ಚೆನ್ನೈ ಅಪೋಲೋ ಆಸ್ಪತ್ರೆ ದಾಖಲಾದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಕಣ್ಣಿನ ಚಿಕಿತ್ಸೆ ನೀಡಲಾಗುತ್ತದೆ. ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆ ದಾಖಲಾಗಿದ್ದಾರೆ. ಕುಮಾರಸ್ವಾಮಿ ಹೆಲ್ತ್ ಅಪ್‌ಡೇಟ್ ಇಲ್ಲಿದೆ. 

ಚೆನ್ನೈ (ನ.27) ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕಣ್ಣಿನ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಹೆಚ್‌ಡಿ ಕುಮಾರಸ್ವಾಮಿಗೆ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ. ಕಣ್ಣಿನ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿರುವ ಕುಮಾರಸ್ವಾಮಿ ರೂಟಿನ್ ಚೆಕಪ್ ಮುಗಿಸಿ ನಾಳೆ (ಜ.28) ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯವಾಗಿದ್ದು, ರೂಟಿನ್ ಚೆಕ್ಅಪ್ ಮುಗಿಸಿ ನಾಳೆಯೇ ದಿಲ್ಲಿಗೆ ವಾಪಾಸ್ಸಾಗುವ ಸಾಧ್ಯತೆ ಇದೆ.

ಕಳೆದ ಹಲವು ತಿಂಗಳು ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಆದರೆ ಚಿಕಿತ್ಸೆ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡ ಕುಮಾರಸ್ವಾಮಿ ಜೆಡಿಎಸ್ ಸಭೆ ನಡೆಸಿದ್ದರು. ಇಷ್ಟೇ ಅಲ್ಲ ಪಕ್ಷ ಸಂಘಟನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಜೆಡಿಎಸ್ ವಿಶೇಷ ಕಾರ್ಯಕ್ರಮದಲ್ಲಿ ನಾಯಕರಿಗೆ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸೂಚಿಸಿದ್ದರು. ಹಲವು ತಿಂಗಳು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿಲ್ಲ ಹೆಚ್‌ಡಿ ಕುಮಾರಸ್ವಾಮಿ ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಆರೋಗ್ಯದ ಕುರಿತು ಹೇಳಿಕೆ ನೀಡಿದ್ದ ಕುಮಾರಸ್ವಾಮಿ

ಹೆಚ್‌ಡಿ ಕುಮಾರಸ್ವಾಮಿ ಕಳೆದ ಹಲವು ತಿಂಗಳಿನಿಂದ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಇದಕ್ಕಾಗಿ ಸತತ ಚಿಕಿತ್ಸೆ ಪಡೆದಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯದ ಕುರಿತು ಅಭಿಮಾನಿಗಳು, ಬೆಂಬಲಿಗರು ಆತಂಕ ವ್ಯಕ್ತಪಡಿಸಿದ್ದರು.ಇತ್ತೀಚೆಗೆ ಹಾಸನಾಂಬೆ ದರ್ಶನ ಪಡೆದು ತಮ್ಮ ಆರೋಗ್ಯದ ಕುರಿತು ಮಾತನಾಡಿದ್ದರು. ಕಳೆದ ಕೆಲ ತಿಂಗಳಿನಿಂದ ಬೇರೆ ರೀತಿಯ ಸಮಸ್ಯೆ ಎದುರಿಸಿದ್ದೇನೆ. ದೇವರು ಮತ್ತೆ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶಕ್ತಿ ನೀಡಲಿ ಎಂದಿದ್ದರು.

ಸ್ಪಷ್ಟನೆ ನೀಡಿದ್ದ ಪುತ್ರ ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ ಈ ಕುರಿತು ಸ್ಪಷ್ಟನೆ ನೀಡಿದ್ದರು. ತಂದೆ ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯದಲ್ಲಿ ಸಣ್ಣ ಏರುಪೇರಾಗಿತ್ತು. ಆದರೆ ಆತಂಕಪಡುವ ಯಾವುದೇ ಅಗತ್ಯವಿಲ್ಲ. ಕುಮಾರಸ್ವಾಮಿ ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೆ ಆರೋಗ್ಯವಾಗಿದ್ದಾರೆ. ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ಆಗಸ್ಟ್ ತಿಂಗಳಲ್ಲಿ ಹೇಳಿದ್ದರು. ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯ ಸಮಸ್ಯೆ ಎದುರಿಸಿದ ಬಳಿಕ ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಲವು ಕ್ಷೇತ್ರಗಳಿಗೆ ಸುತ್ತಾಡಿ ಜೆಡಿಎಸ್ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ.