ರಾಯಚೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ದೇಶದ ಹಿತಾಸಕ್ತಿಯನ್ನೇ ಬಲಿಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಎಐ ತಂತ್ರಜ್ಞಾನದಿಂದ ಉದ್ಯೋಗ ನಷ್ಟ ಎಂಬುದು ಅಪಪ್ರಚಾರ ಎಂದ ಅವರು, ರಾಹುಲ್ ಗಾಂಧಿ 'ಅಪ್ರಬುದ್ಧ ರಾಜಕಾರಣಿ' ಎಂದು ಟೀಕಿಸಿದರು.

ರಾಯಚೂರು (ಫೆ.21) ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ದೇಶದ ಹಿತಾಸಕ್ತಿಯನ್ನೇ ಬಲಿಕೊಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ಇಂದು ರಾಯಚೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಎಐ (AI) ತಂತ್ರಜ್ಞಾನ ಮತ್ತು ದೇಶದ ಯುವಶಕ್ತಿಯ ಬಗ್ಗೆ ಮಹತ್ವದ ಮಾತುಗಳನ್ನಾಡಿದರು.

ಎಐ ಶೃಂಗಸಭೆ: ಭಾರತದ ಸಾಧನೆ ಬಗ್ಗೆ ಜೋಶಿ ಹೆಮ್ಮೆ

ಭಾರತ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳ ಎಐ ಶೃಂಗಸಭೆಯಲ್ಲಿ ಭಾರತವು ಇಂದು ಮೂರನೇ ಸ್ಥಾನದಲ್ಲಿದೆ ಎಂದು ಜೋಷಿ ಹೆಮ್ಮೆಯಿಂದ ತಿಳಿಸಿದರು. ನಮ್ಮ ದೇಶದಲ್ಲಿ ಡಿಜಿಟಲ್ ತಂತ್ರಜ್ಞಾನ, ಬಲಿಷ್ಠ ವ್ಯವಸ್ಥೆಗಳು ಮತ್ತು ಚಿಪ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ. 'ನಮ್ಮ ದೇಶದಲ್ಲಿರುವಷ್ಟು ದೊಡ್ಡ ಪ್ರಮಾಣದ ಯುವಶಕ್ತಿ ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ. 'ಈ ಯುವಶಕ್ತಿಗೆ ಸರಿಯಾದ ಕೌಶಲ್ಯ ನೀಡಿದಾಗ, ಭಾರತ ಜಗತ್ತನ್ನೇ ಆಳಬಲ್ಲದು' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಐನಿಂದ ಉದ್ಯೋಗ ನಷ್ಟ ಎಂಬುದು ಅಪಪ್ರಚಾರ!

ಎಐ (ಕೃತಕ ಬುದ್ಧಿಮತ್ತೆ) ಬಂದರೆ ಉದ್ಯೋಗಗಳು ನಷ್ಟವಾಗುತ್ತವೆ ಎಂಬ ಕಾಂಗ್ರೆಸ್ ವಾದವನ್ನು ಜೋಶಿ ತಳ್ಳಿಹಾಕಿದರು. ಈ ಹಿಂದೆ ಕಂಪ್ಯೂಟರ್ ಬಂದಾಗಲೂ ಇದೇ ರೀತಿ ಅಪಪ್ರಚಾರ ಮಾಡಲಾಗಿತ್ತು. ಆದರೆ ಕಂಪ್ಯೂಟರ್ ಬಂದ ಮೇಲೆ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾದವು. ಎಐ ವಿಚಾರದಲ್ಲೂ ಅಷ್ಟೇ, ಎಐ ಕೆಲಸ ಮಾಡಿಸಲು ಮನುಷ್ಯನೇ ಬೇಕು. ಮನುಷ್ಯನ ಮೆದುಳು ಮತ್ತು ಕೌಶಲ್ಯ ಅಭಿವೃದ್ಧಿಯಾದಾಗ ಎಐ ಮೂಲಕ ಹೊಸ ಉದ್ಯೋಗ ಕ್ರಾಂತಿ ಸಂಭವಿಸಲಿದೆ' ಎಂದು ಅವರು ಸ್ಪಷ್ಟಪಡಿಸಿದರು.

