ಶಿವಮೊಗ್ಗದ ತೀರ್ಥಹಳ್ಳಿಯ ತುಂಗಾ ನದಿ ತೀರದಲ್ಲಿ ಟ್ರಯಲ್‌ ಬಾಂಬ್‌ ಸ್ಫೋಟ ನಡೆಸಿದ ರೀತಿಯಲ್ಲೇ ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಅಂಬೋಲಿ ಅರಣ್ಯ ಪ್ರದೇಶದಲ್ಲೂ ಮಹಾರಾಷ್ಟ್ರದ ಕೆಲ ಶಂಕಿತ ಉಗ್ರರು ಟ್ರಯಲ್‌ ಬಾಂಬ್‌ ಸ್ಫೋಟಕ್ಕೆ ಪ್ರಯತ್ನಿಸಿದ್ದಾರೆ.

ಪುಣೆ/ಬೆಳಗಾವಿ (ಜು.30): ಶಿವಮೊಗ್ಗದ ತೀರ್ಥಹಳ್ಳಿಯ ತುಂಗಾ ನದಿ ತೀರದಲ್ಲಿ ಟ್ರಯಲ್‌ ಬಾಂಬ್‌ ಸ್ಫೋಟ ನಡೆಸಿದ ರೀತಿಯಲ್ಲೇ ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಅಂಬೋಲಿ ಅರಣ್ಯ ಪ್ರದೇಶದಲ್ಲೂ ಮಹಾರಾಷ್ಟ್ರದ ಕೆಲ ಶಂಕಿತ ಉಗ್ರರು ಟ್ರಯಲ್‌ ಬಾಂಬ್‌ ಸ್ಫೋಟಕ್ಕೆ ಪ್ರಯತ್ನಿಸಿದ್ದಾರೆ ಎಂಬ ಶಂಕೆ ಇದೀಗ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹದಳದ ಅಧಿಕಾರಿಗಳನ್ನು ಕಾಡಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಂಧಿತ ಇಬ್ಬರು ಶಂಕಿತ ಉಗ್ರರನ್ನು ಶನಿವಾರ ಅಂಬೋಲಿ ಅರಣ್ಯಕ್ಕೆ ಕರೆತಂದು ಸ್ಥಳ ಮಹಜರು ನಡೆಸಲಾಗಿದೆ.

ಪುಣೆ ಸ್ಫೋಟ ಸಂಚಿನ ಪ್ರಕರಣ ಸಂಬಂಧ ಇತ್ತೀಚೆಗೆ ಪುಣೆ ಪೊಲಿಸರು ಶಂಕಿತ ಉಗ್ರರಾದ ಮೊಹಮ್ಮದ್‌ ಇಮ್ರಾನ್‌ ಅಲಿಯಾಸ್‌ ಅಮೀರ್‌ ಅಬ್ದುಲ್‌ ಹಮೀದ್‌ ಖಾನ್‌ (23), ಮೊಹಮ್ಮದ್‌ ಯೂನಿಸ್‌ ಮೊಹಮ್ಮದ್‌ ಯಾಕೂಬ್‌ ಸಾಕಿ (24) ಎಂಬಿಬ್ಬರನ್ನು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಮಹಾರಾಷ್ಟ್ರ ಉಗ್ರ ನಿಗ್ರಹ ದಳ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಶಂಕಿತ ಉಗ್ರರನ್ನು ಉಗ್ರ ನಿಗ್ರಹ ದಳ ವಿಚಾರಣೆ ನಡೆಸಿದ ವೇಳೆ ಅವರು, ಟ್ರಯಲ್‌ ಬ್ಲಾಸ್ಟ್‌ ವಿಚಾರ ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಮಾಜಿ ಸಚಿವ ಸುಧಾಕರ್‌

ಈ ಹಿನ್ನೆಲೆಯಲ್ಲಿ ಅವರನ್ನು ಬೆಳಗಾವಿ ಗಡಿಯಿಂದ 70 ಕಿ.ಮೀ. ದೂರದಲ್ಲಿರುವ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಗೆ ಸೇರಿದ ಅಂಬೋಲಿ ಅರಣ್ಯಕ್ಕೆ ಕರೆದೊಯ್ದು ಎಟಿಎಸ್‌ನವರು ಸ್ಥಳ ಮಹಜರು ನಡೆಸಿದ್ದಾರೆ. ನಿಪ್ಪಾಣಿ ಮತ್ತು ಸಂಕೇಶ್ವರ ಮಾರ್ಗದ ಮೂಲಕ ಅವರನ್ನು ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಮತ್ತೊಬ್ಬ ಸೆರೆ: ಈ ನಡುವೆ ಇಮ್ರಾನ್‌ ಮತ್ತು ಯಾಕೂಬ್‌ ಸಾಕಿಗೆ ಹಣಕಾಸು ನೆರವು ನೀಡಿದ ಆರೋಪದ ಮೇರೆಗೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಒಬ್ಬ ವ್ಯಕ್ತಿಯನ್ನು ಮಹಾರಾಷ್ಟ್ರ ಎಟಿಎಸ್‌ ಬಂಧಿಸಿದೆ.