪಡಿಸಿಕೊಂಡು ಅಯೋಧ್ಯೆ ಮಂಡಲ ಉತ್ಸವ ಡಾಟ್.ಕಾಮ್‌ನಲ್ಲಿ ಹೆಸರು ನೋಂದಣಿ ಮಾಡಬೇಕು. ಡಿ.1ರಂದು ಆ್ಯಪ್‌ ಚಾಲನೆಗೊಳ್ಳಲಿದೆ ಎಂದರು. ರಜತ ಕಲಶ ಸೇವೆಗೆ ನೋಂದಣಿ ಮಾಡಿಕೊಂಡವರು 48 ದಿವಸದಲ್ಲಿ ತಮಗೆ ಅನುಕೂಲಕರ ದಿನ ಆಯ್ಕೆ ಮಾಡಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಂಡವರಿಗೆ ರಾಮಜನ್ಮಭೂಮಿ ಕ್ಷೇತ್ರ ಟ್ರಸ್ಟ್ ಧಾರ್ಮಿಕ ಸಮಿತಿಯಿಂದ ಸರ್ಟಿಫಿಕೇಟ್ ನೀಡಲಾಗುವುದು. ಇದರ ಆಧಾರದಲ್ಲಿ ಪಾಸ್‌ ವಿತರಿಸಲಾಗುವುದು ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಖಾಲಿ: ಪ್ರಿಯಾಂಕ್ ಖರ್ಗೆ

ರಾಮನ ಆದರ್ಶ, ರಾಮರಾಜ್ಯ ಸ್ಥಾಪನೆ ಉದ್ದೇಶ ಈಡೇರಬೇಕಾದರೆ ಭಕ್ತರು ಸ್ವಯಂ ಆಗಿ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಊರು, ಕೇರಿ, ಗ್ರಾಮಗಳಲ್ಲಿ ದುರ್ಬಲ, ಅಶಕ್ತರಿಗೆ, ದೀನರಿಗೆ ಕೈಲಾದ ರೂಪದಲ್ಲಿ ನೆರವಾಗಬೇಕು. ಆಡಂಬರದ ವಿವಾಹ, ಆಚರಣೆಗಳ ಬದಲು ಆ ಮೊತ್ತವನ್ನು ಸಮಾಜ ಸೇವೆಗೆ ನೀಡಿ ಕೃತಾರ್ಥರಾಗುವುದೇ ರಾಮನ ಸೇವೆ, ಅರ್ಥಾತ್‌ ದೇಶ ಸೇವೆ.
-ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಶ್ರೀ ಹಾಗೂ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು

Follow Us:
Download App:
  • android
  • ios