ಎನ್‌ಸಿಇಆರ್‌ಟಿ ತನ್ನ ನೂತನ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಭಾರತದ ಇತಿಹಾಸದ ಅಜ್ಞಾತ ವೀರರು ಹಾಗೂ ರಾಣಿಯರ ಸಾಹಸಗಾಥೆಗಳನ್ನು ಸೇರಿಸಿದೆ. ಇದರಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ, ಕುಮಾರ ಕಂಪಣ ಸೇರಿದಂತೆ ಹಲವು ಧೀಮಂತ ನಾಯಕರ ಶೌರ್ಯವನ್ನು ವಿವರಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಭಾರತದ ನೈಜ ಇತಿಹಾಸ ಮತ್ತು ಮಹಿಳಾ ನಾಯಕತ್ವದ ಪರಿಚಯ ಮಾಡಲಾಗುತ್ತಿದೆ.
ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ತನ್ನ ನೂತನ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಭಾರತದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ, ಆದರೆ ಕಡಿಮೆ ಪ್ರಚಾರ ಪಡೆದ ಧೀಮಂತ ನಾಯಕರು ಹಾಗೂ ವೀರ ರಾಣಿಯರ ಸಾಹಸಗಾಥೆಗಳನ್ನು ವಿಫುಲವಾಗಿ ಸೇರ್ಪಡೆಗೊಳಿಸಿದೆ. ಹೊಸ ಶೈಕ್ಷಣಿಕ ವರ್ಷಕ್ಕೆ ಬಿಡುಗಡೆ ಮಾಡಲಾಗಿರುವ ‘ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಆ್ಯಂಡ್ ಬಿಯಾಂಡ್ - ಪಾರ್ಟ್ 2’ ಎಂಬ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಈ ಯುದ್ಧ ಪರಂಪರೆಯನ್ನು ವಿವರಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಕರ್ನಾಟಕದಲ್ಲಿ ಸಾಮ್ರಾಜ್ಯವಾಳಿದ ಅನೇಕರ ಹೆಸರುಗಳನ್ನು ಸೇರಿಸಲಾಗಿದೆ.
ಉಳ್ಳಾಲದ ರಾಣಿ ಅಬ್ಬಕ್ಕ ಹಾಗೂ ಕುಮಾರ ಕಂಪಣನ ಸಾಹಸ
ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲವನ್ನು ಆಳಿದ ರಾಣಿ ಅಬ್ಬಕ್ಕ ಚೌಟ, ಪ್ರಬಲ ಪೋರ್ಚುಗೀಸ್ ನೌಕಾಪಡೆಯನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಿದ ಐತಿಹಾಸಿಕ ಸಾಹಸವನ್ನು ಪಠ್ಯದಲ್ಲಿ ದಾಖಲಿಸಲಾಗಿದೆ. ಪ್ರಬಲ ಪೋರ್ಚುಗೀಸ್ ನೌಕಾಪಡೆಯ ಆಕ್ರಮಣವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ, ತಮ್ಮ ರಾಜ್ಯದ ಸಾರ್ವಭೌಮತ್ವ ಮತ್ತು ಜಲಮಾರ್ಗದ ವ್ಯಾಪಾರ ಹಕ್ಕುಗಳನ್ನು ರಕ್ಷಿಸಿಕೊಂಡ ಅಬ್ಬಕ್ಕಳ ಜಲಸಮರದ ಪ್ರತಿರೋಧವನ್ನು ಭಾರತೀಯ ಇತಿಹಾಸದ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ. ವಿದೇಶಿ ವಸಾಹತುಶಾಹಿ ಪಡೆಗಳ ಆಕ್ರಮಣವನ್ನು ವಿಫಲಗೊಳಿಸಿ, ತಮ್ಮ ಸಾರ್ವಭೌಮತ್ವ ಮತ್ತು ಜಲಮಾರ್ಗದ ವ್ಯಾಪಾರ ಹಕ್ಕುಗಳನ್ನು ರಕ್ಷಿಸಿಕೊಂಡ ಅಬ್ಬಕ್ಕಳ ಜಲಸಮರದ ಪ್ರತಿರೋಧವನ್ನು ಭಾರತೀಯ ಇತಿಹಾಸದ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಲಾಗಿದೆ.
