ಸಚಿವ ಪ್ರಿಯಾಂಕ್ ಖರ್ಗೆಯವರು, ಯಡಿಯೂರಪ್ಪನವರ 'ಕಪ್ಪ' ಹೇಳಿಕೆಯ ವಿಡಿಯೋ ಸಾಕ್ಷ್ಯದ ಬಗ್ಗೆ ಉತ್ತರಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದಾರೆ. ಬಿ.ವೈ.ವಿಜಯೇಂದ್ರ ಹಾಗೂ ಆರ್.ಅಶೋಕ್ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದು, ಬಿಜೆಪಿಯವರು ಪುರಾವೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು (ಅ.12): ‘ದಿವಂಗತ ಅನಂತಕುಮಾರ್ ಅವರ ಕಿವಿಯಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಕಪ್ಪ ಕೊಡಬೇಕಾಗುತ್ತದೆ. ಸುಮ್ಮನೆ ಆಗಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದರು. ಅದರ ವಿಡಿಯೋ ಸಾಕ್ಷ್ಯ ಕೂಡ ಇದೆ. ಬಿಜೆಪಿಯವರು ಮೊದಲು ಅದರ ಬಗ್ಗೆ ಉತ್ತರ ಕೊಡಲಿ’ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ವೀರೇಂದ್ರ ಪಪ್ಪಿ ಅವರು ಸಚಿವ ಸ್ಥಾನ ಪಡೆಯಲು ಅಕ್ರಮ ಹಣ ಗಳಿಕೆ ಮಾಡಿದ್ದರು ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ‘ಬಿ.ವೈ.ವಿಜಯೇಂದ್ರ ಅವರು ಅಮಿತ್ ಶಾ ಅವರಿಗೆ ಬಿಟ್ ಕಾಯಿನ್ ನೀಡಿದ್ದಾರೆ. ಹೀಗಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆದಿದ್ದಾರೆ. ಆರ್.ಅಶೋಕ್ ಅವರು ಪ್ರತಿಪಕ್ಷ ನಾಯಕರಾಗಿ ಮುಂದುವರೆಯಲು ನೂರು ಕೋಟಿ ನೀಡಿದ್ದಾರೆ ಎಂದು ನಾನು ಹೇಳುತ್ತೇನೆ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯುವುದು ಬಿಟ್ಟು ಪುರಾವೆ ನೀಡಲಿ’ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಸಂಸದ ಸುಧಾಕರ್ ಮೇಲೆ ಹಲ್ಲೆ: ನಜೀರ್ ಅಹಮ್ಮದ್‌ಗೆ ಕೋರ್ಟ್ ಸಮನ್ಸ್, ಏನಿದು ಪ್ರಕರಣ?
ವಿಜಯೇಂದ್ರ ಅವರು ದುಬೈಗೆ ಹೋಗಿ ಬರುತ್ತಿದ್ದ ಬಗ್ಗೆ ಯತ್ನಾಳ್ ಅವರು ಹೇಳಿದ್ದರು. ನಾವು ಹೇಳಿಲ್ಲ. ವೀರೇಂದ್ರ ಪಪ್ಪಿ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿಯೇ ಇದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ದಾಖಲೆ ತರಿಸಿ ಆರೋಪ ಸಾಬೀತುಪಡಿಸಿ’ ಎಂದು ಸವಾಲು ಹಾಕಿದರು.
ಸಿಎಂ ಡಿನ್ನರ್‌ಗೆ ಹೋಗಿ ನಾಟಿ ಕೋಳಿ ತಿಂದು ಬರುತ್ತೇನೆ: ಪ್ರಿಯಾಂಕ್ ಖರ್ಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೋಜನಕೂಟಕ್ಕೆ ಕರೆದಿದ್ದಾರೆ. ಒಳ್ಳೆಯ ನಾಟಿ ಕೋಳಿ ಊಟ ಮಾಡಿಸುತ್ತಾರೆ. ಸೋಮವಾರ ಆದರೂ ಪರವಾಗಿಲ್ಲ, ನಾಟಿ ಕೋಳಿ ಮಾಡಿಸಿದ್ದರೆ ಊಟ ಮಾಡುತ್ತೇನೆ. ಇಲ್ಲದಿದ್ದರೆ ಸೊಪ್ಪು ಸಾರು ಊಟವಾದರೂ ಸರಿ. ನಮ್ಮ ಮುಖ್ಯಮಂತ್ರಿ ಊಟಕ್ಕೂ ಕರೆಯಬಾರದು ಎಂದರೆ ಹೇಗೆ? ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.-
ಹಾದಿ ಬೀದಿಯಲ್ಲಿ ಮಾತನಾಡಿದರೆ ಕ್ರಮ: ಪ್ರಿಯಾಂಕ್
ಹಾದಿ ಬೀದಿಯಲ್ಲಿ ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ಬಗ್ಗೆ ಮಾತಾಡಿದರೆ ಮಾನ್ಯತೆ ಇಲ್ಲ. ಬಹಿರಂಗವಾಗಿ ಮಾತನಾಡುವವರಿಗೆ ಈಗಾಗಲೇ ನೋಟೀಸ್ ಕೊಟ್ಟಿದೆ. ಇನ್ನೂ ಕೊಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
