ಎಲ್‌ಪಿಜಿ ಕೊರತೆ ಕುರಿತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆರೋಪಗಳನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಳ್ಳಿಹಾಕಿದ್ದಾರೆ. ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹುಬ್ಬಳ್ಳಿ (ಏ.8): ಯುದ್ಧದಿಂದಾಗಿ ಇಡೀ ಜಗತ್ತೇ ತೈಲ, ಎಲ್‌ಪಿಜಿ ಸಮಸ್ಯೆ ಅನುಭವಿಸುತ್ತಿದೆ. ಇತರೆ ದೇಶಗಳಿಗಿಂತ ಭಾರತದಲ್ಲಿ ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿದ್ದೀರಿ ಎಂದಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌, ಈಗ ರಾಹುಲ್‌ ಗಾಂಧಿ ಮೆಚ್ಚಿಸಲು ತೈಲ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದು ಹಾಸ್ಯಾಸ್ಪದ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವ್ಯಂಗ್ಯವಾಡಿದರು.

Add Asianetnews Kannada as a Preferred SourcegooglePreferred

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್‌ ಒಬ್ಬ ಹಿರಿಯ, ಅನುಭವಿ ರಾಜಕಾರಣಿ. ಅವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಎರಡು ಎಲ್‌ಪಿಜಿ ಹಡಗುಗಳನ್ನು ರಾಜ್ಯಕ್ಕೆ ತರಿಸಿಕೊಳ್ಳದೇ ಗುಜರಾತಿಗೆ ಕಳಿಸಿದ್ದಾರೆ ಎಂದು ಆರೋಪಿಸುವುದು ಸರಿಯಲ್ಲ. ಮೋದಿ ವಿರುದ್ಧ ಮಾತಾಡದಿದ್ದರೆ ಸಿಎಂ ಮಾಡಲ್ಲ ಎಂದುಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.

ಅದು ಮುಖ್ಯ ಬಂದರು. ಅಲ್ಲಿಂದ ಗುಜರಾತಿಗಷ್ಟೇ ಅಲ್ಲ ಅಕ್ಕಪಕ್ಕದ ರಾಜ್ಯಗಳಿಗೂ ಎಲ್‌ಪಿಜಿ ಸರಬರಾಜು ಆಗುತ್ತದೆ.

ಇತ್ತೀಚೆಗೆ ಕಾಳಸಂತೆಯಲ್ಲಿ ಸಿಕ್ಕ 380 ಸಿಲಿಂಡರ್‌ ವಿರುದ್ಧ ಕ್ರಮಕೈಗೊಳ್ಳಲು ಸೂಚನೆ ನೀಡಿದ ಮುನಿಯಪ್ಪ, ಅವುಗಳನ್ನು ಬಿಡಿಸುವ ಪ್ರಯತ್ನ ಮಾಡಿದ್ದರು. ಆ ವೀಡಿಯೋ ಕೂಡ ವೈರಲ್‌ ಆಗಿತ್ತು. ಅಲ್ಲದೇ, ಇಂಧನ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಸಭೆ ಕೂಡ ನಡೆಸಲು ಅವರು ಮುಂದಾಗಿದ್ದರು. ಆದರೆ ಈಗ ಹೈಕಮಾಂಡ್‌ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರದತ್ತ ಬೊಟ್ಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ 370 ಎಲ್‌ಪಿಜಿ‌ ಔಟ್‌ಲೇಟ್‌ಗಳಿದ್ದು, ಇದರಲ್ಲಿ 70 ಸರ್ಕಾರಿ ಸ್ವಾಮ್ಯದ್ದಾಗಿದ್ದರೆ ಇನ್ನುಳಿದವುಗಳು ಖಾಸಗಿ ಕಂಪನಿಯದ್ದಾಗಿವೆ. ಕೆಲ ಖಾಸಗಿ ಔಟ್‌ಲೆಟ್‌ಗಳಲ್ಲಿ ಹೆಚ್ಚಿನ ಬೆಲೆ ನಿಗದಿಗೊಳಿಸಿ ಆಟೋ ಗ್ಯಾಸ್‌ ನೀಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಔಟ್‌ಲೆಟ್‌ಗಳಲ್ಲಿ ಹೆಚ್ಚಿನ ಸಂದಣಿಯಾಗಿರುವುದರಿಂದ ಆಟೋ ಚಾಲಕರಿಗೆ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಆಟೋಗಳು ಗ್ಯಾಸ್ ಸಲುವಾಗಿ ಗಂಟೆಗಟ್ಟಲೇ ಕಾಯುವ ಬದಲು ಪೆಟ್ರೋಲ್ ಹಾಕಿಸಿ ಎಂದು ಹೇಳಿರುವೆ ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆ, ಇತರೆ ರಾಜ್ಯಗಳ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಉಪಚುನಾವಣೆ ಅಷ್ಟೇಯಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್‌ ಮುಕ್ತ ರಾಜ್ಯಗಳತ್ತ ದಾಪುಗಾಲು ಇಟ್ಟಿವೆ. ಆ ಮೂಲಕ ಸೋಲಿನಲ್ಲಿ ಕಾಂಗ್ರೆಸ್‌ ಸೆಂಚುರಿ ಬಾರಿಸಲಿದೆ. ಮುಂಚಿತವಾಗಿಯೇ ರಾಹುಲ್‌ ಗಾಂಧಿ ಅವರಿಗೆ ಅಭಿನಂದನೆಗಳು ಎಂದರು.