ಇದೇ ವೇಳೆ, ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಯುವರಾಜ ಕುಮಾರ ಕಂಪಣ ತಮಿಳುನಾಡಿನ ಮದುರೈ ಸುಲ್ತಾನರ ವಿರುದ್ಧದ ಯುದ್ಧದಲ್ಲಿ ದೇವಿ ದಯಪಾಲಿಸಿದ ದಿವ್ಯ ಖಡ್ಗವನ್ನು ಬಳಸಿ ವಿಜಯ ಸಾಧಿಸಿದ್ದರು ಎಂಬ ಐತಿಹ್ಯವನ್ನು ಎನ್‌ಸಿಇಆರ್‌ಟಿ ತನ್ನ ನೂತನ 9ನೇ ತರಗತಿ ಪಠ್ಯಪುಸ್ತಕದಲ್ಲಿ ಸೇರಿಸಿದೆ. ಯುವರಾಜ ಕುಮಾರ ಕಂಪಣ ತಮಿಳುನಾಡಿನ ಮದುರೈ ಸುಲ್ತಾನರ ವಿರುದ್ಧದ ಯುದ್ಧದಲ್ಲಿ ದೇವಿ ದಯಪಾಲಿಸಿದ ದಿವ್ಯ ಖಡ್ಗವನ್ನು ಬಳಸಿ ವಿಜಯ ಸಾಧಿಸಿದ್ದರು ಎಂಬ ಐತಿಹ್ಯವಿದೆ. ಛತ್ರಪತಿ ಶಿವಾಜಿ ಮಹಾರಾಜರು ಶ್ರೀ ತುಳಜಾ ಭವಾನಿಯಿಂದ ಖಡ್ಗವನ್ನು ಆಶೀರ್ವಾದವಾಗಿ ಪಡೆದಿದ್ದರು. ಬಸ್ತರ್ ಸಂಸ್ಥಾನದ ದೊರೆ ಅನ್ನಮರಾಜ ಮಾಣಿಕೇಶ್ವರಿ (ದಂತೇಶ್ವರಿ) ದೇವಿಯಿಂದ ಖಡ್ಗ ಸ್ವೀಕರಿಸಿ ಯುದ್ಧ ಎದುರಿಸಿದ್ದ ಎಂಬ ವಿವರಗಳನ್ನೂ ಸೇರಿಸಲಾಗಿದೆ.
ಭಾರತದ ವೀರ ರಾಣಿಯರ ಶೌರ್ಯಗಾಥೆ
ಪಠ್ಯದ 'ಪ್ರತಿರೋಧ ಮತ್ತು ಸ್ಥಿತಿಸ್ಥಾಪಕತ್ವ' (Resistance and Resilience) ಎಂಬ ಅಧ್ಯಾಯದಲ್ಲಿ ಏಳನೇ ಶತಮಾನದಿಂದ ಭಾರತದ ಮೇಲೆ ನಡೆದ ವಿದೇಶಿ ಆಕ್ರಮಣಗಳನ್ನು ಭಾರತೀಯ ಆಡಳಿತಗಾರರು ಹೇಗೆ ಎದುರಿಸಿದರೆಂಬ ವಿವರಣೆ ಇದೆ.
ರಾಣಿ ನೈಕಿ ದೇವಿ: ಕ್ರಿ.ಶ. 1178 ರಲ್ಲಿ ಮೌಂಟ್ ಅಬು ಬಳಿಯ ಕಸಹಾದಾದಲ್ಲಿ ನಡೆದ ಯುದ್ಧದಲ್ಲಿ ಚಾಲುಕ್ಯ/ಸೋಲಂಕಿ ಸಾಮ್ರಾಜ್ಯದ ರಾಣಿ ನೈಕಿ ದೇವಿ ಭೀಕರ ದಾಳಿಕೋರ ಮುಹಮ್ಮದ್ ಘೋರಿಯನ್ನು ಸೋಲಿಸಿದ ಐತಿಹಾಸಿಕ ಘಟನೆಯನ್ನು ಉಲ್ಲೇಖಿಸಲಾಗಿದೆ.
ರಾಣಿ ರುದ್ರಮ ದೇವಿ: ಕಾಕತೀಯ ರಾಜವಂಶದ ಪ್ರಸಿದ್ಧ ಆಡಳಿತಗಾರ್ತಿ ರುದ್ರಮ ದೇವಿ ದೆಹಲಿ ಸುಲ್ತಾನರ ವಿರುದ್ಧ ತೋರಿದ ಪ್ರತಿರೋಧವನ್ನು ಸ್ಮರಿಸಲಾಗಿದೆ.
