Mangaluru: ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟಿಸ್: ನಳಿನ್ ಕಟೀಲ್ ಆಕ್ರೋಶ!
ಕರಾವಳಿಯ ಹಿಂದೂ ಕಾರ್ಯಕರ್ತರ ವಿರುದ್ದ ಮತ್ತೆ ಗಡೀಪಾರು ಅಸ್ತ್ರ ಪ್ರಯೋಗಿಸಲಾಗಿದೆ.ದ.ಕ ಜಿಲ್ಲೆಯ ಐವರು ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟೀಸ್ ನೀಡಲಾಗಿದ್ದು, ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ನ.16): ಕರಾವಳಿಯ ಹಿಂದೂ ಕಾರ್ಯಕರ್ತರ ವಿರುದ್ದ ಮತ್ತೆ ಗಡೀಪಾರು ಅಸ್ತ್ರ ಪ್ರಯೋಗಿಸಲಾಗಿದೆ.ದ.ಕ ಜಿಲ್ಲೆಯ ಐವರು ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟೀಸ್ ನೀಡಲಾಗಿದ್ದು, ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗುವಂತೆ ಸೂಚನೆ ನೀಡಲಾಗಿದೆ. ನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾಗಿದ್ದ ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ಅಸ್ತ್ರ ಪ್ರಯೋಗಿಸಲಾಗಿದ್ದು, ಯಾಕೆ ಗಡೀಪಾರು ಮಾಡಬಾರದು ಎಂದು ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ನವೆಂಬರ್ 22ರಂದು ಪುತ್ತೂರು ಸಹಾಯಕ ಆಯುಕ್ತರೆದುರು ಹಾಜರಾಗಲು ಸೂಚನೆ ನೀಡಲಾಗಿದೆ.
ಭಜರಂಗದಳ ಕಾರ್ಯಕರ್ತರಾದ ಲತೇಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಗೆ ನೋಟೀಸ್ ನೀಡಲಾಗಿದೆ. ದಿನೇಶ್, ಪ್ರಜ್ವಲ್ ಭಜರಂಗದಳದಲ್ಲಿ ಪುತ್ತೂರು ತಾಲೂಕು ಜವಾಬ್ದಾರಿ ಹೊಂದಿದ್ದರು. ಲತೇಶ್ ಗುಂಡ್ಯ ಭಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಆಗಿದ್ದಾರೆ. ಉಳಿದ ಇಬ್ಬರು ಕಾರ್ಯಕರ್ತರಾದ ನಿಶಾಂತ್ ಮತ್ತು ಪ್ರದೀಪ್ ವಿರುದ್ದವೂ ಗಡೀಪಾರು ಅಸ್ತ್ರ ಪ್ರಯೋಗಿಸಲಾಗಿದೆ. ಈ ಐವರಲ್ಲಿ ಲತೇಶ್ ಹೊರತುಪಡಿಸಿ ಉಳಿದ ನಾಲ್ಬರ ಮೇಲೆ ಒಂದೊಂದೇ ಪ್ರಕರಣಗಳಿದ್ದವು. ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿ ಆರೋಪವಿದೆ.
ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಸಂಭವ: ಸಿದ್ದರಾಮಯ್ಯ ಭವಿಷ್ಯ
ಪುತ್ತೂರು ನಗರ ಠಾಣೆ ಹಾಗೂ ಸುಳ್ಯ ಠಾಣೆಯಿಂದ ಗಡೀಪಾರಿಗೆ ಮನವಿ ಮಾಡಲಾಗಿದ್ದು, ಲತೇಶ್ ಗೆ ಬಳ್ಳಾರಿ ಜಿಲ್ಲೆಗೆ ಹಾಗೂ ಪ್ರಜ್ವಲ್ ಗೆ ಬಾಗಲಕೋಟೆ ಜಿಲ್ಲೆಗೆ ಗಡೀಪಾರು ಮಾಡಲು ಮನವಿ ಸಲ್ಲಿಸಲಾಗಿದೆ. ಕರ್ನಾಟಕ ಪೊಲೀಸ್ ಅಧಿನಿಯಮ 1953ರ ಕಲಂ 55ರಡಿ ಗಡೀಪಾರು ನೋಟೀಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾದ ಬಳಿಕ ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡೀಪಾರು ಆದೇಶ ಸಾಧ್ಯತೆ ಇದೆ. ಕಳೆದ ಜುಲೈನಲ್ಲಿ ಮಂಗಳೂರಿನ ಮೂವರು ಭಜರಂಗದಳ ಕಾರ್ಯಕರ್ತರ ಮೇಲೆ ಗಡೀಪಾರು ಅಸ್ತ್ರ ಪ್ರಯೋಗಿಸಲಾಗಿತ್ತು. ಆದರೆ ನ್ಯಾಯಾಲಯದ ಮೆಟ್ಟಿಲೇರಿ ಭಜರಂಗದಳ ಸಂಘಟನೆ ತಡೆ ತಂದಿತ್ತು.
