ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಶವದ ಬಾಯಿಗೆ ನೀರು ಬಿಟ್ಟ ಗ್ರಾಮಸ್ಥರು

ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಸಮಾಧಿಗೆ ರಂಧ್ರವನ್ನು ತೋಡಿ, ಶವದ ಬಾಯಿಗೆ ಟ್ಯಾಂಕರ್‌ ಮೂಲಕ ನೀರು ಬಿಡುವ ವಿಚಿತ್ರ ಆಚರಣೆಯನ್ನು ಮಾಡಿದ್ದಾರೆ.

Vijayapura Villagers filled mouths of corpses with water in graveyard for rain sat

ವರದಿ- ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜೂ.25): ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಸಮಾಧಿಗೆ ರಂಧ್ರವನ್ನು ತೋಡಿ, ಶವದ ಬಾಯಿಗೆ ಟ್ಯಾಂಕರ್‌ ಮೂಲಕ ನೀರು ಬಿಡುವ ವಿಚಿತ್ರ ಆಚರಣೆಯನ್ನು ಮಾಡಿದ್ದಾರೆ.

ರಾಜ್ಯಾದ್ಯಂತ ಕಾಂಗ್ರೆಸ್‌ ಸರ್ಕಾರ ಬಂತು, ಬರಗಾಲ ತಂತು ಎಂದು ಮಾತಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ಬಾರಿ‌ ಜೂನ್‌ ಕಳೆಯುತ್ತ ಬಂದರು ಮಳೆಯಾಗಿಲ್ಲ.‌ ನದಿಗಳು, ಜಲಾಶಯಗಳು ಬತ್ತಿ‌ ಹೋಗಿವೆ. ಹಳ್ಳಿ, ನಗರ ಪ್ರದೇಶಗಳಲ್ಲಿ ನೀರಿಗೆ ತತ್ವಾದ ಎದುರಾಗಿದೆ. ಈ‌ ನಡುವೆ ಜನರು ಮಳೆಗಾಗಿ ಇನ್ನಿಲ್ಲದಂತೆ ಪ್ರಯತ್ನಗಳನ್ನ ಮಾಡ್ತಿದ್ದಾರೆ. ಕತ್ತೆ ಮದುವೆ, ಕಪ್ಪೆ ಮದುವೆ, ದೇವರಲ್ಲಿ ಪ್ರಾರ್ಥನೆ ಸೇರಿದಂತೆ ಮಳೆಗಾಗಿ ಹಪಹಪಿಸುತ್ತಿದ್ದಾರೆ. ಈ ನಡುವೆ ಬರದ ನಾಡು ಅಂತಲೆ ಕುಖ್ಯಾತಿ ಗಳಿಸಿರುವ ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ವಿಚಿತ್ರ ಆಚರಣೆಯೊಂದು ನಡೆದಿದೆ. ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಸಮಾಧಿಗೆ ರಂಧ್ರವನ್ನು ತೋಡಿ, ಶವದ ಬಾಯಿಗೆ ಟ್ಯಾಂಕರ್‌ ಮೂಲಕ ನೀರು ಬಿಡುವ ವಿಚಿತ್ರ ಆಚರಣೆಯನ್ನು ಮಾಡಿದ್ದಾರೆ. 

ಮುಂಗಾರು ವಿಳಂಬ: 'ಅಲ್ಲಾಹ್ ಮಳೆ ಕರುಣಿಸು' ಎಂದು ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆ

