ಬೆಂಗಳೂರಿನಲ್ಲಿ ನಡೆಯಲಿರುವ 'ಇನ್ವೆಸ್ಟ್ ಕರ್ನಾಟಕ 2027' ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವ ಸಿದ್ಧತೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದಾರೆ. ಬಿಯಾಂಡ್ ಬೆಂಗಳೂರು ನೀತಿಯಡಿ ರಾಜ್ಯದ ಹಿಂದುಳಿದ ಪ್ರದೇಶಗಳಲ್ಲೂ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ.
ಬೆಂಗಳೂರು (ನ.13): ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಹ್ವಾನಿಸುವ ಮತ್ತು ಉದ್ಯೋಗ ಸೃಷ್ಟಿಯ ಮಾರ್ಗವಾಗಿರುವ ‘ಇನ್ವೆಸ್ಟ್ ಕರ್ನಾಟಕ 2027’ ಜಾಗತಿಕ ಹೂಡಿಕೆದಾರರ ಸಮಾವೇಶ 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದ್ದು, ಅದರ ಪೂರ್ವ ಸಿದ್ಧತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಚಾಲನೆ ನೀಡಿದರು.
ಭವಿಷ್ಯದ ಸಾಧ್ಯತೆಗಳಿಗೆ ಬಲ ಸಂವರ್ಧನೆ
ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು, ‘ಭವಿಷ್ಯದ ಸಾಧ್ಯತೆಗಳಿಗೆ ಬಲ ಸಂವರ್ಧನೆ’ ಘೋಷವಾಕ್ಯದೊಂದಿಗೆ ನಡೆಯಲಿರುವ 2027ನೇ ಸಾಲಿನ ಇನ್ವೆಸ್ಟ್ ಕರ್ನಾಟಕ- ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಪೂರ್ವ ಸಿದ್ಧತೆಗೆ ಚಾಲನೆ ನೀಡಿ ಕರ್ನಾಟಕದಲ್ಲಿ ಹೂಡಿಕೆ ಏತಕ್ಕಾಗಿ ಮಾಡಬೇಕು, ಇಲ್ಲಿರುವ ಅವಕಾಶ, ಮೂಲಸೌಕರ್ಯಗಳ ಕುರಿತಂತೆ ವಿವರಣೆ ನೀಡಿದರು.
ಇನ್ವೆಸ್ಟ್ ಕರ್ನಾಟಕ: ಕರ್ನಾಟಕದ ಭವಿಷ್ಯ ರೂಪಿಸಲು ಬಿಗ್ ಸ್ಟೆಪ್
ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ಪ್ರಸ್ತುತದಲ್ಲಿ ನಾವು ಏನನ್ನು ಮಾಡುತ್ತೇವೆ ಎನ್ನುವುದು ಭವಿಷ್ಯದಲ್ಲಿ ನಮ್ಮ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಕರ್ನಾಟಕದ ಭವಿಷ್ಯ ರೂಪಿಸಲು ಇನ್ವೆಸ್ಟ್ ಕರ್ನಾಟಕ ಬಹುದೊಡ್ಡ ಮಾರ್ಗವಾಗಿದೆ. ಕರ್ನಾಟಕಕ್ಕೆ ಉತ್ಕೃಷ್ಟ ಇತಿಹಾಸವಿದ್ದು, ಇಲ್ಲಿ ಹೂಡಿಕೆ ಮಾಡುವವರು ಎಂದಿಗೂ ವಾಪಾಸು ಹೋಗಲು ಮನಸ್ಸು ಮಾಡುವುದಿಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯದ ಮಹತ್ವಾಕಾಂಕ್ಷೆಗೆ ಪೂರಕವಾಗಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮತ್ತು ವೆಂಚುರೈಸ್ನಂತಹ ಕಾರ್ಯಕ್ರಮಗಳು ನವೋದ್ಯಮ, ಹೂಡಿಕೆದಾರರು, ಕೈಗಾರಿಕೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವಾಗಿದೆ. ಬೆಂಗಳೂರು ಮಾತ್ರವಲ್ಲದೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿ ರಾಜ್ಯದ ಹಿಂದುಳಿದ ಪ್ರದೇಶಗಳಲ್ಲೂ ಹೂಡಿಕೆಯನ್ನು ಆಕರ್ಷಿಸುವುದು ನಮ್ಮ ಗುರಿಯಾಗಿದೆ. ಪ್ರತಿ ಉದ್ಯಮಿಗಳಿಗೂ ವಿಶೇಷ ಪ್ರೋತ್ಸಾಹಕ, ರಿಯಾಯಿತಿಗಳನ್ನು ನೀಡಲಾಗುತ್ತದೆ. ಅದಕ್ಕಾಗಿ ನೂತನ ಹೂಡಿಕೆ ಮತ್ತು ಉದ್ಯೋಗ ನೀತಿಗಳನ್ನು ಜಾರಿಗೆ ತರಲಾಗಿದೆ ಎಂದರು.
