ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ನೇಮಕ ಮಾಡಿ, ಅವರಿಗೆ ಸರ್ಕಾರದಿಂದ ಸಂಬಳ ನೀಡುತ್ತಿರುವ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ (ಮಾ.13): ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ನೇಮಕ ಮಾಡಿ, ಅವರಿಗೆ ಸರ್ಕಾರದಿಂದ ಸಂಬಳ ನೀಡುತ್ತಿರುವ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಗ್ಯಾರಂಟಿ ಅನುಷ್ಠಾನದಲ್ಲಿ ಕಾರ್ಯಕರ್ತರಿಗೇನು ಕೆಲಸ? ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು, ಮಂತ್ರಿಗಳು, ಅಧಿಕಾರಿಗಳೇನು ಕತ್ತೆ ಕಾಯೋಕೆ ಇದ್ದಾರಾ? ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯ ಸರ್ಕಾರ ಹಗಲು ದರೋಡೆ ಮಾಡ್ತಿದೆ:
ಗ್ಯಾರೆಂಟಿ ಅನುಷ್ಠಾನಕ್ಕೆ ಕಾರ್ಯಕರ್ತರನ್ನು ನೇಮಕ ಮಾಡಿ ಅವರ ಸಂಬಳಕ್ಕೆ ಸರ್ಕಾರದ ಖಜಾನೆಯಿಂದಲೇ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಇದು ಜನರ ಹಣ, ಕಾರ್ಯಕರ್ತರಿಗೆ ಏಕೆ ನೀಡಲಾಗುತ್ತೆ? ಕಾಂಗ್ರೆಸ್ ಕಾರ್ಯಕರ್ತರೇನು ಜನಪ್ರತಿನಿಧಿಗಳೇನು? ರಾಜ್ಯ ಸರ್ಕಾರದ ಹಗಲು ದರೋಡೆ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ಜನರೇ ಸರ್ಕಾರಕ್ಕೆ ಪತ್ರ, ಇಮೇಲ್, ಸೋಷಿಯಲ್ ಮೀಡಿಯಾದ ಮೂಲಕ ಪ್ರಶ್ನೆ ಮಾಡಬೇಕು, ಈ ರೀತಿ ಜನರ ತೆರಿಗೆ ಹಣ ಪಕ್ಷದ ಕಾರ್ಯಕರ್ತರಿಗೆ ನೀಡುವುದನ್ನು ವಿರೋಧಿಸಬೇಕು. ಜನರು ಪ್ರಶ್ನಿಸದೇ ಸುಮ್ಮನಿದ್ದರೆ ತೆರಿಗೆ ಹಣ ಲೂಟಿ ಮಾಡುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಮಂತ್ರಿಗಳ ಕೈವಾಡ?; ಕೇಂದ್ರ ಸಚಿವ ಜೋಶಿ ಸ್ಫೋಟಕ ಹೇಳಿಕೆ!
ಸಿದ್ದರಾಮಯ್ಯ ಅಂದ್ರೆ ಸುಳ್ಳು ರಾಮಯ್ಯ:
ಸಿದ್ದರಾಮಯ್ಯ ಅಂದರೆ ಸುಳ್ಳುರಾಮಯ್ಯ. ಏನು ಹೇಳ್ತಾರೋ ಅದ್ಯಾವುದೂ ಸತ್ಯವಲ್ಲ. ಬರೀ ಹಸಿ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. ಈ ಸರ್ಕಾರದಲ್ಲಿ ಸ್ವಪಕ್ಷದ ಶಾಸಕರು, ಸಚಿವರು ಸಂತೋಷವಾಗಿಲ್ಲ. ಆದರೆ ಇದನ್ನು ಮುಖ್ಯಮಂತ್ರಿ ಮುಂದೆ ಹೇಳು ತಾಕತ್ತು ಅವರಿಗಿಲ್ಲ. ನಿಮ್ಮ(ರಾಜ್ಯ ಸರ್ಕಾರ) ಸರ್ಕಾರಿ ಕಚೇರಿಗಳ ಕರೆಂಟ್ ಬಿಲ್ ಕಟ್ಟೋಕೆ ದುಡ್ಡು ಇಲ್ಲ. ಆದ್ರೆ ಕಾರ್ಯಕರ್ತರಿಗೆ ದುಡ್ಡು ಕೊಡ್ತೀರಿ. ನಿಮ್ಮ ಯೋಗ್ಯತೆ, ನಿಮ್ಮ ಸ್ಥಿತಿ ಇಷ್ಟೇ ಇದೆ. ಜನರು ಮುಗ್ಧ ಜನರು ಉಚಿತ ಯೋಜನೆಗಳ ಆಸೆಗೆ ನಿಮ್ಮನ್ನು ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ಆದರೆ ಅವರಿಗಾಗಿ ಒಂದೊಳ್ಳೆ ಕೆಲಸ ಮಾಡದೇ ನೀವು ಹಗಲು ದರೋಡೆ ಮಾಡೋದ್ರಲ್ಲೇ ವರ್ಷಗಳನ್ನ ಕಳೆದಿದ್ದೀರಿ. ಈಶ್ವರ, ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿದರು.