ಶವದ ಬಾಯಿಗೆ ನೀರು ಬಿಟ್ಟರೆ ಮಳೆ ಆಗಮನ:  ಸ್ಮಶಾನದಲ್ಲಿ ಕೆಲವು ಶವಗಳು ನೀರಿಗಾಗಿ ಬಾಯಿತೆರೆದು ಕುಳಿತಿರುತ್ತವೆ. ಹೀಗಾಗಿ, ಅಂತಹ ಶವಗಳಿಗೆ ನೀರು ಬಿಡದೇ ಹೂತು ಹಾಕಿದ್ದರೆ ಊರಿಗೆ ಮಳೆ ಬರುವುದಿಲ್ಲ ಎಂಬ ವಿಚಿತ್ರ ನಂಬಿಕೆಯಿದೆ. ಹೀಗಾಗಿ, ಕಳೆದ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದವರ ಮೃತದೇಹಗಳನ್ನು ಮಣ್ಣು ಮಾಡಿ ಸಮಾಧಿ ಮಾಡಲಾಗಿದ್ದ ಶವಗಳ ಸಮಾಧಿಗೆ ರಂಧ್ರವನ್ನು ಕೊರೆದು ಶವದ ಬಾಯಿಗೆ ನೀರು ಹೋಗುವಂತೆ ಟ್ಯಾಂಕರ್‌ ಮೂಲಕ ನೀರನ್ನು ಬಿಡಲಾಗುತ್ತದೆ. ಟ್ಯಾಂಕರ್‌ ಮೂಲಕ ಗ್ರಾಮದ ಸ್ಮಶಾನಕ್ಕೆ ತೆರಳಿದ ಯುವಕರು, ಗ್ರಾಮದ ಮುಖಂಡರು ಗೋರಿಯೊಂದರ ಮೇಲೆ ಹಾರಿಯಿಂದ ರಂದ್ರ ಕೊರೆದಿದ್ದಾರೆ. ಬಳಿಕ ಅದ್ರಲ್ಲಿ ಟ್ಯಾಂಕರ್‌ ನ ಪೈಪ್‌ ಮೂಲಕ ನೀರು ಹಾಕಿದ್ದಾರೆ. ಪೈಪ್‌ ಮೂಲಕ ಹಾಕುವ ನೀರು ಶವ ಬಾಯಿ ತಲುಪುತ್ತಂತೆ. ಗೋರಿಯಲ್ಲಿರೋ ಶವದ ಬಾಯಿಗೆ ಹೀಗೆ ನೀರು ಹಾಕಿದ್ರೆ ಮಳೆಯಾಗುತ್ತೆ ಎನ್ನುವ ಗಾಢ ನಂಬಿಕೆ ಇದೆ.  ಹೀಗೆ ನೀರು ರಂದ್ರಗಳ ಮೂಲಕ ಗೋರಿಯಲ್ಲಿ ಹೂತಿರುವ ಶವದ ಬಾಯಿಗೆ ಹೋಗಿ ತಲುಪುತ್ತೆ. ಹೀಗೆ ನೀರು ತಲುಪಿದಾಗ ಆ ನೀರನ್ನ ಶವಗಳು ಸೇವಿಸುತ್ತವಂತೆ. ಬಾಯಿ ತೆರೆದು ಶವಗಳು ನೀರು ಕುಡಿಯುತ್ವೆ ಎನ್ನುವ ನಂಬಿಕೆ ಇದೆ. ನೀರು ಕುಡಿದು ಶವಗಳು ತೃಪ್ತಿಯಾದರೆ ಮಳೆಯಾಗುತ್ತೆ ಎನ್ನುವ ಗಾಢ ನಂಬಿಕೆ ಇಲ್ಲಿನ ಜನರಲ್ಲಿದೆ. 

ವಾಗೀಶ್ ಹಿರೇಮಠ ನೇತೃತ್ವದಲ್ಲಿ ವಿಚಿತ್ರ ಆಚರಣೆ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ವಿಚಿತ್ರ ಆಚರಣೆ ಮಾಡಲಾಗಿದೆ. ಮಳೆಯಾಗಲಿ ಎಂದು ಕಲಕೇರಿಯ ಸ್ಮಶಾನದಲ್ಲಿ ಹೂತ ಶವದ ಬಾಯಿಗೆ ಗ್ರಾಮಸ್ಥರು ನೀರು ಬಿಟ್ಟಿದ್ದಾರೆ.  ಗೋರಿಗೆ ರಂಧ್ರ ಕೊರೆದು ಶವದ ಬಾಯಿ ಇರುವ ಜಾಗಕ್ಕೆ ಟ್ಯಾಂಕರ್ ಮೂಲಕ ನೀರು ಹಾಕಿದ್ದಾರೆ. ಗೋರಿಯೊಳಗಿನ ಶವದ ಬಾಯಿಗೆ ನೀರು ತಲುಪುವ ಹಾಗೇ ಪೈಪ್ ನಿಂದ ನೀರು ಬಿಟ್ಟ ಗ್ರಾಮಸ್ಥರು. ಹೀಗೆ ಸ್ಮಶಾನದಲ್ಲಿ ಹೂತ ಶವದ ಬಾಯಿಗೆ ನೀರು ಬಿಟ್ಟರೆ ಮಳೆಯಾಗುತ್ತೆ ಎನ್ನುವ ನಂಬಿಕೆಯಿದೆ. ಬರಗಾಲ ಉಂಟಾದಾಗ ಈ ಭಾಗದಲ್ಲಿ ಈ ವಿಚಿತ್ರ ಆಚರಣೆ ಮಾಡುವ ಪದ್ಧತಿ ಮಾಡುತ್ತಾ ಬಂದಿದ್ದಾರೆ. ಕಲಕೇರಿ ಗ್ರಾಮದ ವಾಗೀಶ್ ಹಿರೇಮಠ ನೇತೃತ್ವದಲ್ಲಿ ವಿಚಿತ್ರ ಆಚರಣೆ ಮಾಡಲಾಗಿದೆ.