ಜನರು ಬಡವರಾಗಿಯೇ ಇರಲಿ ಎಂಬುದು ಕಾಂಗ್ರೆಸ್ ಮನಸ್ಥಿತಿ

ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವರು, ದೇಶದ ಜನರು ಯಾವಾಗಲೂ ಬಡವರಾಗಿಯೇ ಇರಬೇಕು, ಸರ್ಕಾರದ ಮೇಲೆ ಅವಲಂಬಿತರಾಗಿರಬೇಕು ಎಂಬುದು ಕಾಂಗ್ರೆಸ್‌ನ ಮೈಂಡ್ ಸೆಟ್. ಗ್ಯಾರೆಂಟಿ-ಪಾರಂಟಿ ಹೆಸರಲ್ಲಿ ಜನರನ್ನು ಮರಳು ಮಾಡಿ ಓಟು ಪಡೆಯುವುದು ಅವರ ಗುರಿ. ಆದರೆ ಪ್ರಧಾನಿ ಮೋದಿಯವರು 2014ರಲ್ಲೇ ಹೇಳಿದಂತೆ, ನಮ್ಮ ಸರ್ಕಾರ ಬಡವರನ್ನು ಸಶಕ್ತರನ್ನಾಗಿ ಮಾಡುವತ್ತ ಗಮನಹರಿಸುತ್ತಿದೆ' ಎಂದರು.

ಅನ್ನಭಾಗ್ಯದ ಹೆಸರಲ್ಲಿ ಕ್ರೆಡಿಟ್ ವಾರ್: ಕಾಂಗ್ರೆಸ್ ವಿರುದ್ಧ ಕಿಡಿ

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಕುರಿತು ಮಾತನಾಡಿದ ಜೋಶಿ ಅವರು, 'ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಇವರು ತಮ್ಮ ಹೆಸರನ್ನು ಬರೆದುಕೊಳ್ಳುತ್ತಾರೆ. ತಾವು ಕೊಡಬೇಕಾದ 5 ಕೆಜಿ ಅಕ್ಕಿಯನ್ನು ಇಂದಿಗೂ ಕೊಟ್ಟಿಲ್ಲ. ಇವರು ಅತ್ಯಂತ ಅಯೋಗ್ಯರು' ಎಂದು ಟೀಕಿಸಿದರು. ಜನರು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂಬುದು ನಮ್ಮ ಉದ್ದೇಶವಾದರೆ, ಕಾಂಗ್ರೆಸ್ ಅವರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿದೆ ಎಂದು ದೂರಿದರು.

ರಾಹುಲ್ ಗಾಂಧಿ ಒಬ್ಬ 'ಪಾರ್ಟ್ ಟೈಮ್' ರಾಜಕಾರಣಿ

ಕಾಂಗ್ರೆಸ್ ಪಕ್ಷದ ಅವನತಿಗೆ ರಾಹುಲ್ ಗಾಂಧಿಯವರೇ ಕಾರಣ ಎಂದು ಜೋಷಿ ಗುಡುಗಿದರು. 'ರಾಹುಲ್ ಗಾಂಧಿ ಒಬ್ಬ ಪಾರ್ಟ್ ಟೈಮ್ ಅಪ್ರಬುದ್ಧ ರಾಜಕಾರಣಿ. ಅವರ ಬುದ್ಧಿಯಿಲ್ಲದ ವರ್ತನೆಯಿಂದಲೇ ಕಾಂಗ್ರೆಸ್ ಪಾರ್ಟಿ ಹಾಳಾಗಿ ಹೋಗಿದೆ. ಎಐ ಶೃಂಗಸಭೆಯಂತಹ ದೇಶದ ಪ್ರಗತಿಯ ಕೆಲಸಗಳನ್ನು ಟೀಕಿಸುವುದು ಇವರ ಅಜ್ಞಾನಕ್ಕೆ ಹಿಡಿದ ಕೈಗನ್ನಡಿ ಎಂದು ಪ್ರಹ್ಲಾದ್ ಜೋಶಿ ರಾಯಚೂರಿನಲ್ಲಿ ವಾಗ್ದಾಳಿ ನಡೆಸಿದರು.

YouTube video player