ಡೀಸೆಲ್ ಬೆಲೆ ಏರಿಕೆಯಿಂದಾಗಿ ರಾಜ್ಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಬಗ್ಗೆ ಸಾರಿಗೆ ಸಚಿವ ಬೈರತಿ ಸುರೇಶ್ ಸುಳಿವು ನೀಡಿದ್ದಾರೆ. ದರ ಪರಿಷ್ಕರಣೆ ಕುರಿತು ಸಮಿತಿ ವರದಿ ಬಂದ ಬಳಿಕ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಬೆಂಗಳೂರು: ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಬಸ್ ಟಿಕೆಟ್ ದರ ಹೆಚ್ಚಳದ ಕುರಿತು ಮಾತನಾಡಿದ್ದು, ಕೇಂದ್ರ ಸರ್ಕಾರ ಈ ಹಿಂದೆ ನಾಲ್ಕು ಬಾರಿ ಬಸ್ ದರ ಹೆಚ್ಚಳ ಮಾಡಿದ್ದರೆ, ನಾವು 2025 ರಲ್ಲಿ ಮಾತ್ರ ಪರಿಷ್ಕರಣೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಒಂದು ಲೀಟರ್ ಡೀಸೆಲ್ ಬೆಲೆಯಲ್ಲಿ ಸುಮಾರು 15 ರಿಂದ 16 ರೂಪಾಯಿಗಳಷ್ಟು ಏರಿಕೆಯಾಗಿದೆ ಎಂದು ಹೇಳಿದರು.
ದರ ಏರಿಕೆಯ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ನಾಲ್ಕೂ ರಾಜ್ಯ ಸಾರಿಗೆ ನಿಗಮಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ನೀಡಲು ಕಮಿಟಿಯೊಂದನ್ನು ರಚಿಸಲಾಗಿದ್ದು, ಇಂದೋ ಅಥವಾ ನಾಳೆಯೋ ಆ ವರದಿ ಕೈಸೇರಲಿದೆ. ನಂತರ ಮುಂದಿನ ನಿರ್ಧಾರ ಪ್ರಕಟಿಸಲಾಗವುದು ಎಂದು ಸಾರಿಗೆ ಸಚಿವರು ಸುಳಿವು ನೀಡಿದರು.
ಬಸ್ ದರ ಏರಿಕೆ ಅಂತಿಮ ನಿರ್ಧಾರ ಯಾವಾಗ?
ಬಸ್ ದರ ಹೆಚ್ಚಳದ ವಿಚಾರವಾಗಿ ಟೀಕಿಸುತ್ತಿರುವ ವಿಪಕ್ಷಗಳಿಗೆ ಪ್ರಶ್ನಿಸಿದ ಸಚಿವರು, ಡೀಸೆಲ್ ದರ ಐದು ಬಾರಿ ಏರಿಕೆಯಾಗಿದ್ದರೂ ಬಸ್ ದರ ಹೆಚ್ಚಿಸದಿದ್ದರೆ ಸಂಸ್ಥೆಗಳನ್ನು ನಡೆಸುವುದು ಹೇಗೆ ಎಂದು ಕಿಡಿಕಾರಿದ್ದಾರೆ. ಆದ್ದರಿಂದ, ಬರುವ ವರದಿಯನ್ನು ಪರಿಶೀಲಿಸಿ, ಇಂಧನ ವೆಚ್ಚಕ್ಕೆ ತಕ್ಕಂತೆ ಎಷ್ಟು ದರ ಹೆಚ್ಚಳ ಮಾಡಬೇಕೆಂದು ತೀರ್ಮಾನಿಸಿ, ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿಗಳ ಅನುಮೋದನೆ ಪಡೆದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
2 ಕೋಟಿ ಸ್ಮಾರ್ಟ್ ಕಾರ್ಡ್
ಇದೇ ವೇಳೆ ಶಕ್ತಿ ಯೋಜನೆಯಡಿಯಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಬಗ್ಗೆ ಮಾತನಾಡಿದ ಸಾರಿಗೆ ಸಚಿವರು, ಬೇರೆ ರಾಜ್ಯದವರು ನಾವು ಹೆಣ್ಣುಮಕ್ಕಳು ಅಂತ ಕಂಡಕ್ಟರ್ ಜೊತೆ ಜಗಳ ತೆಗೆಯುತ್ತಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಹೆಣ್ಣು ಮಕ್ಕಳಿಗಾಗಿ ಶಕ್ತಿ ಯೋಜನೆಯನ್ನು ಮಾಡಲಾಗಿದೆ. ಕಳೆದ ಕ್ಯಾಬಿನೆಟ್ ನಲ್ಲಿ 200 ಕೋಟಿ ಹಣ ಕೊಟ್ಟಿದ್ದೇವೆ. 1 ಕೋಟಿ ಕಾರ್ಡ್ ಕೊಡುತ್ತಿದ್ದೇವೆ. ಒಟ್ಟು 2 ಕೋಟಿ ಕಾರ್ಡ್ ಬೇಕಾಗಿದ್ದು, 1 ಕೋಟಿಗೆಗೆ ಟೆಂಡರ್ ಕರೆದಿದ್ದೇವೆ. 15 ದಿನದಲ್ಲಿ ಟೆಂಡರ್ ಫೈನಲ್ ಆಗಿ, 2 ತಿಂಗಳಲ್ಲಿ ಕೊಡಲಿದ್ದೇವೆ. ಹಂತ ಹಂತವಾಗಿ ಇಡೀ ರಾಜ್ಯದಲ್ಲಿ ಸ್ಮಾರ್ಟ್ ಕಾರ್ಡ್ ಹಂಚಿಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Free Bus: ಶಕ್ತಿ ಯೋಜನೆಗೆ ಬಿಗ್ ಟ್ವಿಸ್ಟ್: ಉಚಿತ ಪ್ರಯಾಣಕ್ಕೆ ಇನ್ಮುಂದೆ ಹೊಸ ನಿಯಮ!


