12th October 2025: ರಾಜ್ಯ ರಾಜಕೀಯದಲ್ಲಿ ಸಿಎಂ ಹುದ್ದೆ ಕುರಿತು ಡಿಕೆಶಿ ಸ್ಪಷ್ಟನೆ, ಮಹಿಳೆಯರಿಗೆ ಮುಟ್ಟಿನ ರಜೆ ಬಗ್ಗೆ ಸಚಿವರ ಎಚ್ಚರಿಕೆ, ₹150 ಕೋಟಿ ಸೈಬರ್ ವಂಚಕನ ಬಂಧನ ಹಾಗೂ ವಿಜಯಪುರ ಭೂಕಂಪದಂತಹ ಪ್ರಮುಖ ಸುದ್ದಿಗಳು.
1.ಮಹಿಳೆಯರಿಗೆ ಮುಟ್ಟಿನ ರಜೆ ನೀಡದ ಕಂಪನಿಗಳ ವಿರುದ್ಧ ಕಠಿಣ ಕ್ರಮ: ಸಂತೋಷ್ ಲಾಡ್ ಎಚ್ಚರಿಕೆ
‘ರಾಜ್ಯದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ರಜೆ ನೀಡುವ ನೀತಿಯನ್ನು ಪ್ರತಿಯೊಂದು ಕಂಪೆನಿಯೂ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಚ್ಚರಿಕೆ ನೀಡಿದ್ದಾರೆ.
2. ಸಿಎಂ ಡಿನ್ನರ್‌ಗೆ ಹೋಗಿ ನಾಟಿ ಕೋಳಿ ತಿಂದು ಬರುತ್ತೇನೆ ಅದರಲ್ಲೇನೂ ವಿಶೇಷ ಇಲ್ಲ: ಪ್ರಿಯಾಂಕ್ ಖರ್ಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೋಜನಕೂಟಕ್ಕೆ ಕರೆದಿದ್ದಾರೆ. ಒಳ್ಳೆಯ ನಾಟಿ ಕೋಳಿ ಊಟ ಮಾಡಿಸುತ್ತಾರೆ. ಸೋಮವಾರ ಆದರೂ ಪರವಾಗಿಲ್ಲ, ನಾಟಿ ಕೋಳಿ ಮಾಡಿಸಿದ್ದರೆ ಊಟ ಮಾಡುತ್ತೇನೆ. ಇಲ್ಲದಿದ್ದರೆ ಸೊಪ್ಪು ಸಾರು ಊಟವಾದರೂ ಸರಿ. ನಮ್ಮ ಮುಖ್ಯಮಂತ್ರಿ ಊಟಕ್ಕೂ ಕರೆಯಬಾರದು ಎಂದರೆ ಹೇಗೆ? ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
3.ಬೆಳಗಾವಿಯಲ್ಲಿ ಕತ್ತಿ ವರ್ಸಸ್ ಜಾರಕಿಹೊಳಿ ಡಿಸಿಸಿ ಸಮರ
ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಕಳೆದ 25 ವರ್ಷಗಳಿಂದ ಬಿಗಿಹಿಡಿತ ಹೊಂದಿದ್ದ ಕತ್ತಿ ಕುಟುಂಬಕ್ಕೆ ಆಘಾತ ನೀಡಿರುವ ಜಾರಕಿಹೊಳಿ ಕುಟುಂಬ ಮೇಲುಗೈ ಸಾಧಿಸಿದೆ. ಕಳೆದ ಮೂರು ದಶಕಗಳಿಂದ ಕತ್ತಿ ಕುಟುಂಬ ಬಿಡಿಸಿಸಿ ಬ್ಯಾಂಕಿನಲ್ಲಿ ಅಧಿಪತ್ಯ ಸಾಧಿಸಿತ್ತು.
4.ನಟ ಉಮೇಶ್‌ಗೆ ಚಿಕಿತ್ಸೆ ವೇಳೆ ನಾಲ್ಕನೇ ಹಂತದ ಕ್ಯಾನ್ಸರ್ ಪತ್ತೆ, ಚೇತರಿಕೆ ಭರವಸೆ
ಹಿರಿಯ ನಟ ಎಂ.ಎಸ್. ಉಮೇಶ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇತ್ತೀಚೆಗೆ ಉಮೇಶ್ ಅವರು ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು, ಅವರ ಕಾಲು ಹಾಗೂ ಭುಜದ ಭಾಗಗಳ ಮೂಳೆಗೆ ಪೆಟ್ಟಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿದಾಗ ಕ್ಯಾನ್ಸರ್ ಇರುವುದು ತಿಳಿದುಬಂದಿದೆ.
