- Home
- News
- State
- ಮೊದಲ ನೀತಿ ಆಯೋಗದ ಸಭೆಯಲ್ಲೇ ಮೋದಿ ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್; ಸಿದ್ದುಗಿಂತ ವಿಭಿನ್ನ ಹೆಜ್ಜೆ!
ಮೊದಲ ನೀತಿ ಆಯೋಗದ ಸಭೆಯಲ್ಲೇ ಮೋದಿ ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್; ಸಿದ್ದುಗಿಂತ ವಿಭಿನ್ನ ಹೆಜ್ಜೆ!
ಮುಖ್ಯಮಂತ್ರಿಯಾದ ನಂತರ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮೋದಿ ನೇತೃತ್ವದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಿಂತ ಭಿನ್ನವಾದ ಈ ನಡೆಯ ಮೂಲಕ, ಅವರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ನಡೆಸಲಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ಅನುದಾನವನ್ನು ಪಡೆಯುವ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಿಂತ ಭಿನ್ನವಾದ ಹೆಜ್ಜೆಯನ್ನಿಟ್ಟಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ನಡೆಸಿದ ನೀತಿ ಆಯೋಗದ ಸಭೆಯಲ್ಲಿ ಮೊದಲ ಬಾರಿಗೆ ಕರ್ನಾಟಕದ ನೇತೃತ್ವ ವಹಿಸಿದ್ದರು. ಈ ವೇಳೆ ದೇಶದ ಆರ್ಥಿಕ ಬೆಳವಣಿಗೆ ಕುರಿತು ನಡೆಸಲಾದ ಚರ್ಚೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮೋದಿ ನೇತೃತ್ವದ ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನಾಯಕರು ಭಾಗವಹಿಸಿದ್ದರು. ಇದರಲ್ಲಿಯೂ ವಿಶೇಷ ಎನ್ನುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಭೇಟಿ
ಮೊದಲ ನೀತಿ ಆಯೋಗದ ಸಭೆಯ ನಂತರ ರಾಷ್ಟ್ರಪತಿ ಭವನದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಬಸವಣ್ಣ ಅವರ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಅಭಿವೃದ್ಧಿಯ ಆದ್ಯತೆಗಳಾದ ಮೂಲಸೌಕರ್ಯ, ಹೂಡಿಕೆ, ನಗರ ಸಾರಿಗೆ, ನೀರಾವರಿ, ನಾವೀನ್ಯತೆ ಹಾಗೂ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುವ ಕಲ್ಯಾಣ ಯೋಜನೆಗಳ ಕುರಿತು ನಾವು ರಚನಾತ್ಮಕವಾಗಿ ಚರ್ಚಿಸಿದ್ದಾರೆ.
ಭಾರತದ ಅಭಿವೃದ್ಧಿಯ ಪಯಣದಲ್ಲಿ ಕರ್ನಾಟಕವು ಯಾವಾಗಲೂ ಪ್ರಮುಖ ಕೊಡುಗೆ ನೀಡುತ್ತಾ ಬಂದಿದೆ. ಈ ಪಾತ್ರವನ್ನು ಇನ್ನಷ್ಟು ಬಲಪಡಿಸುವ ನಮ್ಮ ಬದ್ಧತೆಯನ್ನು ನಾನು ಈ ವೇಳೆ ಪ್ರಸ್ತಾಪಿಸಿದ್ದಾರೆ. ಅಭಿವೃದ್ಧಿಯನ್ನು ವೇಗಗೊಳಿಸಲು, ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಮತ್ತು ಕರ್ನಾಟಕದ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯೊಂದಿಗೆ ಕೇಂದ್ರ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ ಎಂದು ಚರ್ಚೆ ನಡೆಸಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಭಿವೃದ್ಧಿಯು ಅಂತಿಮವಾಗಿ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು. ಇದು ಕರ್ನಾಟಕ ಆಡಳಿತದ ತತ್ವವಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಮಾನವ ಬಂಡವಾಳದ ಗುಣಮಟ್ಟ ಅತ್ಯುತ್ತಮವಾಗಿ ಸುಧಾರಿಸಿದೆ. ಇತ್ತಿಚೆಗೆ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ. ರಾಜ್ಯದ ಬಜೆಟ್ ನಲ್ಲಿ 24% ಅನುದಾನ ಮೀಸಲಿಟ್ಟಿದ್ದು ದುರ್ಬಲ ವರ್ಗಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ.
ಬಡವರಿಗೆ ಗುಣಮಟ್ಟದ ಶಿಕ್ಷಣ ನೀಡಲು ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಿದೆ. ದ್ವಿಭಾಷಾ ನೀತಿ ಅಳವಡಿಸಿಕೊಂಡಿದ್ದೇವೆ. ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್ ನಂತಹ ಕ್ಷೇತ್ರಗಳನ್ನು ಪ್ರೊತ್ಸಾಹಿಸುತ್ತಿದ್ದೇವೆ. ಡಿಜಿಟಲ್ ಮೂಲಸೌಕರ್ಯ ನಮ್ಮ ಆದ್ಯತೆಯಾಗಿದೆ. ಆಡಳಿತ ಸುಧಾರಣೆಗೆ ಎಐ ತಂತ್ರಜ್ಞಾನ ಬಳಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗಿಂತ ವಿಭಿನ್ನ ಹೆಜ್ಜೆ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೇಂದ್ರ ಸರ್ಕಾರದಿಂದ ನಡೆಸಲಾಗುತ್ತಿದ್ದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಮೊದಲ ಸಭೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಕಳುಹಿಸಲಾಗಿತ್ತು. ಇದಾದ ನಂತರ ಕೆಲವು ಸಭೆ ಬಹಿಷ್ಕರಿಸಿ ರಾಜ್ಯದ ಅನುದಾನ ನೀಡುವಂತೆ ಪತ್ರಗಳನ್ನು ಬರೆಯುತ್ತಿದ್ದರು. ಆದರೆ, ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಿಂತ ವಿಭಿನ್ನ ಹೆಜ್ಜೆಯನ್ನಿಡುವ ಮೂಲಕ ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ತಾವೇ ಖುದ್ದಾಗಿ ನೀತಿ ಆಯೋಗದ ಸಭೆಗೆ ಹಾಜರಾಗಿದ್ದಾರೆ.
ಇನ್ನು ವೈಯಕ್ತಿಕ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ, ಕರ್ನಾಟಕ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿದ್ದಾರೆ. ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಬೇಕಿರುವ ಅನುದಾನಗಳು ಕುರಿತು ಪ್ರಸ್ತಾಪ ಮಾಡಿದ್ದು, ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ರಾಜ್ಯಕ್ಕೆ ನೀಡುವಂತೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ಭೇಟಿಯ ನಂತರ ಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭೇಟಿ ಮಾಡಿದರು. ಈ ವೇಳೆ ಸಚಿವ ಕೃಷ್ಣಭೈರೇಗೌಡ , ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಾಥ್ ನೀಡಿದರು. ಜೊತೆಗೆ, ರಾಜ್ಯದ ಪಾಲಿನ ಅನುದಾನ ಬಿಡುಗಡೆ ಕುರಿತು ಪ್ರಸ್ತಾಪ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

