ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಅವರು ರಾಯಚೂರಿನಲ್ಲಿ ರಸ್ತೆ ಕಾಮಗಾರಿ ವಿಳಂಬದ ಕಾರಣಕ್ಕೆ ಕೆಆರ್ಐಡಿಎಲ್ ಅಧಿಕಾರಿಗೆ 'ಕಟ್ಟಿ ಹಾಕಿ ಒದೀತಿನಿ' ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿಯಿಂದ  ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು

ರಾಯಚೂರು/ಬೆಂಗಳೂರು (ನ.28): ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಅವರು ಸರ್ಕಾರಿ ಅಧಿಕಾರಿಯೊಬ್ಬರಿಗೆ ಬಹಿರಂಗವಾಗಿ ಬೆದರಿಕೆ ಹಾಕಿರುವ ವಿವಾದ ಇದೀಗ ಮತ್ತೊಂದು ಹಂತ ತಲುಪಿದೆ.

ಸಚಿವ ಬೋಸರಾಜು ಅವರು, KRIDLನ ಎಇಇ ಹನುಮಂತರಾಯ ಅವರಿಗೆ, 'ನಾಳೆಯೇ ರಸ್ತೆ ಕಾಮಗಾರಿ ಆರಂಭಿಸಬೇಕು, ಒಂದು ವೇಳೆ ಕಾಮಗಾರಿ ಆರಂಭಿಸದೇ ಇದ್ರೆ ಕಟ್ಟಿ ಹಾಕಿ ಒದೀತಿನಿ ನೋಡು' ಎಂದು ತರಾಟೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ಘಟನೆ ನಡೆದಿದ್ದು ಎಲ್ಲಿ?

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಮರಾಠ ಗ್ರಾಮ ನಡೆದಿದ್ದ ಘಟನೆ. ನವೆಂಬರ್ 22 ರಂದು ಮರಾಠ ಗ್ರಾಮದಲ್ಲಿ ನಡೆದ ಶಾಲಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ, ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ರಸ್ತೆ ಕಾಮಗಾರಿ ಆರಂಭಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಸಚಿವರಿಗೆ ದೂರು ನೀಡಿದ್ದರು. ಈ ವೇಳೆ ಸಚಿವರು ಎಇಇ ಹನುಮಂತರಾಯ ಅವರನ್ನು ಸಾರ್ವಜನಿಕರ ಎದುರಲ್ಲೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಸೂಕ್ತ ಕ್ರಮಕ್ಕೆ ದಿನೇಶ್ ಕಲ್ಲಹಳ್ಳಿ ಆಗ್ರಹ:

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಕಲ್ಲಹಳ್ಳಿ ಅವರು, ರಾಜ್ಯಪಾಲರಿಗೆ ದೂರು ನೀಡಿದ್ದೇನೆ. ಕೂಡಲೇ ರಾಜ್ಯಪಾಲರು ಸಚಿವರ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು, ಎಂದು ಆಗ್ರಹಿಸಿದ್ದಾರೆ.

ಸಚಿವರ ಈ ವರ್ತನೆ ಸರ್ಕಾರಿ ಅಧಿಕಾರಿಗಳ ನೈತಿಕ ಸ್ಥೈರ್ಯಕ್ಕೆ ಧಕ್ಕೆ ತಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.