ತುಮಕೂರು[ಜ.22]: ಸಿದ್ಧಗಂಗಾ ಶ್ರೀಗಳಿಗೆ ಮೊದಲ ಬಾರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಸುಮಾರು 6 ವರ್ಷಗಳ ಕೆಳಗೆ. ಆಗಲೂ ಜ್ವರದಿಂದ ಬಳಲುತ್ತಿದ್ದ ಶ್ರೀಗಳನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಗಳು ಆಸ್ಪತ್ರೆ ಸೇರಿದ ವಿಷಯ ತಿಳಿಯುತ್ತಿದ್ದಂತೆ ಇಡೀ ಭಕ್ತ ವೃಂದ ಆತಂಕಗೊಂಡಿತ್ತು. ಆದರೆ ಒಂದೇ ದಿನದಲ್ಲಿ ಶ್ರೀಗಳು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮಠಕ್ಕೆ ಬಂದು ಎಂದಿನಂತೆ ದರ್ಶನ ನೀಡಿದಾಗ ಭಕ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಶ್ರೀಗಳು ಐಕ್ಯರಾಗುವ ಗದ್ದುಗೆ ವಿಶೇಷತೆ ಏನು..?

ಆದರೆ ಶ್ರೀಗಳಿಗೆ ವಯೋ ಸಹಜ ಯಕೃತ್ ಮತ್ತು ಪಿತ್ತಕೋಶದ ಸಮಸ್ಯೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 2 ವರ್ಷಗಳ ಕೆಳಗೆ. ಆಗ ಶ್ರೀಗಳಿಗೆ 109 ವರ್ಷ ವಯಸ್ಸು. ಒಮ್ಮೆ ಇದ್ದಕ್ಕಿದ್ದಂತೆ ಯಕೃತ್ ಮತ್ತು ಪಿತ್ತಕೋಶದಲ್ಲಿ ಸೋಂಕು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಕೇವಲ 3 ದಿವಸಗಳ ಕಾಲ ಇದ್ದು ಡಿಸ್‌ಚಾರ್ಜ್ ಹೊಂದಿ ಮಠಕ್ಕೆ ಬಂದರು. ಅದಾದ ಬಳಿಕ 6 ತಿಂಗಳಿಗೊಮ್ಮೆ ಇಂತಹದ್ದೇ ಸಮಸ್ಯೆ ಕಾಡಿಸುತ್ತಿತ್ತು. ಆಗ ವೈದ್ಯರು ಅವರಿಗೆ ಸ್ಟೆಂಟ್ ಅಳವಡಿಸುತ್ತಿದ್ದರು. ಒಮ್ಮೆ ಸ್ಟೆಂಟ್ ಅಳವಡಿಸಿದರೆ 6 ತಿಂಗಳ ಕಾಲ ಶ್ರೀಗಳಿಗೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ 6 ತಿಂಗಳ ಬಳಿಕ ಅವರಿಗೆ ಮತ್ತೆ ಸೋಂಕು ಕಾಣಿಸಿಕೊಳ್ಳು ತ್ತಿತ್ತು. ಹೀಗೆ ಪ್ರತಿ ಬಾರಿ ಸೋಂಕು ಕಾಣಿಸಿಕೊಂಡಾಗಲೂ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು.

ಹೀಗೆ ಐದಾರು ಬಾರಿ ಶ್ರೀಗಳನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಐದಾರು ಬಾರಿ ಆಸ್ಪತ್ರೆಯ ಭೇಟಿಯಲ್ಲಿ ಶ್ರೀಗಳಿಗೆ 11 ಸ್ಟೆಂಟ್‌ಗಳನ್ನು ಅಳವಡಿಸಲಾಗಿತ್ತು. 11ನೇ ಸ್ಟೆಂಟ್ ಅನ್ನು ಅಳವಡಿಸಿದಾಗ ಇನ್ನು ಸ್ಟೆಂಟ್ ಅಳವಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು. ಎಂದಿನಂತೆ ಶ್ರೀಗಳು ಮಠ, ಗದ್ದುಗೆ, ಆಡಳಿತ ಕಚೇರಿ ನೋಡಿಕೊಂಡು ಆರಾಮಾಗಿಯೇ ಇದ್ದರು. ಆದರೆ ಡಿಸೆಂಬರ್ 6 ರಂದು ಮತ್ತೆ ಅವರಿಗೆ ಜ್ವರ ಕಾಣಿಸಿಕೊಂಡಿತು. ಕೂಡಲೇ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಆಗಮಿಸಿ ತಪಾಸಣೆ ನಡೆಸಿದಾಗ ಅವರಿಗೆ ಮತ್ತೆ ಸೋಂಕು ಆಗಿರುವುದು ದೃಢಪಟ್ಟಿತ್ತು.