'ನನ್ನನ್ನ ಗಡೀಪಾರು ಮಾಡಿ, ಕಾರ್ಯಕರ್ತರ ಯಾಕೆ ಮಾಡ್ತೀರಾ?: ಪುತ್ತೂರಿನ ಭಜರಂಗದಳ ಕಾರ್ಯಕರ್ತರ ವಿರುದ್ದ ಗಡೀಪಾರು ನೋಟೀಸ್ ವಿಚಾರ ಸಂಬಂಧಿಸಿ ಪುತ್ತೂರಿನಲ್ಲಿ ಸಂಸದ ನಳಿನ್ ಕಟೀಲ್ ರನ್ನ ಗಡೀಪಾರು ನೋಟೀಸ್ ಪಡೆದ ಭಜರಂಗದಳ ಕಾರ್ಯಕರ್ತರು ಭೇಟಿಯಾಗಿದ್ದಾರೆ. ಈ ವೇಳೆ ಪುತ್ತೂರು ಸಹಾಯಕ ಆಯುಕ್ತಗೆ ಕರೆ ಮಾಡಿ ನಳಿನ್ ತರಾಟೆಗೆ ತೆಗೆದುಕೊಂಡಿದ್ದಾರೆ. 'ಕಾರ್ಯಕರ್ತರ ಗಡಿಪಾರು ಮಾಡಲು ನಿಮ್ಮ ಮಾನದಂಡ ಏನು?' ಒಂದು ಕೇಸ್ ಇದ್ದವರಿಗೂ ಗಡೀಪಾರು ನೊಟೀಸ್ ನೀಡಿದ್ದೀರಲ್ಬಾ? ಹಾಗಿದ್ದರೆ ನನ್ನನ್ನ ಗಡೀಪಾರು ಮಾಡಿ, ಕಾರ್ಯಕರ್ತರ ಯಾಕೆ ಮಾಡ್ತೀರಾ? ಆದೇಶದ ಮೊದಲು ಪರಿಶೀಲಿಸಿ, ಸುಮ್ಮನೇ ಯಾರದ್ದೋ ಒತ್ತಡಕ್ಕೆ ಮಾಡಬೇಡಿ ಎಂದು ಗಡೀಪಾರು ನೊಟೀಸ್ ಪರಿಶೀಲಿಸುವಂತೆ ಪುತ್ತೂರು ಎಸಿ ಗಿರೀಶ್ ನಂದನ್ ಗೆ ನಳಿನ್ ಕಟೀಲ್ ಸೂಚಿಸಿದ್ದಾರೆ.
ವಿಷ ಕುಡಿವ ಬದಲು ಕಾಂಗ್ರೆಸ್ ಸೇರಿದೆ: ಮಾಜಿ ಶಾಸಕ ಗೌರಿಶಂಕರ್
ಇನ್ನು ಇದೇ ವೇಳೆ ಮಾತನಾಡಿದ ನಳಿನ್ ಕಟೀಲ್, ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಸುಳ್ಳು ಪ್ರಕರಣ ದಾಖಲಿಸಿ ಅಪರಾಧಿ ಅಲ್ಲದಿದ್ದರೂ ಗಡೀಪಾರು ಮಾಡ್ತಿದಾರೆ. ಪುತ್ತೂರಿನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಇಂಥ ದ್ವೇಷದ ರಾಜಕಾರಣ ಸರಿಯಲ್ಲ, ಇದನ್ನ ಖಂಡಿಸ್ತೇನೆ. ಅಧಿಕಾರಿಗಳ ತರಾಟೆಗೆ ತೆಗೊಂಡಿದೇನೆ, ಒಂದು ಕೇಸ್ ಇದ್ದವನಿಗೂ ಗಡಿಪಾರು ನೊಟೀಸ್ ಆಗಿದೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಲು ನಾವು ಬಿಡಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪುತ್ತೂರಿನಲ್ಲೇ ಎರಡು ಹತ್ಯೆ ನಡೆದಿದೆ. ಉಡುಪಿಯಲ್ಲಿ ಒಂದೇ ಮನೆಯಲ್ಲಿ ನಾಲ್ಕು ಹತ್ಯೆ ಆಗಿದೆ. ಗುಪ್ತಚರ ಇಲಾಖೆ ಏನ್ ಮಾಡ್ತಾ ಇದೆ, ಇವರೆಲ್ಲರ ಕೈ ಕಟ್ಟಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಗೂಂಡಾಗಳಿಗೆ ಲಾಭ ಆಗ್ತಿದೆ ಎಂದರು.