ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ; ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್ ಅಮಾನತು
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು (ಮೇ 29): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಸಹಾಯಕ ಲೆಕ್ಕಾಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿ ಆರೋಪ ಮಾಡಿದ್ದ ಬೆನ್ನಲ್ಲಿಯೇ ರಾಜ್ಯ ಸರ್ಕಾರದಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಅಮಾನತು ಮಾಡಲಾಗಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ.ಪದ್ಮನಾಭ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ವಾಲ್ಮೀಕಿ ನಿಗಮದಿಂದ ಐಟಿ ಕಂಪನಿಯೊಂದರ ಖಾತೆಗೆ ವರ್ಗಾವಣೆ ಮಾಡಲಾಗಿದ್ದ 88 ಕೋಟಿ ರೂ. ಹಣವನ್ನು ತನಿಖಾ ಅಧಿಕಾರಿಗಳು ನಿಗಮದ ಮುಖ್ಯ ಖಾತೆಗೆ ವಾಪಾಸ್ ಪಡೆಯುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದಿಂದ ಎರಡು ದಿನಗಳ ಹಿಂದೆಯೇ ಪ್ರಕರಣವನ್ನು ಸಿಐಡಿ (CID) ತನಿಖೆಗೆ ವಹಿಸಲಾಗಿದೆ. ಈ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ಸೂಕ್ಷ್ಮವಾಗಿ ತನಿಖೆ ಮಾಡುತ್ತಿದ್ದಾರೆ.
ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರ ಪಾತ್ರವಿದ್ದರೆ ನಿರ್ದಾಕ್ಷಿಣ್ಯ ಕ್ರಮ; ಗೃಹ ಸಚಿವ ಪರಮೇಶ್ವರ
ಶಿವಮೊಗ್ಗ ಮತ್ತು ಬೆಂಗಳೂರು ಎರಡು ಕಡೆಗಳಲ್ಲಿಯೂ ಸಿಐಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಇನ್ನು ಸರ್ಕಾರದ ಪೂರ್ವ ಅನುಮತಿ ಪಡೆದು ನಿಗಮದ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ಚುನಾವಣಾ ನೀತಿ ಸಂಹಿತೆ ಇರುವಾಗ ಸರ್ಕಾರಕ್ಕೆ ಒಂದು ಪತ್ರ ವ್ಯವಹಾರವನ್ನೂ ನಡೆಸದೇ ಅಧಿಕಾರಿಗಳ ಸಹಿಯಿಂದಲ ನೂರಾರು ಕೋಟಿ ರೂ, ಹಣ ವರ್ಗಾವಣೆ ಮಾಡಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಾಗೂ ಎಲ್ಲಾ ನಿರ್ದೇಶಕರು ಸೇರಿ ಒಟ್ಟು 6 ಜನ ಬ್ಯಾಂಕ್ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ.
ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆಯಲ್ಲಿ ಎಫ್‌ಎಸ್‌ಎಲ್ ವರದಿ ಹಾಗೂ ಸಿಐಡಿ ಅಧಿಕಾರಿಗಳ ವರದಿ ಬಂದಾಕ್ಷಣ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಹಾಗೂ ನಿಗಮದ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಉಂಟಾಗುವ ಸಾಧ್ಯತೆಯಿದೆ. ಇನ್ನು ವಾಲ್ಮೀಕಿ ನಿಗಮದ ಅಕೌಂಟೆಂಟ್ ಚಂದ್ರಶೇಖರ್ ಚಂದ್ರಶೇಖರ್ ಅವರು ಇಲಾಖಾ ಸಚಿವರಾದ ನಾಗೇಂದ್ರ ಅವರ ಹೆಸರನ್ನೂ ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಅವರನ್ನೂ ಕೂಡ ಸಿಐಡಿ ಅಧಿಕಾರಿಗಳು ತನಿಖೆಗೆ ಒಳಪಡಿಸಲಿದ್ದಾರೆ. ಆರೋಪ ಸಾಬೀತಾದಲ್ಲಿ ಅವರನ್ನೂ ಕೂಡ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ; ಬ್ಯಾಂಕ್ ಸಿಬ್ಬಂದಿ ಮೇಲೆ ಎಫ್‌ಐಆರ್ ದಾಖಲು
ಪ್ರಭಾರಿ ಎಂಡಿ ನೇಮಕ ಮಾಡಿದ ಸರ್ಕಾರ: ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ ಅಮಾನತು ಬೆನ್ನಲ್ಲೇ ಡಾ.ಕೆ.ಆರ್. ರಾಜ್ ಕುಮಾರ್ ಅವರನ್ನ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಸರ್ಕಾರ ನಿಯೋಜನೆ ಮಾಡಿದೆ. ಪ್ರಸ್ತುತವಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ರಾಜ್ ಕುಮಾರ್ ಅವರು ಈಗ ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಹಂಚಿಕೆ ಮಾಡಿದೆ.