'ಕಾಯಕಯೋಗಿ'ಯ 15 ನುಡಿಮುತ್ತುಗಳು: ಪಾಲಿಸಿದರೆ ಕೈಲಾಸವೇ ನಮ್ಮದು

ಶ್ರೀಗಳಿಗೆ ಮತ್ತೆ ಸ್ಟೆಂಟ್ ಅಳವಡಿಸಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಶ್ರೀಮಠದವರು ಆತಂಕಕ್ಕೆ ಒಳಗಾದರು. ಕೂಡಲೇ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆ ವೈದ್ಯ ಡಾ.ಪರಮೇಶ್ ಅವರು ಶ್ರೀಗಳ ಆರೋಗ್ಯದ ವರದಿ ತೆಗೆದುಕೊಂಡು ಚೆನ್ನೈನ ರೆಲಾ ಆಸ್ಪತ್ರೆಗೆ ಹೋದರು. ಶ್ರೀಗಳ ಆರೋಗ್ಯದ ರಿಪೋರ್ಟ್ ನೋಡಿದ ರೆಲಾ ಆಸ್ಪತ್ರೆ ವೈದ್ಯ ಮೊಹಮದ್ ರೆಲಾ ಅವರು ಶ್ರೀಗಳಿಗೆ ಬೈಪಾಸ್ ಮಾದರಿಯ ಶಸ್ತ್ರ ಚಿಕಿತ್ಸೆ ನಡೆಸಬಹುದು ಎಂಬ ತೀರ್ಮಾನಕ್ಕೆ ಬಂದರು. ಕೂಡಲೇ ಚೆನ್ನೈನಿಂದ 6 ಮಂದಿ ತಜ್ಞ ವೈದ್ಯರನ್ನು ಸಿದ್ಧಗಂಗಾ ಮಠಕ್ಕೆ ಕಳುಹಿಸಿಕೊಡಲಾಯಿತು. ಅಲ್ಲಿನ ತಜ್ಞ ವೈದ್ಯರು ಶ್ರೀಗಳನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದರೆ ದೊಡ್ಡ ಸಮಸ್ಯೆಯಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರಿಂದ ಡಿಸೆಂಬರ್ 7 ರಂದು ಏರ್ ಆ್ಯಂಬುಲೆನ್ಸ್ ಮೂಲಕ ಸಿದ್ಧಗಂಗಾ ಶ್ರೀಗಳನ್ನು ಚೆನ್ನೈನ ರೆಲಾ ಆಸ್ಪತ್ರೆಗೆ ಕಳುಹಿಸಲಾಯಿತು.

ಸ್ವಾಮೀಜಿ ನಿಧನದ ವಾರ್ತೆ 2 ಗಂಟೆ ತಡವಾಗಿ ಪ್ರಕಟವಾಗಿದ್ದೇಕೆ?

ಇದೊಂದು ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯಾಗಿತ್ತು. ಜ್ವರ ಹಾಗೂ ಸೋಂಕು ನಿವಾರಣೆಗೆ ಔಷಧಿ ನೀಡಲಾಯಿತು. ಜ್ವರ ಹಾಗೂ ಸೋಂಕು ನಿವಾರಣೆಯಾದ ಕೂಡಲೇ ಶ್ರೀಗಳಿಗೆ ಮೊಹಮದ್ ರೆಲಾ ಅವರು ಬೈಪಾಸ್ ಮಾದರಿಯ ಶಸ್ತ್ರ ಚಿಕಿತ್ಸೆಯನ್ನು ಡಿ.8ರಂದು ಯಶಸ್ವಿಯಾಗಿ ನೆರವೇರಿಸಿದರು. ಶಸ್ತ್ರ ಚಿಕಿತ್ಸೆ ಬಳಿಕ ಸುಮಾರು 13 ದಿವಸಗಳ ಕಾಲ ಶ್ರೀಗಳು ಆಸ್ಪತ್ರೆಯಲ್ಲೇ ಇದ್ದರು. ಮೊದಲು ಐಸಿಯುನಲ್ಲೇ ಇದ್ದರು. ಬಳಿಕ ಸ್ಪೆಷಲ್ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಪುನಃ ಸೋಂಕು ತಾಗಿದ್ದರಿಂದ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಈ ಮಧ್ಯೆ ಮಠಕ್ಕೆ ಕರೆದುಕೊಂಡು ಹೋಗುವಂತೆ ಶ್ರೀಗಳು ಒತ್ತಾಯಿಸಿದರು. ಮತ್ತೆ ವೈದ್ಯರು ಶ್ರೀಗಳ ದೇಹ ಸ್ಥಿತಿಯನ್ನು ಅವಲೋಕಿಸಿ ಶ್ರೀಗಳನ್ನು ಡಿ.20ರಂದು ಡಿಸ್‌ಚಾರ್ಜ್ ಮಾಡಿದರು. ಮತ್ತೆ ಏರ್ ಆ್ಯಂಬುಲೆನ್ಸ್ ಮೂಲಕ ಶ್ರೀಗಳು ಮಠಕ್ಕೆ ಆಗಮಿಸಿದರು.