ಮಳೆಗಾಗಿ ಗೋರಿಯ ಮೇಲೆ ಕುಳಿತು ಪ್ರಾರ್ಥನೆ: 
ಇನ್ನು ಬಾಯಿಗೆ ನೀರು ಹಾಕಿದ ನಂತರ ಶವವನ್ನು ಹೂತಿರುವ ಗೋರಿಯ ಮೇಲೆ ಕುಳಿತು ಪ್ರಾರ್ಥನೆ ಮಾಡಲಾಗುತ್ತದೆ. ನಿನಗೆ ನೀರು ಉಣಿಸಲಾಗಿದ್ದು, ನೀನು ಕೂಡ ಗ್ರಾಮಕ್ಕೆ ಮಳೆಯಾಗುವಂತೆ ಪ್ರಾರ್ಥನೆ ಮಾಡು ಎಂಬಂತೆ ಶವಗಳ ಆತ್ಮಗಳಿಗೆ ಸೂಚನೆ ನೀಡಲಾಗುತ್ತಿದೆ. ಇದಾದ ಕೆಲವೇ ದಿನಗಳಲ್ಲಿ ಮಳೆ ಆಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಇನ್ನು ಸ್ಮಶಾನದಲ್ಲಿ ಪೂಜೆ ಸಲ್ಲಿಸಲು ಗ್ರಾಮದ ಎಲ್ಲ ಸದಸ್ಯರೂ ಸೇರಿ ಒಟ್ಟಾಗಿ ಈ ಆಚರಣೆಯನ್ನು ಮಾಡಲಾಗಿದ್ದು, ಈ ವರ್ಷ ಮಳೆ ಬರಲಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಹನಿ ನೀರಿಗಾಗಿ ಹಾಹಾಕಾರ: ನಮಗೆ ನಿಮ್ಮ ಗ್ಯಾರಂಟಿಗಳು ಬೇಡ, ಕುಡಿಯಲು ನೀರು ಕೊಡಿ

ಮಳೆಗಾಗಿ ರಾಜ್ಯಾದ್ಯಂತ ವಿವಿಧ ಆಚರಣೆ: 
ಇನ್ನು ಪ್ರತಿಬಾರಿ ಮಳೆಗಾಲದಲ್ಲಿ ಸೂಕ್ತ ಸಮಯಕ್ಕೆ ಮಳೆ ಬರದೇ ಬರಗಾಲದ ಛಾಯೆ ಆವರಿಸುವ ಮುನ್ನವೇ ಮಳೆಗಾಗಿ ಗ್ರಾಮಸ್ಥರು ವಿವಿಧ ಆಚರಣೆ ಮಾಡುತ್ತಾರೆ. ಕತ್ತೆಗಳ ಮದುವೆ, ಕಪ್ಪೆಗಳ ಮದುವೆ, ಗಂಡು ಮಕ್ಕಳ ಮದುವೆ, ಸ್ಮಶಾನ ಸೋಸುದು, ಸ್ಮಶಾನದ ಶವಗಳ ಬಾಯಿಗೆ ನೀರು ಬಿಡುವುದು, ಗಂಗಾ ಪೂಜೆ, ಹೋಮ-ಹವನ, ಪ್ರಾರ್ಥನೆ ಹೀಗೆ ಹಲವು ಆಚರಣೆಗಳನ್ನು ಮಾಡಲಾಗುತ್ತದೆ. ಪ್ರಸ್ತುತ ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ಆಚರಣೆಗಳನ್ನು ಮಾಡಲಾಗುತ್ತಿದೆ. 

ಮಳೆ ಬಾರದೇ ರೈತರು ಕಂಗಾಲು : ಮುಂಗಾರು ಶುರುವಾಗಿ ತಿಂಗಳುಗಳೇ ಕಳೆದ್ರು ವಿಜಯಪುರ ಜಿಲ್ಲೆಯಲ್ಲಿ ಮಳೆಯ ಆಗಮನವಾಗಿಲ್ಲ. ಜೂನ್‌ ತಿಂಗಳಲ್ಲಿ ವಾಡಿಕೆಗಿಂತಲು ಬಹಳ ಕಡಿಮೆ ಮಳೆಯಾಗಿದೆ. ಕೆಲವೆಡೆಯಂತು ಈ ವರೆಗೆ ಮಳೆಯೆ ಆಗಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕೇವಲ ಶೇಕಡಾ 10ರಷ್ಟು ಮಾತ್ರ ಬಿತ್ತನೆಯಾಗಿದೆ. ಹಲವೆಡೆ ಬಿತ್ತನೆಗೆಂದು ಭೂಮಿಯೇ ಸಿದ್ಧಗೊಂಡಿಲ್ಲ. ಹೀಗಾಗಿ ಅನ್ನದಾತ ಕಂಗಾಲಾಗಿದ್ದಾನೆ.

Latest Videos
Follow Us:
Download App:
  • android
  • ios