ಬೆಂಗಳೂರಿನ 330 ಕೋಟಿ ರು. ವೆಚ್ಚದ ಎಂಆರ್ಪಿಎಲ್ನ ದೇವನಗೊಂತಿ ಮಾರ್ಕೆಟಿಂಗ್ ಟರ್ಮಿನಲ್ ಜೊತೆಗೆ ಮಂಗಳೂರಿನಲ್ಲಿ 850 ಕೋಟಿ ರು. ವೆಚ್ಚದ ಭಾರತದ ಅತಿದೊಡ್ಡ ಭೂಗತ ಎಲ್ಪಿಜಿ ಶೇಖರಣಾ ಕೇವರ್ನ್ ಲೋಕಾರ್ಪಣೆ. ದೇವನಗೊಂತಿ ಮಾರ್ಕೆಟಿಂಗ್ ಟರ್ಮಿನಲ್ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ
ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಬೆಂಗಳೂರಿನಲ್ಲಿ ನಿರ್ಮಿಸಿರುವ ಅತ್ಯಾಧುನಿಕ ದೇವನಗೊಂತಿ ಮಾರ್ಕೆಟಿಂಗ್ ಟರ್ಮಿನಲ್ನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಸುಮಾರು 330 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಈ ಟರ್ಮಿನಲ್ ಕರ್ನಾಟಕದ ಇಂಧನ ಮೂಲಸೌಕರ್ಯ ಬಲವರ್ಧನೆ, ಇಂಧನ ಪೂರೈಕೆಯ ವಿಶ್ವಾಸಾರ್ಹತೆ ಹೆಚ್ಚಳ ಹಾಗೂ ರಾಜ್ಯದ ಕೈಗಾರಿಕಾ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮಹತ್ವದ ಯೋಜನೆಯಾಗಿದೆ.
20 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಟರ್ಮಿನಲ್ ಮಂಗಳೂರಿನ ಎಂಆರ್ಪಿಎಲ್ ಸಂಸ್ಕರಣಾಗಾರಕ್ಕೆ 363 ಕಿ.ಮೀ. ಉದ್ದದ ಪೆಟ್ರೋನೆಟ್ ಮಂಗಳೂರು-ಹಾಸನ-ಬೆಂಗಳೂರು ಪೈಪ್ಲೈನ್ ಮೂಲಕ ಸಂಪರ್ಕ ಹೊಂದಿದೆ. ಇಲ್ಲಿ ಒಟ್ಟು 77 ಸಾವಿರ ಕಿಲೋಲೀಟರ್ ಇಂಧನ ಸಂಗ್ರಹ ಸಾಮರ್ಥ್ಯವಿದ್ದು, ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ನಿರ್ವಹಣೆ ಮಾಡಲಾಗುತ್ತದೆ. ಬೆಂಗಳೂರು ವಿಮಾನ ನಿಲ್ದಾಣ, ಎಂಆರ್ಪಿಎಲ್ನ ಹೈಕ್ಯೂ ಚಿಲ್ಲರೆ ಮಾರಾಟ ಮಳಿಗೆಗಳು, ತೈಲ ಮಾರುಕಟ್ಟೆ ಕಂಪನಿಗಳು ಹಾಗೂ ಕೈಗಾರಿಕಾ ಗ್ರಾಹಕರಿಗೆ ಇಲ್ಲಿಂದ ಇಂಧನ ಪೂರೈಸಲಾಗುತ್ತದೆ.
ಈ ಯೋಜನೆಯ ಪ್ರಮುಖ ಪರಿಸರ ಪ್ರಯೋಜನವೆಂದರೆ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳ ಮೂಲಕ ದೂರದವರೆಗೆ ರಸ್ತೆ ಮಾರ್ಗದಲ್ಲಿ ಇಂಧನ ಸಾಗಿಸುವ ಬದಲು ಪೈಪ್ಲೈನ್ ಮೂಲಕ ಸಾಗಣೆ ವ್ಯವಸ್ಥೆ ಕಲ್ಪಿಸಿರುವುದು. ಇದರಿಂದ ವರ್ಷಕ್ಕೆ ಸುಮಾರು 40 ಸಾವಿರ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ತಡೆಯುವ ನಿರೀಕ್ಷೆಯಿದೆ. ರಸ್ತೆ ಸುರಕ್ಷತೆಯೂ ಹೆಚ್ಚಲಿದೆ. ಅಲ್ಲದೆ, ಎಥೆನಾಲ್ ಮತ್ತು ಜೈವಿಕ ಡೀಸೆಲ್ ಸಂಗ್ರಹ ಹಾಗೂ ಮಿಶ್ರಣಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಮೂಲಕ ದೇಶದ ಸ್ವಚ್ಛ ಇಂಧನ ಪರಿವರ್ತನೆಗೂ ಯೋಜನೆ ನೆರವಾಗಲಿದೆ.
ಪ್ರಾದೇಶಿಕ ಇಂಧನ ಭದ್ರತೆಯನ್ನು ಬಲಪಡಿಸುವುದರ ಜತೆಗೆ ಈ ಯೋಜನೆಯಿಂದ 280ಕ್ಕೂ ಅಧಿಕ ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ದೇವನಗೊಂತಿ ಮಾರ್ಕೆಟಿಂಗ್ ಟರ್ಮಿನಲ್ ರಾಷ್ಟ್ರಕ್ಕೆ ಸಮರ್ಪಣೆಯಾಗುವುದರೊಂದಿಗೆ ದೇಶದ ಇಂಧನ ಭದ್ರತೆ, ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಎಂಆರ್ಪಿಎಲ್ ನೀಡುತ್ತಿರುವ ಕೊಡುಗೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಎಂಆರ್ಪಿಎಲ್ ಪ್ರಕಟಣೆ ತಿಳಿಸಿದೆ.
ದೇಶದ ಅತಿದೊಡ್ಡ ಭೂಗತ ಎಲ್ಪಿಜಿ ಸಂಗ್ರಹಣಾಗಾರ ಲೋಕಾರ್ಪಣೆ
ಮಂಗಳೂರಿನಲ್ಲಿ 850 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ 80,000 ಮೆಟ್ರಿಕ್ ಟನ್ ಸಾಮರ್ಥ್ಯದ ಭಾರತದ ಅತಿದೊಡ್ಡ ಭೂಗತ ಎಲ್ಪಿಜಿ ಸಂಗ್ರಹಣಾಗಾರವನ್ನು ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ. ದೇಶದ ಮೊದಲ ಭೂಗತ ಅನಿಲ ಸಂಗ್ರಹಾಗಾರ ವಿಶಾಖಪಟ್ಟಣದಲ್ಲಿ 2008ರಲ್ಲಿ ನಿರ್ಮಾಣವಾಗಿತ್ತು. ಆದರೆ ಮಂಗಳೂರಿನ ಸಂಗ್ರಹಾಗಾರ ದೇಶದ ಅತಿದೊಡ್ಡ ಘಟಕವಾಗಲಿದೆ.