ಸಂತ, ಶ್ರೀ ಶ್ರೀ ಶ್ರೀ ತುಮಕೂರು ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಗುರು ಕೈವಲ್ಯ

15 ದಿವಸ ಶ್ರೀಗಳಿಗೆ ವಿಶ್ರಾಂತಿ ಬೇಕಿರುವುದರಿಂದ ಭಕ್ತರಿಗೆ ದರ್ಶನ ಕೊಡಲು ಸಾಧ್ಯವಿಲ್ಲ ಎಂದು ಮಠದವರು ಪ್ರಕಟಣೆ ಹೊರಡಿಸಿದರು. ಶ್ರೀಗಳು ಮಲಗಿದಲ್ಲೇ ಮಂತ್ರಗಳನ್ನು ಹೇಳಿಕೊಳ್ಳುತ್ತಿದ್ದರು. ಇಷ್ಟಲಿಂಗ ಪೂಜೆಯನ್ನು ಸರಳವಾಗಿ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅವರ ಆರೋಗ್ಯ ಬಿಗಡಾಯಿಸಿತು. ಹಳೆಮಠದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿತ್ತು. ಈ ಎಲ್ಲಾ ಅಂಶಗಳನ್ನು ಮನಗಂಡು ಅವರನ್ನು ಜ.3ರಂದು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು.

ಪ್ರೊಟೀನ್ ಅಂಶ ಕುಸಿತ, ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದರಿಂದ ಮತ್ತಷ್ಟು ಸಮಸ್ಯೆಯಾಯಿತು. ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬರುತ್ತಿತ್ತಾದರೂ, ಕೂಡಲೇ ವಿಷಮ ಸ್ಥಿತಿ ಎದುರಾಗುತ್ತಿತ್ತು. ಈ ನಡುವೆ, ಶ್ರೀಗಳ ಕೋರಿಕೆಯಂತೆ ಜ.16ರಂದು ಮಠಕ್ಕೆ ಕರೆತರಲಾಯಿತು. ಮಠದಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಶ್ರೀಗಳು ಕೃತಕ ಉಸಿರಾಟ ವ್ಯವಸ್ಥೆಯ ಸಹಾಯವಿಲ್ಲದೇ 4-5 ತಾಸು ಉಸಿರಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಆದರೆ ಆರೋಗ್ಯ ಮತ್ತೆ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಸೋಮವಾರ ಅವರು ಕೊನೆಯುಸಿರೆಳೆದರು.

ಶ್ವಾಸಕೋಶದಲ್ಲಿ ನೀರು

ಪಿತ್ತಕೋಶ ಮತ್ತು ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆದ ಬಳಿಕ ಅವರ ಹಳೆ ಸಮಸ್ಯೆ ನಿವಾರಣೆಯಾಯಿತು. ಇದರ ಜೊತೆಗೆ ಅವರಿಗೆ ಅಳವಡಿಸಿದ್ದ ಸ್ಟೆಂಟ್ ಗಳನ್ನು ಸಹ ತೆಗೆಯಲಾಯಿತು. ಇನ್ನೇನು ಶ್ರೀಗಳು ಒಂದು ವಾರದಲ್ಲಿ ಚೇತರಿಸಿಕೊಂಡು ನಮಗೆಲ್ಲಾ ದರ್ಶನ ನೀಡುತ್ತಾರೆಂಬ ನಿರೀಕ್ಷೆಯಲ್ಲಿ ಭಕ್ತವೃಂದ ಇತ್ತು. ಆದರೆ ಶ್ರೀಗಳಿಗೆ ಮತ್ತೆ ಜ್ವರ ಕಾಣಿಸಿಕೊಂಡಿತು. ಮತ್ತೆ ಸಿದ್ಧಗಂಗಾ ಹಳೆ ಮಠಕ್ಕೆ ವೈದ್ಯರು ಧಾವಿಸಿದ್ದರು.

ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು-ಮೆಲುಕು

ಆದರೆ ಯಕೃತ್ ಹಾಗೂ ಪಿತ್ತಕೋಶದಲ್ಲಿ ಸೋಂಕು ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿತು. ಅವರಿಗೆ ಜೋರಾಗಿ ಕೆಮ್ಮಲು ಆಗದೆ ದೇಹದೊಳಗೆ ಕಫ ಉತ್ಪತ್ತಿಯಾಯಿತು. ಕೂಡಲೇ ಅವರನ್ನು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಯಿತು. ಆದರೆ ಶ್ರೀಗಳಿಗೆ ವ್ಯಾಪಕವಾಗಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದ್ದರಿಂದ ಶ್ವಾಸಕೋಶದ ಎರಡೂ ಬದಿಯಲ್ಲಿ ನೀರು ತುಂಬಿಕೊಳ್ಳಲು ಶುರುವಾಯಿತು. ನಿಜಕ್ಕೂ ವೈದ್ಯರಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತು. ಕೂಡಲೇ ರೆಲಾ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಆರಂಭಿಸಿದರು.

ಪ್ರತಿ ಬಾರಿ ನೀರು ತುಂಬಿಕೊಂಡಾಗ ಶ್ರೀಗಳ ದೇಹದಲ್ಲಿನ ನೀರನ್ನು ಹೊರ ಹಾಕಲಾಗುತ್ತಿತ್ತು. ಈ ಮಧ್ಯೆ ಅವರಿಗೆ ಪ್ರೊಟೀನ್ ಅಂಶ ಕೂಡ ಗಣನೀಯವಾಗಿ ಕುಸಿಯಿತು. ಒಂದು ಕಡೆ ಶ್ವಾಸಕೋಶದ ಸೋಂಕು, ಇನ್ನೊಂದೆಡೆ ಪ್ರೊಟೀನ್ ಅಂಶ ಕಡಿಮೆಯಾಗಿದ್ದರಿಂದ ಶ್ರೀಗಳಿಗೆ ಚಿಕಿತ್ಸೆ ನೀಡುವುದು ಕಷ್ಟ ಸಾಧ್ಯವಾಯಿತು. ಆದರೆ ಪ್ರೊಟೀನ್ ಅಂಶ ಒಂದು ಬಾರಿ ಏರಿದರೆ ಮತ್ತೆ ಗಣನೀಯವಾಗಿ ಕುಸಿತ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೇ ಶ್ರೀಗಳಿಗೆ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು ನಿಲ್ಲಲೇ ಇಲ್ಲ. ಪ್ರತಿ ಬಾರಿ ಅವರಿಗೆ ನೀರು ತುಂಬಿಕೊಂಡಾಗ ಅದನ್ನು ತೆಗೆಯಬೇಕಾಗುತ್ತಿತ್ತು.

ಎಲ್ಲವೂ ಶಿವಲೀಲೆ! ಶಿವಣ್ಣರಾಗಿದ್ದವರು ಸಿದ್ಧಗಂಗಾ ಶ್ರೀಗಳಾಗಿದ್ದೇ ಪವಾಡ

ಈ ಮಧ್ಯೆ ಬೆಂಗಳೂರಿನ ಜಯದೇವ ಆಸ್ಪತ್ರೆ ವೈದ್ಯರ ತಜ್ಞ ತಂಡ ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ಪರಿಶೀಲಿಸಿತು. ಅಲ್ಲದೇ ಚಿಕಿತ್ಸೆಯಲ್ಲಿ ಕೆಲ ಬದಲಾವಣೆಯನ್ನು ಸೂಚಿಸಿತು. ಈ ಮಧ್ಯೆ ಶ್ರೀಗಳ ಆರೋಗ್ಯ ಮತ್ತೆ ಬಿಗಡಾಯಿಸಿತು. ಶ್ವಾಸಕೋಶದಲ್ಲಷ್ಟೆ ತುಂಬಿಕೊಳ್ಳುತ್ತಿದ್ದ ನೀರು ಹೊಟ್ಟೆಗೂ ವ್ಯಾಪಿಸಿತು. ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಇದ್ದುದ್ದರಿಂದ ವೈದ್ಯರು ಕೂಡ ಕೈಚೆಲ್ಲುವಂತಾಯಿತು.

13 ದಿನ ಚೆನ್ನೈನ ರೆಲಾ ಆಸ್ಪತ್ರೆಯಲ್ಲಿ ಸ್ವಾಮೀಜಿಗಳು ಚಿಕಿತ್ಸೆ ಪಡೆದ ಅವಧಿ| 11 ದಿನ ಚೆನ್ನೈನಿಂದ ವಾಪಸಾದ ಬಳಿಕ ಮಠದಲ್ಲಿ ಶ್ರೀಗಳಿಗೆ ಚಿಕಿತ್ಸೆ|13 ದಿನ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಶ್ರೀಗಳು