'ಕಾಯಕಯೋಗಿ'ಯ 15 ನುಡಿಮುತ್ತುಗಳು: ಪಾಲಿಸಿದರೆ ಕೈಲಾಸವೇ ನಮ್ಮದು
ತ್ರಿವಿಧ ದಾಸೋಹಿ, ಬಸವಣ್ಣನವರ ತತ್ವ 'ಕಾಯಕವೇ ಕೈಲಾಸ'ವನ್ನು ಚಾಚೂ ತಪ್ಪದೇ ಪಾಲಿಸಿದ ಶತಾಯುಷಿ, ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಜೀವನ ಇತರರಿಗೆ ಸ್ಪೂರ್ತಿ ನೀಡುವಂತಹುದ್ದು. ಅತ್ಯಂತ ಸರಳ ಹಾಗೂ ಸಾರ್ಥಕ ಜೀವನ ನಡೆಸಿ ಹಲವರಿಗೆ ಭವಿಷ್ಯ ಕಲ್ಪಿಸಿದ ನಡೆದಾಡುವ ದೇವರ ಕೆಲ ನುಡಿ ಮುತ್ತುಗಳು. 'ಜನ ಸೇವೆಯೇ ಜನಾರ್ಧನ ಸೇವೆ' ಎಂದು ನಿಸ್ವಾರ್ಥ ಬದುಕು ಬಾಳಿದ ಶ್ರೀಗಳ ಈ ನುಡಿಮುತ್ತುಗಳು ಎಲ್ಲರಿಗೂ ದಾರಿದೀಪ...
- ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ಪ್ರೀತಿಯಿಂದಿರಬೇಕು, ಸರಳವಾಗಿರಬೇಕು, ಮಧುರವಾಗಿರಬೇಕು, ಮೃದುವಾಗಿರಬೇಕು, ತಪಸ್ಸಿನಂತಿರಬೇಕು.
ಮಾನವ ಪ್ರಜ್ಞೆ ಜಾಗೃತವಾಗದ ಹೊರತು ಇಂದಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.
ಸಹಜ ಪ್ರೀತಿ ಕಲ್ಲನ್ನೂ ಕರಗಿಸುತ್ತದೆ; ಕಟುಕನನ್ನು ಕರುಣಾಮಯಿಯನ್ನಾಗಿಸುತ್ತದೆ.
ಕ್ರಮಬದ್ಧ ಜೀವನ ಪ್ರಗತಿಯ ಮೂಲ, ಅಕ್ರಮ ಜೀವನ ವಿನಾಶಕ್ಕೆ ಹಾದಿ.
‘ಸೇವೆ’ ಪ್ರಚಾರದ ಸರಕಲ್ಲ; ಅದು ಗುಪ್ತಶಕ್ತಿ; ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಸಂಜೀವಿನಿ.
ಸ್ತ್ರೀಯರು ಸಂಸ್ಕಾರವಂತರಾಗಿ, ಸಮಾಜದ ಕಣ್ಣಾದರೆ ಧರ್ಮ ತತ್ವಗಳು ಉಳಿಯುತ್ತದೆ.
ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ.
ದೃಷ್ಟಿ ಪವಿತ್ರವಾಗಿರಲಿ, ಭಾವ ಶುದ್ಧವಾಗಿರಲಿ, ಬದುಕು ಭಕ್ತಿಯಿಂದೊಡಗೂಡಿರಲಿ.
ಸಮಾಜ ಪರಿಶುದ್ಧವಾಗಬೇಕೆಂದರೆ ಜನನಾಯಕರು ನೀತಿವಂತರಾಬೇಕು.
ನಮ್ಮ ಪೂರ್ವಿಕರಿಗೆ ಮಾನವೀಯತೆಯೇ ಜೀವನವಾಗಿತ್ತು. ತಮಗಾಗಿ ದುಡಿದ ಎತ್ತು, ಹೋರಿ, ಹಸುಗಳು ಸತ್ತಾಗ ಸಮಾಧಿ ಮಾಡುತ್ತಿದ್ದರೇ ಹೊರತು, ಕಟುಕರಿಗೆ ಮಾರುತ್ತಿರಲಿಲ್ಲ.
ಶಿಕ್ಷಣ ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು. ಬೆವರು ಸುರಿಸದೇ, ಯಾವುದಾದರೂ ಒಂದು ರೀತಿಯ ಕಾಯಕ ಮಾಡದೆ ಫಲ ಅನುಭವಿಸಲು ಯಾರಿಗೂ ಹಕ್ಕಿಲ್ಲ.
ಪವಿತ್ರವಾದ ಮನಸ್ಸನ್ನು ಜೋಪಾನ ಮಾಡಬೇಕು.
ಮದುವೆ ಸಮಾರಂಭಗಳು ಸರಳವಾಗಿರಬೇಕು. ಪ್ರೀತಿ ಪ್ರೇಮಗಳ ಆತ್ಮೀಯ ಮಂಗಳ ಕಾರ್ಯಕ್ರಮಗಳಾಗಬೇಕು. ಉಭಯ ಕುಟುಂಬಗಳ ಬೆಳಕಿನ ಹಬ್ಬವಾಗಬೇಕು.
ದುಡಿಮೆ ಸತ್ಯಶುದ್ಧವಾಗಿದ್ದು, ಪರರಿಗೆ ಉಪಕಾರವಾಗುವಂತಿರಬೇಕು.
ಗ್ರಂಥದಲ್ಲಿ, ಗುಡಿಯಲ್ಲಿ ಧರ್ಮವಿಲ್ಲ. ಬದುಕಿನಲ್ಲಿದೆ, ಹೃದಯವಂತಿಕೆಯಲ್ಲಿದೆ.