ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಚಾಲಕನ ನಿದ್ದೆ ಮಂಪರಿನಿಂದಾಗಿ ಕಾರೊಂದು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಿಂದ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.

ಬೆಳ್ಳಂಬೆಳಗ್ಗೆ ವಾಕಿಂಗ್‌ಗೆ ಹೋದವರ ಪಾಲಿಗೆ ಮೃತ್ಯುವಾದ ಕಾರು.

ಗದಗ: ರಸ್ತೆ ಬದಿ ನಡೆದು ಹೋಗುತ್ತಿದ್ದ ಇಬ್ಬರು ಪಾದಚಾರಿಗಳಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಗಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ಆಘಾತಕಾರಿ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಲಕ್ಷ್ಮೇಶ್ವರ ಪಟ್ಟಣದ ಚನ್ನಮ್ಮ ಕಾಲೇಜ್ ಬಳಿ ಕಾರು ಚಾಲಕನೋರ್ವ ನಿದ್ದೆ ಮಂಪರಿನಲ್ಲಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರನ್ನು 48 ವರ್ಷದ ಶಿವಾನಂದ ಹುಲಕೋಟಿ ಹಾಗೂ 40 ವರ್ಷದ ಅಶೋಕ್ ಸರ್ವಿ ಎಂದು ಗುರುತಿಸಲಾಗಿದೆ. ಈ ಕಾರು ಮಹಾರಾಷ್ಟ್ರದಿಂದ ಲಕ್ಷೇಶ್ವರಕ್ಕೆ ಬರುತ್ತಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚನ್ನಮ್ಮ ಸರ್ಕಲ್‌ಗೆ ಬರುತ್ತಿದ್ದಂತೆ ಕಾರು ಚಾಲಕನಿಗೆ ನಿದ್ದೆ ಮಂಪರು ಆಗಿದ್ದು, ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಚಾರಿಗಳ ಮೇಲೆ ಹತ್ತಿದೆ. ಘಟನೆಯಲ್ಲಿ ಮತ್ತೊಬ್ಬ ಪಾದಚಾರಿಯೂ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಇದೆ.

ಒಳ್ಳೆ ಆರೋಗ್ಯಕ್ಕೆಂದು ವಾಕ್ ಹೋದವರು ಅಪಘಾತಕ್ಕೆ ಬಲಿಯಾದರು

ಅಪಘಾತದಲ್ಲಿ ಮೃತರಾದ ಅಶೋಕ್ ಹಾಗೂ ಶಿವಾನಂದ ಬೆಳಗಿನ ಜಾವ ಅಂಬೇಡ್ಕರ್ ಬಡಾವಣೆಯಿಂದ ವಾಕ್ ಬಂದಿದ್ದರು. ಅವರು ನಡೆದು ಬರುತ್ತಿದ್ದಾಗಲೇ ಏಕಾಏಕಿ ಎದುರಿಗೆ ಬಂದ ಹುಂಡೈ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬಿಸಿಲಿಗೆ ಬೆಂದ ಬೆಂಗಳೂರು ಜನರಿಗೆ ಸಿಹಿ ಸುದ್ದಿ: ಸಿಲಿಕಾನ್ ಸಿಟಿಯಲ್ಲಿ ತಂಪರೆಯಲಿರುವ ವರುಣ