5.ಸಂಪುಟ ಪುನಾರಚನೆಯೂ ಇಲ್ಲ, ಅಧಿಕಾರ ಹಂಚಿಕೆಯೂ ಇಲ್ಲ: ಡಿ.ಕೆ.ಶಿವಕುಮಾರ್
ರಾಜ್ಯದಲ್ಲಿ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಹಾಗೂ ಅಧಿಕಾರ ಹಂಚಿಕೆ ಯಾವುದೂ ಇಲ್ಲ. ಇಂಥ ಯಾವುದೇ ಚರ್ಚೆಯೂ ನಡೆದಿಲ್ಲ. ಚರ್ಚೆ ನಡೆದಿದೆ ಎಂಬುದು ಗಾಳಿ ಸುದ್ದಿಯಷ್ಟೆ. ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಹಾಗೂ ಅಧಿಕಾರ ಹಸ್ತಾಂತರ ವಿಚಾರ ತೀವ್ರ ಚರ್ಚೆಯಾಗುತ್ತಿರುವ ಈ ಹಂತದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಎರಡೂ ಸಾಧ್ಯತೆಗಳನ್ನು ಅಲ್ಲಗಳೆಯುವ ಹೇಳಿಕೆಯನ್ನು ಶನಿವಾರ ನೀಡಿದರು.
6.ಸಿಎಂ ಹುದ್ದೆ ಏರುವ ಆತುರ ಇಲ್ಲ.. ಭಗವಂತ ಬಯಸಿದಾಗ ಚಾನ್ಸ್: ಡಿ.ಕೆ.ಶಿವಕುಮಾರ್
ನಾನು ಮುಖ್ಯಮಂತ್ರಿಯಾಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿಲ್ಲ. ನನಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಆತುರವೂ ಇಲ್ಲ. ಆದರೆ, ಕೆಲ ಮಾಧ್ಯಮಗಳು ಹೇಳಿಕೆ ತಿರುಚಿ ವಿವಾದ ಸೃಷ್ಟಿಸುತ್ತಿವೆ. ಇದು ಮುಂದುವರೆದರೆ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
7.ಸಿಎಂ ಆಗಲು ‘ಕಪ್ಪ’ ಅಗತ್ಯ ಅಂದಿದ್ರು ಬಿ.ಎಸ್.ಯಡಿಯೂರಪ್ಪ: ಸಚಿವ ಪ್ರಿಯಾಂಕ್ ಖರ್ಗೆ
‘ದಿವಂಗತ ಅನಂತಕುಮಾರ್ ಅವರ ಕಿವಿಯಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಕಪ್ಪ ಕೊಡಬೇಕಾಗುತ್ತದೆ. ಸುಮ್ಮನೆ ಆಗಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದರು. ಅದರ ವಿಡಿಯೋ ಸಾಕ್ಷ್ಯ ಕೂಡ ಇದೆ. ಬಿಜೆಪಿಯವರು ಮೊದಲು ಅದರ ಬಗ್ಗೆ ಉತ್ತರ ಕೊಡಲಿ’ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
8.ಸಂಸದ ಸುಧಾಕರ್ ಮೇಲೆ ಹಲ್ಲೆ: ನಜೀರ್ ಅಹಮ್ಮದ್‌ಗೆ ಕೋರ್ಟ್ ಸಮನ್ಸ್, ಏನಿದು ಪ್ರಕರಣ?
ವಿಧಾನಸೌಧದಲ್ಲಿ ಸಂಸದ ಡಾ.ಕೆ.ಸುಧಾಕರ್ ಮೇಲೆ ಹಲ್ಲೆ ಆರೋಪದ ಪ್ರಕರಣ ಸಂಬಂಧ ಆರೋಪಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್ ಅವರಿಗೆ ಅ.27ರಂದು ವಿಚಾರಣೆಗೆ ಹಾಜರಾಗುವಂತೆ ನಗರದ 42ನೇ ಎಸಿಜೆಎಂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
9. ₹ 150 ಕೋಟಿ ದೋಚಿದ್ದ ಸೈಬರ್ ವಂಚಕ ದಾವಣಗೆರೆಯಲ್ಲಿ ಸೆರೆ
ಆನ್‌ಲೈನ್ ವಂಚನೆ ಮೂಲಕ ದೇಶಾದ್ಯಂತ ಹಲವರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಸುಮಾರು 150 ಕೋಟಿ ರು.ಎಗರಿಸಿದ್ದ ಅಂತಾರಾಜ್ಯ ಸೈಬರ್ ವಂಚಕನನ್ನು ದಾವಣಗೆರೆಯ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆ ಬೇಲೂರಿನ ಶಾಂತಿನಗರ ನಿವಾಸಿ, ಸಿಸಿ ಕ್ಯಾಮರಾ ಕೆಲಸಗಾರ ಸಯ್ಯದ್ ಅರ್ಫಾತ್ (28) ಬಂಧಿತ ಆರೋಪಿ.
10. ವಿಜಯಪುರದಲ್ಲಿ ಮತ್ತೆ ಕಂಪನಿಸಿದ ಭೂಮಿ 2.6 ರಷ್ಟು ತೀವ್ರತೆ ದಾಖಲು!
ವಿಜಯಪುರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ 2.6 ತೀವ್ರತೆಯ ಭೂಕಂಪನ ಸಂಭವಿಸಿದೆ. ಕಳೆದ ಮೂರು ವರ್ಷಗಳಿಂದ ಈ ರೀತಿಯ ಕಂಪನಗಳು ಮರುಕಳಿಸುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಘಟನೆಯನ್ನು ಜಿಲ್ಲಾಡಳಿತ ಅಧಿಕೃತವಾಗಿ ದೃಢಪಡಿಸಿದೆ.