ಹಿಂದೂ ಶಾಹಿ, ಚಂದೇಲ ಮತ್ತು ಚೌಹಾಣರು: ಟರ್ಕಿಶ್ ಆಕ್ರಮಣಕಾರರ ವಿರುದ್ಧ ಈ ರಾಜವಂಶಗಳು ನೀಡಿದ ಪ್ರಬಲ ವಿರೋಧವನ್ನು ಉಲ್ಲೇಖಿಸಲಾಗಿದೆ.
ಇದರ ಜೊತೆಗೆ ಮೊಘಲರು ಮತ್ತು ಸುಲ್ತಾನರಿಗೆ ಸವಾಲೆಸೆದ ಘಟನೆಗಳು. ಪಠ್ಯದಲ್ಲಿ ಇತಿಹಾಸದ ಕೆಲವು ಅಪರೂಪದ ಘಟನೆಗಳನ್ನು ದಾಖಲಿಸಲಾಗಿದೆ.
ಮುತ್ತು ವಿರಪ್ಪ ನಾಯಕ್: ಮಧುರೈನ ನಾಯಕ ದೊರೆ ಮುತ್ತು ವಿರಪ್ಪ, ಮೊಘಲ್ ಆಸ್ಥಾನವು ಗೌರವ ಸೂಚಕವಾಗಿ ಕಳುಹಿಸಿದ್ದ ವಿಧ್ಯುಕ್ತ ಚಪ್ಪಲಿಗೆ ನಮಸ್ಕರಿಸಲು ನಿರಾಕರಿಸಿ, ಅದರೊಳಗೆ ತಮ್ಮ ಪಾದವನ್ನಿಟ್ಟು ಸ್ವಾಭಿಮಾನ ಮೆರೆದ ಕಥೆಯನ್ನು ಸೇರಿಸಲಾಗಿದೆ.
ಜಿಂಜಿ (ಸೆಂಜಿ) ಕೋಟೆ: ತಮಿಳುನಾಡಿನ ಜಿಂಜಿ ಕೋಟೆಯನ್ನು ವಿಜಯನಗರದ ನಾಯಕರು, ಬಿಜಾಪುರ ಸುಲ್ತಾನರು, ಮೊಘಲರು, ಮರಾಠರು, ಫ್ರೆಂಚ್ ಮತ್ತು ಬ್ರಿಟಿಷರು ಸತತವಾಗಿ ವಶಪಡಿಸಿಕೊಂಡಿದ್ದರು. ಈ ಕೋಟೆಯನ್ನು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವೆಂದು ಘೋಷಿಸಿರುವುದನ್ನು ಪಠ್ಯದಲ್ಲಿ ಪ್ರಸ್ತಾಪಿಸಲಾಗಿದೆ.
ಪಠ್ಯಕ್ರಮದಲ್ಲಿ ಮಹಿಳಾ ನಾಯಕತ್ವಕ್ಕೆ ಆದ್ಯತೆ
ಎನ್‌ಸಿಇಆರ್‌ಟಿ ತನ್ನ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಮಹಿಳಾ ನಾಯಕಿಯರ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 8ನೇ ತರಗತಿಯ 'ಎಕ್ಸ್‌ಪ್ಲೋರಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್' ಪಠ್ಯದಲ್ಲಿ ಗರ್ಹಾ/ಗೊಂಡ್ ರಾಜ್ಯದ ಧೀರ ರಾಣಿ ದುರ್ಗಾವತಿ ಅವರ ಆಡಳಿತ ಮತ್ತು ಸಾಹಸವನ್ನು ಪರಿಚಯಿಸಲಾಗಿತ್ತು. ಜೊತೆಗೆ 'ಬಲಿಷ್ಠ ಮರಾಠಾ ಮಹಿಳೆಯರು' ಎಂಬ ವಿಷಯದಡಿಯಲ್ಲಿ ಮರಾಠಾ ಸಾಮ್ರಾಜ್ಯದ ವೀರರಾಣಿ ತಾರಾಬಾಯಿ ಮತ್ತು ಮಾಳ್ವದ ಆಡಳಿತಗಾರ್ತಿ ಅಹಲ್ಯಾಬಾಯಿ ಹೋಳ್ಕರ್ ಅವರ ಅದ್ವಿತೀಯ ಕೊಡುಗೆಗಳನ್ನು ಸೇರಿಸಲಾಗಿತ್ತು.
ಪ್ರಸ್ತುತ ಬಿಡುಗಡೆಯಾಗಿರುವ 9ನೇ ತರಗತಿಯ ದ್ವಿತೀಯ ಭಾಗದ ಪುಸ್ತಕವು ಭಾರತದ ನೈಜ ಇತಿಹಾಸ ಹಾಗೂ ನಾರಿಯರ ಶೌರ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.


