ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಕಠಿಣ ವಾಸ್ತು ನಂಬಿಕೆಗಳಿಂದಾಗಿ ವಿಧಾನಸೌಧದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಸಭೆಗಳಲ್ಲಿ ವಾಸ್ತು ಪ್ರಕಾರ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುವ ಮೂಲಕ, ಅವರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಪಾಲಿಸುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಬೆಂಗಳೂರು (ಜೂ.04): ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಡಿ.ಕೆ. ಶಿವಕುಮಾರ್ ಅವರ ಪ್ರತಿಯೊಂದು ನಡೆ ಹಾಗೂ ನಿರ್ಧಾರಗಳು ಭಾರೀ ಕುತೂಹಲ ಮೂಡಿಸುತ್ತಿವೆ. ರಾಜಕೀಯ ತಂತ್ರಗಾರಿಕೆಯಲ್ಲಿ ಸೈ ಎನಿಸಿಕೊಂಡಿರುವ ಡಿಕೆಶಿ, ಇದೀಗ ತಮ್ಮ ಕಠಿಣ ವಾಸ್ತು ನಂಬಿಕೆಯಿಂದಾಗಿ ವಿಧಾನಸೌಧದ ಕಾರಿಡಾರ್‌ಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. ಹೌದು, ಸಿಎಂ ಆದಾಗಿನಿಂದಲೂ ವಾಸ್ತು ಪ್ರಕಾರವೇ ಹೆಜ್ಜೆ ಇಡುತ್ತಿರುವ ಡಿ.ಕೆ. ಶಿವಕುಮಾರ್, ಇದೀಗ ಅಧಿಕೃತ ಸಭೆಗಳಲ್ಲೂ ತಮ್ಮ ಕುಳಿತುಕೊಳ್ಳುವ ದಿಕ್ಕನ್ನೇ ಬದಲಿಸಿದ್ದಾರೆ!
ಅಜ್ಜಯ್ಯನ ಆಶೀರ್ವಾದ, ಉತ್ತರ ಬಾಗಿಲಿನ ಪ್ರವೇಶ:
ಡಿ.ಕೆ. ಶಿವಕುಮಾರ್ ಅವರಿಗೆ ಮೊದಲಿನಿಂದಲೂ ಧಾರ್ಮಿಕ ನಂಬಿಕೆಗಳು ಹಾಗೂ ವಾಸ್ತುವಿನ ಮೇಲೆ ಅಪಾರ ಭಕ್ತಿ. ಸಿಎಂ ಆದ ತಕ್ಷಣವೇ ಅವರು ಮೊದಲು ಮಾಡಿದ್ದು ತಮ್ಮ ಆರಾಧ್ಯ ದೈವ 'ಅಜ್ಜಯ್ಯನ ಗದ್ದುಗೆ'ಯ ದರ್ಶನ. ಅಜ್ಜಯ್ಯನ ಆಶೀರ್ವಾದ ಪಡೆದೇ ಮುಂದಿನ ಹೆಜ್ಜೆ ಇಟ್ಟ ಅವರು, ವಿಧಾನಸೌಧಕ್ಕೆ ಪ್ರವೇಶಿಸುವಾಗಲೂ ವಾಸ್ತು ಪ್ರಕಾರ ಅತ್ಯಂತ ಶುಭ ಎನ್ನಲಾಗುವ 'ಉತ್ತರ ಬಾಗಿಲಿನ' ಮೂಲಕವೇ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲದೇ, ತಮ್ಮ ಮುಖ್ಯಮಂತ್ರಿ ಕೊಠಡಿಗೂ ಅಜ್ಜಯ್ಯನ ವಿಶೇಷ ಆಶೀರ್ವಾದ ಮತ್ತು ವಾಸ್ತು ಪೂಜೆ ಮಾಡಿಸಿದ ಬಳಿಕವೇ ಅಧಿಕೃತ ಕಾರ್ಯಕಲಾಪಗಳನ್ನು ಆರಂಭಿಸಿದ್ದರು.
