ಒಂದು ಕಾಲದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದ ಮುಂಡರಗಿಯ ಪುರಸಭೆ ಉದ್ಯಾನವನವು ಇಂದು ನಿರ್ಲಕ್ಷ್ಯದಿಂದಾಗಿ ಬಿಕೋ ಎನ್ನುತ್ತಿದೆ. ಹಸಿರು, ಕಾರಂಜಿ, ಮಕ್ಕಳ ಆಟಿಕೆಗಳಿಲ್ಲದೆ ಪಾಳುಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಉದ್ಯಾನವನ್ನು ಪುನಶ್ಚೇತನಗೊಳಿಸಿ, ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ: ಶರಣು ಸೊಲಗಿ

Add Asianetnews Kannada as a Preferred SourcegooglePreferred

ಮುಂಡರಗಿ: ಒಂದು ಕಾಲದಲ್ಲಿ ಕಾರಂಜಿ, ರಂಗುರಂಗಿನ ವಿದ್ಯುತ್ ದೀಪಾಲಂಕಾರ ಹಾಗೂ ಹಚ್ಚ ಹಸುರಿನ ಗಿಡ-ಮರಗಳು, ಮಕ್ಕಳ ಜಾರುಬಂಡಿ, ಜೋಕಾಲಿಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದ ಪುರಸಭೆ ಪಕ್ಕದ ಉದ್ಯಾನ ಈಗ ಬಿಕೋ ಎನ್ನುತ್ತಿದೆ.

ಪಟ್ಟಣದ ಮಧ್ಯವರ್ತಿ ಸ್ಥಳವಾದ ಹೇಮರಡ್ಡಿ ಮಲ್ಲಮ್ಮ ವೃತ್ತಕ್ಕೆ (ಬೃಂದಾವನ ಸರ್ಕಲ್) ಸಮೀಪ ಹಾಗೂ ಪುರಸಭೆ ಉದ್ಯಾನ ಎಂದೇ ಖ್ಯಾತವಾಗಿರುವ ಈ ಉದ್ಯಾನ ಪಟ್ಟಣಕ್ಕೆ ಬರುವ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ನಿತ್ಯ ಮಧ್ಯಾಹ್ನ ಬಂದು ಕುಳಿತುಕೊಳ್ಳಲು ವಿಶ್ರಾಂತಿ ತಾಣವಾಗಿತ್ತು. ವಿದ್ಯಾರ್ಥಿಗಳು ಮಧ್ಯಾಹ್ನ ಇಲ್ಲಿಯೇ ಕುಳಿತು ಊಟ ಮಾಡುತ್ತಿದ್ದರು. ಹೀಗಾಗಿ ಇದನ್ನು ಆಶ್ರಯಿಸಿದ್ದ ಎಲ್ಲರಿಗೂ ತೊಂದರೆಯಾದಂತಾಗಿದೆ.

ಉದ್ಯಾನ ಒಳಗಡೆಗೆ ಅನೈತಿಕ ಚಟುವಟಿಕೆ

ಈ ಉದ್ಯಾನದಲ್ಲಿ ಈಗ ಯಾವುದೇ ಗಿಡ-ಮರಗಳಿಲ್ಲ, ನೆಲದಲ್ಲಿ ಹುಲ್ಲಿಲ್ಲ. ಕುಳಿತಕೊಳ್ಳೋಣ ಎಂದರೆ ಮಣ್ಣು-ಧೂಳು. ಹುಲ್ಲುಹಾಸು ಇಲ್ಲದ ಕಾರಣ ಉದ್ಯಾನದಲ್ಲಿ ಈಗ ಕೆಲವು ಹುಡುಗರು ಕ್ರಿಕೆಟ್‌ ಆಡುತ್ತಾರೆ. ಅಲ್ಲದೇ ಉದ್ಯಾನ ಒಳಗಡೆಗೆ ಅನೈತಿಕ ಚಟುವಟಿಕೆಯೂ ನಡೆಯುತ್ತಿರುವುದು ಕಂಡು ಬರುತ್ತಿದೆ. ಕಾರಂಜಿ ಸ್ಥಗಿತಗೊಂಡಿದೆ. ಮಕ್ಕಳಿಗೆ ಜೋಕಾಲಿ, ಜಾರು ಬಂಡಿ ಯಾವುದೂ ಕಾಣುತ್ತಿಲ್ಲ.

ಇದೀಗ ಬೇಸಿಗೆ ಪ್ರಾರಂಭವಾಗಿದ್ದು, ಒಂದಿಷ್ಟು ಹುಲ್ಲುಹಾಸು ನಿರ್ಮಿಸಿ, ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಟ್ಟು, ನಿತ್ಯ ಅವುಗಳಿಗೆ ನೀರಿನ ವ್ಯವಸ್ಥೆ ಮಾಡಿ ಬೆಳೆಸುವ ಜತೆಗೆ ಇಲ್ಲಿಗೆ ಬಂದು ಊಟ ಮಾಡಿ ವಿಶ್ರಾಂತಿ ಪಡೆಯುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ.

ಪುರಸಭೆಯಿಂದ ಹಸಿರು ಹೆಚ್ಚಿಸುವ ಕೆಲಸ ಮಾಡಿ, ಕಾರಂಜಿ ಪ್ರಾರಂಭಿಸಿ, ಬೆಳಗ್ಗೆ ಹಾಗೂ ಸಂಜೆ ಪಟ್ಟಣದ ಹಿರಿಯ ನಾಗರಿಕರು, ಮಹಿಳೆಯರು ಬಂದು ವಾಯು ವಿಹಾರ ಮಾಡಿ, ವಿಶ್ರಾಂತಿ ಪಡೆಯುವಂತೆ ಅನುಕೂಲ ಮಾಡಿಕೊಡಬೇಕೆನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಗಮನ ಹರಿಸಲಿ

1992ರಲ್ಲಿ ತಾವು ಪುರಸಭೆ ಅಧ್ಯಕ್ಷರಾಗಿದ್ದಾಗ ಸಾರ್ವಜನಿಕರ ವಂತಿಕೆ ಹಣದಿಂದ ಕಾರಂಜಿ ವ್ಯವಸ್ಥೆ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಇಂದು ಈ ಉದ್ಯಾನ ಹಸಿರಿಲ್ಲದೇ ಬಿಕೋ ಎನ್ನುತ್ತಿರುವುದು ವಿಷಾದನೀಯ. ಪುರಸಭೆ ಅಧಿಕಾರಿಗಳು ಗಮನಹರಿಸಿ ಮತ್ತೆ ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ವೈ.ಎನ್. ಗೌಡರ್ ತಿಳಿಸಿದರು.