ಉದ್ಯಮಿಗಳು ಎಂದರೆ ಕೇವಲ ಹಣ ಹೂಡುವುದು, ಕೈಗಾರಿಕೆ ಸ್ಥಾಪಿಸುವವರು ಮಾತ್ರವಲ್ಲ, ಅಭಿವೃದ್ಧಿಯಲ್ಲಿ ಪಾಲುದಾರರು ಎಂದು ತಿಳಿದ ಪರಂಪರೆಯನ್ನು ಕರ್ನಾಟಕ ಹೊಂದಿದೆ. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪರಿಭಾವಿತ ಭೂಪರಿವರ್ತನೆ ಮತ್ತು ತೆರಿಗೆ ವಿನಾಯಿತಿಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ವಿಮಾನಯಾನ, ರೈಲು ಸೇವೆ ಸೇರಿದಂತೆ ಸಾರಿಗೆ ಸೌಲಭ್ಯ ಉತ್ತಮವಾಗಿದ್ದು, ಹೂಡಿಕೆದಾರರಿಗೆ ಅಗತ್ಯ ಮೂಲಸೌಕರ್ಯಗಳು ಇಲ್ಲಿವೆ ಎಂದು ವಿವರಿಸಿದರು.
ಭೂಸ್ವಾಧೀನ ಸಮಸ್ಯೆಗೆ ಪರಿಹಾರ:
ರಾಜ್ಯದಲ್ಲಿ ಕೈಗಾರಿಕೆಗಳಿಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳಿದ್ದು, ಅದನ್ನು ಬಗೆಹರಿಸಲಾಗುತ್ತದೆ. ಕೈಗಾರಿಕಾ ಬೆಳವಣಿಗೆಗೆ ಇರುವ ಕೆಲವು ಅಡೆತಡೆಗಳನ್ನು ನಿವಾರಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಭೂಸ್ವಾಧೀನ ಕುರಿತಂತೆ ಭೂ ಮಾಲೀಕರ ಮನವೊಲಿಸಿ ಸರಿಪಡಿಸಲಾಗುತ್ತದೆ. ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ವಿಸ್ತರಿಸುವ ಬಗ್ಗೆಯೂ ಆಲೋಚಿಸುತ್ತಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬಿಯಾಂಡ್ ಬೆಂಗಳೂರಿಗೆ ಒತ್ತು:
ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದ ಕೈಗಾರಿಕಾ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿರದೆ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸಲಾಗುತ್ತಿದೆ. ಅದಕ್ಕಾಗಿ ಬಿಯಾಂಡ್ ಬೆಂಗಳೂರು ನೀತಿಯನ್ನು ರೂಪಿಸಲಾಗಿದೆ. ಕಳೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ರು.ಗೂ ಹೆಚ್ಚಿನ ಹೂಡಿಕೆ ಹರಿದುಬಂದಿತ್ತು. ಅದರಲ್ಲಿ ಶೇ. 70ರಷ್ಟು ಹೂಡಿಕೆ ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ. ಅದೇ ರೀತಿ ಮುಂದಿನ ಹೂಡಿಕೆದಾರರ ಸಮಾವೇಶದಲ್ಲೂ ಹೆಚ್ಚಿನ ಬಂಡವಾಳ ಆಕರ್ಷಿಸಲಾಗುವುದು. ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿದೆ. ಕೈಗಾರಿಕಾ ಬೆಳವಣಿಗೆ ದೇಶಕ್ಕೆ ಮಾದರಿಯಾಗಿದೆ ಎಂದರು.
ಕರ್ನಾಟಕ ಮೈಮಾನಿಕ ಮತ್ತು ರಕ್ಷಣಾ ನೀತಿ- 2026-2031, ಕೈಗಾರಿಕೆಯಲ್ಲಿ ಹಿಂದುಳಿದ ಸ್ಥಳಗಳಿಗೆ ಹೂಡಿಕೆ ಪ್ರೋತ್ಸಾಹ ನೀತಿ, ಶ್ರಮಿಕ ನಿವಾಸ್ ನೀತಿ, ಕರ್ನಾಟಕ ಡಿಜಿಟಲ್ ಲ್ಯಾಂಡ್ ಬ್ಯಾಂಕ್ ಪೋರ್ಟಲ್ ಬಿಡುಗಡೆ ಮಾಡಲಾಯಿತು ಹಾಗೂ ವೆಂಚುರೈಸ್ ಜಾಗತಿಕ ನವೋದ್ಯಮ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಸಚಿವರಾದ ಕೆ. ಎಚ್. ಮುನಿಯಪ್ಪ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ರಿಜ್ವಾನ್ ಅರ್ಷದ್, ನರೇಂದ್ರಸ್ವಾಮಿ, ಬಸವರಾಜ ರಾಯರೆಡ್ಡಿ, ಬಸವಂತಪ್ಪ, ಅಜಯ್ ಸಿಂಗ್, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಮಾಜಿ ಸಚಿವ ಆರ್. ವಿ. ದೇಶಪಾಂಡೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಚೌಧರಿ ಇತರರಿದ್ದರು.
ಭೂಮಿ ಕಾಯ್ದಿರಿಸಲು ಡಿಜಿಟಲ್ ಕೈಗಾರಿಕಾ ಲ್ಯಾಂಡ್ಬ್ಯಾಂಕ್: ಎಂಬಿಪಾ
ಡಿಜಿಟಲ್ ಕೈಗಾರಿಕಾ ಲ್ಯಾಂಡ್ಬ್ಯಾಂಕ್ ಮೂಲಕ, ವಿದೇಶಿ ಹೂಡಿಕೆದಾರರು ಕರ್ನಾಟಕಕ್ಕೆ ಬರುವುದಕ್ಕೆ ಮುನ್ನವೇ ಕೈಗಾರಿಕಾ ಭೂಮಿಯನ್ನು ಕಾಯ್ದಿರಿಸಬಹುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
2025ರ ಹೂಡಿಕೆದಾರರ ಸಮಾವೇಶದಲ್ಲಿ ವ್ಯಕ್ತವಾದ ಪ್ರಸ್ತಾವನೆಗಳಲ್ಲಿ ಶೇ. 65ರಷ್ಟು ಅನುಷ್ಠಾನಗೊಂಡಿವೆ. ಪ್ರತಿ ಪ್ರಸ್ತಾವನೆಗೂ ನಿರ್ದಿಷ್ಟ ಅಧಿಕಾರಿಯನ್ನು ನಿಯೋಜಿಸಿ ಅನುಷ್ಠಾನದ ಪೂರ್ಣ ಪ್ರಕ್ರಿಯೆಯಲ್ಲಿ ಜೊತೆಗಿರುವಂತೆ ವ್ಯವಸ್ಥೆ ಮಾಡಲಾಗಿದೆ. ನಮ್ಮ ಕೈಗಾರಿಕಾ ನೀತಿಯು ಹೂಡಿಕೆದಾರರಿಗೆ ಆಯ್ಕೆಗಳನ್ನು, ಅವಕಾಶಗಳನ್ನು ಒದಗಿಸುತ್ತದೆ. ಕೈಗಾರಿಕಾ ನಿರ್ದಿಷ್ಟ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ಶೀಘ್ರದಲ್ಲೇ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಹೂಡಿಕೆದಾರರ ಸಮಾವೇಶ ಆಯೋಜಿಸುವ ಮೂಲಕ ಆ ಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ನೂತನ ಡಿಜಿಟಲ್ ಕೈಗಾರಿಕಾ ಲ್ಯಾಂಡ್ಬ್ಯಾಂಕ್ ಮೂಲಕ ಯಾವುದೇ ಉದ್ಯಮಿ ಭಾರತಕ್ಕೆ ಬರುವ ಮುನ್ನವೇ ತಮಗೆ ಬೇಕಾದ ಭೂಮಿಯನ್ನು ಕಾಯ್ದಿರಿಸಬಹುದಾಗಿದೆ ಎಂದರು.
ಜಾಗತಿ ಹೂಡಿಕೆದಾರರ ಸಮಾವೇಶ 2027ನ್ನು ನಿಜವಾದ ಅರ್ಥದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ. ಅದಕ್ಕಾಗಿ ಮುಂಬರುವ ತಿಂಗಳುಗಳಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಹೂಡಿಕೆದಾರರು ಇರುವ ಸ್ಥಳಗಳಿಗೇ ಕರ್ನಾಟಕದ ಅವಕಾಶಗಳನ್ನು ಕೊಂಡೊಯ್ಯಲಿದ್ದೇವೆ. ಮುಂಬರುವ ತಿಂಗಳುಗಳಲ್ಲಿ ಉತ್ತರ ಕರ್ನಾಟಕದಲ್ಲಿ ವಿಶೇಷ ಹೂಡಿಕೆದಾರರ ಸಮಾವೇಶ ಆಯೋಜಿಸಲಿದ್ದೇವೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಹೂಡಿಕೆ ಅವಕಾಶಗಳನ್ನು ನೇರವಾಗಿ ಹೂಡಿಕೆದಾರರ ಮುಂದಿಡುವುದು ಇದರ ಉದ್ದೇಶ. ಈ ಪ್ರದೇಶವು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಹೂಡಿಕೆಯನ್ನು ಆಕರ್ಷಿಸಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.