ಮಾಧ್ಯಮದವರಿಗೆ ನೀಡಿದ್ದ ಸೂಚನೆ ಇಂದು ಜಾರಿ!
ಇತ್ತೀಚೆಗೆ ನಡೆದ ಕ್ಯಾಬಿನೆಟ್ (ಸಂಪುಟ) ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸುವಾಗಲೂ ಸಿಎಂ ಡಿ.ಕೆ. ಶಿವಕುಮಾರ್ ಅವರು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಲು ಬಯಸಿದ್ದರು. ಈ ಸಂಬಂಧ ಅಲ್ಲಿನ ಅಧಿಕಾರಿಗಳಿಗೂ ತಕ್ಷಣವೇ ದಿಕ್ಕು ಬದಲಿಸಲು ಸೂಚನೆ ನೀಡಿದ್ದರು. ಆದರೆ, ಅಷ್ಟರಲ್ಲಾಗಲೇ ಮಾಧ್ಯಮದವರು ತಮ್ಮ ಲೈವ್ ಕ್ಯಾಮೆರಾಗಳನ್ನು ಹಳೇ ವ್ಯವಸ್ಥೆಯಂತೆಯೇ ಫಿಕ್ಸ್ ಮಾಡಿಕೊಂಡಿದ್ದರು. ತಕ್ಷಣಕ್ಕೆ ಎಲ್ಲವನ್ನೂ ಬದಲಾಯಿಸುವುದು ತಾಂತ್ರಿಕವಾಗಿ ಕಷ್ಟ ಎಂದು ಮಾಧ್ಯಮದವರು ಸಿಎಂ ಗಮನಕ್ಕೆ ತಂದಾಗ, 'ಹಾಗಾದರೆ ನಾಳೆಯಿಂದ ಕಡ್ಡಾಯವಾಗಿ ಬದಲಾವಣೆ ಮಾಡಿ' ಎಂದು ಡಿಕೆಶಿ ಸೂಚನೆ ನೀಡಿ ಅಲ್ಲಿಂದ ಹೊರಟಿದ್ದರು.
ಅಧಿಕಾರಿಗಳ ಮೀಟಿಂಗ್‌ನಲ್ಲಿ ಅಚ್ಚರಿ ಮೂಡಿಸಿದ ಸಿಎಂ ನಡೆ:
ಸಿಎಂ ನೀಡಿದ್ದ ಆ ಸೂಚನೆ ಇಂದು ಅಕ್ಷರಶಃ ಜಾರಿಯಾಗಿದೆ. ಇಂದು ವಿಧಾನಸೌಧದ ಅದೇ ಕಾನ್ಫರೆನ್ಸ್ ಹಾಲ್‌ನಲ್ಲಿ ಮಹತ್ವದ ಅಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣವಾಗಿ ದಿಕ್ಕು ಬದಲಿಸಿ ಕುಳಿತಿದ್ದಾರೆ. ಅಂದರೆ, ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಶ್ರೇಷ್ಠ ಹಾಗೂ ಯಶಸ್ಸಿನ ಸಂಕೇತ ಎನ್ನಲಾಗುವ 'ಉತ್ತರ ದಿಕ್ಕಿಗೆ' ಮುಖ ಮಾಡಿ ಮುಖ್ಯಮಂತ್ರಿಗಳು ಕುಳಿತಿದ್ದು, ಅಧಿಕಾರಿಗಳು ಅವರ ಸಮ್ಮುಖದಲ್ಲಿ ಸಭೆ ನಡೆಸುತ್ತಿದ್ದಾರೆ.
ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿದ್ದರೂ ವಾಸ್ತು ಮತ್ತು ಧಾರ್ಮಿಕ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರ ಈ ನಡೆ, ಸದ್ಯ ವಿಧಾನಸೌಧದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಅಚ್ಚರಿ ಹಾಗೂ ತೀವ್ರ ಕುತೂಹಲ ಮೂಡಿಸಿರುವುದಂತೂ ಸುಳ್ಳಲ್ಲ.


