ಡಿಸಿಎಂ ಡಿಕೆ ಶಿವಕುಮಾರ್ ಅವರ 'ವರ್ಡ್ ಪವರ್' ಟ್ವೀಟ್‌ಗೆ ಸಿಎಂ ಸಿದ್ದರಾಮಯ್ಯ 'ವರ್ಡ್ ಇಸ್ ನಾಟ್ ಎ ಪವರ್' ಎಂದು ತಿರುಗೇಟು ನೀಡಿದ್ದಾರೆ. ಈ ಟ್ವಿಟರ್ ವಾಕ್ಸಮರವು ರಾಜಕೀಯ ವಲಯದಲ್ಲಿ ಗೂಢಾರ್ಥಗಳನ್ನು ಹುಟ್ಟುಹಾಕಿದ್ದು, ಕನ್ನಡ ಮಾಸದಲ್ಲಿ ಇಂಗ್ಲಿಷ್ ಬಳಕೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.
ಬೆಂಗಳೂರು (ನ.28): ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ರಾಜಕೀಯ 'Word War' ಟ್ವಿಟರ್‌ನಲ್ಲಿ ಮತ್ತೊಂದು ಸುತ್ತು ತಲುಪಿದೆ. ಇತ್ತೀಚೆಗೆ ಡಿಕೆ ಶಿವಕುಮಾರ್ ಅವರು "ವರ್ಡ್ ಪವರ್ ಇಸ್ ವರ್ಲ್ಡ್ ಪವರ್" ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ವರ್ಡ್ ಇಸ್ ನಾಟ್ ಎ ಪವರ್..' ಎಂದು ಟ್ವೀಟ್ ಮಾಡುವ ಮೂಲಕ ಡಿಸಿಎಂ ಶಿವಕುಮಾರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಗೂಢಾರ್ಥದ ರಾಜಕೀಯ ಸಂವಹನ
ಸಿಎಂ ಮತ್ತು ಡಿಸಿಎಂ ಇಬ್ಬರ ಟ್ವೀಟ್‌ಗಳು ಸಹ ರಾಜಕೀಯ ವಲಯದಲ್ಲಿ ಹತ್ತಾರು ಅರ್ಥಗಳನ್ನು ಹೇಳುತ್ತಿವೆ. ಮೇಲ್ನೋಟಕ್ಕೆ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ 'ಶಕ್ತಿ' ಯೋಜನೆ ಯಶಸ್ಸಿನ ಬಗ್ಗೆ ಟ್ವೀಟ್ ಮಾಡುವ ನೆಪದಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿದೆ. 'ವರ್ಡ್ ಇಸ್ ನಾಟ್ ಎ ಪವರ್' ಎಂಬ ವಾಕ್ಯವು 'ಮಾತಿಗಿಂತ ಕೃತಿ ಮುಖ್ಯ' ಎಂಬ ಸಂದೇಶವನ್ನು ನೀಡುವ ಮೂಲಕ ಡಿಕೆಶಿ ಅವರ ಹಿಂದಿನ ಹೇಳಿಕೆಗೆ ಪರೋಕ್ಷ ಉತ್ತರ ನೀಡಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಈ ಇಬ್ಬರು ನಾಯಕರ ಟ್ವೀಟ್‌ಗಳು ಯಾರಿಗೆ ಅರ್ಥವಾಗಬೇಕು ಅವರಿಗೆ ಮಾತ್ರ ಅರ್ಥವಾಗುವಂತೆ ಪದಗಳ ಸೂಕ್ಷ್ಮ ಜೋಡಣೆಯನ್ನು ಹೊಂದಿದ್ದು, ರಾಜ್ಯ ರಾಜಕೀಯದಲ್ಲಿನ ಗೊಂದಲಗಳ ಮಧ್ಯೆ ಮತ್ತಷ್ಟು ಕುತೂಹಲ ಮೂಡಿಸಿವೆ.
ಕನ್ನಡ ಮರೆತ ಸಿಎಂ ಡಿಸಿಎಂ:
ಕರ್ನಾಟಕ ರಾಜೋತ್ಸವ ಮಾಸವಾದ ನವೆಂಬರ್ ಮುಗಿಯುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ರಾಜಕೀಯ ನಾಯಕರು ಇಂಗ್ಲಿಷ್‌ನಲ್ಲಿ ಟ್ವೀಟ್‌ಗಳ ಭರಾಟೆಯನ್ನು ಶುರು ಮಾಡಿರುವುದಕ್ಕೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದೆ. 'ಸಿಎಂ, ಡಿಸಿಎಂ ಏನ್ರಪ್ಪಾ ನಿಮ್ಮಗಳ ಇಂಗ್ಲಿಷು? ನವೆಂಬರ್ ಇನ್ನೂ ಮುಗಿದಿಲ್ಲ ಆಗಲೇ ಇಂಗ್ಲಿಷಾ?' ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಕನಿಷ್ಠ ಒಂದು ವಾಕ್ಯವನ್ನಾದರೂ ಕನ್ನಡದಲ್ಲಿ ಕೊಟ್ಟಿದ್ದಾರೆ, ಆದರೆ ಇಬ್ಬರೂ ಪ್ರಮುಖವಾಗಿ ಇಂಗ್ಲಿಷ್‌ನಲ್ಲೇ ಟ್ವಿಟ್ ಮಾಡುತ್ತಿರುವುದಕ್ಕೆ ಕನ್ನಡಾಭಿಮಾನಿಗಳು ಕಿಡಿಕಾರಿದ್ದಾರೆ.


