600 ಕಿ.ಮೀ. ರಸ್ತೆಗೆ 2 ಸಾವಿರ ಗುಂಡಿ! ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಗುಂಡಿಗಳ ರೌದ್ರಾವತಾರ ದರ್ಶನ ಏಣಿಕೆಗೆ ಸಿಗದ ಗುಂಡಿ ಇನ್ನೂ ಹೆಚ್ಚು
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಅ.31) : ಏಷ್ಯಾದ ಅತಿ ದೊಡ್ಡ ಕೈಗಾರಿಕೆ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ದಾಸರಹಳ್ಳಿ ವಲಯದ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು. ಬಿಬಿಎಂಪಿಯ ಎಂಟು ವಲಯದ ಪೈಕಿ ದಾಸರಹಳ್ಳಿ ವಲಯ ಅತಿ ಚಿಕ್ಕ ಹಾಗೂ ಒಂದೇ ಒಂದು ವಿಧಾನಸಭಾ ಕ್ಷೇತ್ರವಿದೆ. ಮರು ವಿಂಗಡಣೆ ಬಳಿಕ ವಾರ್ಡ್‌ಗಳ ಸಂಖ್ಯೆ 8 ರಿಂದ 12ಕ್ಕೆ ಏರಿಕೆಯಾಗಿದೆ.
ಬೆಂಗ್ಳೂರಿನ ಎಲ್ಲ ಗುಂಡಿ ಮುಚ್ಚಲು ನ.5 ಗಡುವು..!
ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿ 16 ಸಾವಿರ ಕೈಗಾರಿಕೆಗಳಿರುವ ಪೀಣ್ಯ ಕೈಗಾರಿಕಾ ಪ್ರದೇಶ, ರಾಷ್ಟ್ರೀಯ ಹೆದ್ದಾರಿ 4 (ತುಮಕೂರು ರಸ್ತೆ), 25.22 ಕಿ.ಮೀ ಉದ್ದದ ಆರ್ಟಿರಿಯಲ್ ರಸ್ತೆ, 15.99 ಕಿ.ಮೀ ಉದ್ದದ ಸಬ್ ಆರ್ಟಿರಿಯಲ್ ರಸ್ತೆ ಸೇರಿದಂತೆ 600 ಕಿ.ಮೀ ಉದ್ದದ ವಾರ್ಡ್ ಮಟ್ಟದ ರಸ್ತೆಗಳಿವೆ. ನಗರದಲ್ಲಿ ಸುರಿದ ಧಾರಾಕಾರ ಹಾಗೂ ವಾಡಿಕೆ ಪ್ರಮಾಣಕ್ಕಿಂತ ದ್ವಿಗುಣ ಪ್ರಮಾಣದ ಮಳೆ ಸುರಿದ ಪರಿಣಾಮ ದಾಸರಹಳ್ಳಿ ವಲಯದ ರಸ್ತೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳಿವೆ. ಬೈಕ್, ಆಟೋ ಇರಲಿ, ಭಾರಿ ವಾಹನಗಳೂ ಕಸರತ್ತು ಮಾಡಿ ಸಂಚಾರಿಸಬೇಕಾದ ಸ್ಥಿತಿ ಇದೆ.
ಬಿಬಿಎಂಪಿಯ ಮಾಹಿತಿ ಪ್ರಕಾರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳು ಎಣಿಕೆಗೆ ಸಿಕ್ಕಿವೆ. ಆದರೆ, ಎಣಿಕೆಗೆ ಸಿಗದ ಗುಂಡಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿವೆ ಎನ್ನಲಾಗುತ್ತದೆ.
ಪೀಣ್ಯ ಕೈಗಾರಿಕಾ ವಾರ್ಡ್‌ನಲ್ಲಿ ಹೆಚ್ಚು ಗುಂಡಿ:
ದಾಸರಹಳ್ಳಿ ವಲಯದ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್‌ನಲ್ಲಿ ಈವರೆಗೆ ಪತ್ತೆಯಾದ 499 ರಸ್ತೆ ಗುಂಡಿಗಳ ಪೈಕಿ 23 ಗುಂಡಿ ಮುಚ್ಚಿದ್ದು, ಇನ್ನೂ 476 ಗುಂಡಿ ಮುಚ್ಚುವುದು ಬಾಕಿ ಇದೆ. ಬಾಗಲಗುಂಟೆ ವಾರ್ಡ್‌ನಲ್ಲಿ 442 ಗುಂಡಿಗಳ ಪೈಕಿ 151 ಗುಂಡಿ ಮುಚ್ಚಿದ್ದು, ಇನ್ನೂ 291 ಮುಚ್ಚುವುದು ಬಾಕಿ ಇದೆ. ಚೊಕ್ಕಸಂದ್ರ 280 ಗುಂಡಿ ಮುಚ್ಚುವುದು ಬಾಕಿ ಇದೆ, ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 155, ಟಿ.ದಾಸರಹಳ್ಳಿಯಲ್ಲಿ 59, ಮಲ್ಲಸಂದ್ರವಾರ್ಡ್‌ನಲ್ಲಿ 20, ರಾಜಗೋಪಾಲ ನಗರದಲ್ಲಿ 19 ಹಾಗೂ ಹೆಗ್ಗನಹಳ್ಳಿ 17 ಗುಂಡಿ ಮುಚ್ಚುವುದು ಬಾಕಿ ಇದೆ. ವಿಶೇಷ ಎಂದರೆ ಚೊಕ್ಕಸಂದ್ರ ವಾರ್ಡ್‌ನಲ್ಲಿ ಈವರೆಗೆ ಒಂದೇ ಒಂದು ಗುಂಡಿ ಮುಚ್ಚಿಲ್ಲ ಎಂಬುದು ಬಿಬಿಎಂಪಿ ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ.
ಕಳಪೆ ಕಾಮಗಾರಿ ಕೈಗನ್ನಡಿ
ಕಳಪೆ ಕಾಮಗಾರಿ ದಾಸರಹಳ್ಳಿ ವಲಯದ ರಸ್ತೆಗಳು ಅತ್ಯುತ್ತಮ ಉದಾಹರಣೆ ಎನ್ನಬಹುದಾಗಿದೆ. ಕೆಲವು ದಿನಗಳ ಹಿಂದೆ ಡಾಂಬರೀಕರಣ ಮಾಡಿದ್ದ ಹೆಸರಘಟ್ಟಮುಖ್ಯರಸ್ತೆಯಿಂದ ತುಮಕೂರು ರಸ್ತೆಯಲ್ಲಿ ಮತ್ತೆ ಗುಂಡಿಗಳು ಕಾಣಿಸಿಕೊಂಡಿದೆ. ಡಾಂಬರೀಕರಣ ಮಾಡಿದರೂ ಅಲ್ಲಲ್ಲಿ ಮಳೆ ನೀರು ನಿಂತುಕೊಂಡಿದ್ದು, ಮತ್ತೆ ಗುಂಡಿ ಸೃಷ್ಟಿಆಗುವ ಸಾಧ್ಯತೆ ಕಂಡು ಬರುತ್ತಿದೆ.
ವಿಶೇಷ ಅನುದಾನ ಕೊರತೆಯ ನೆಪ?
ದಾಸರಹಳ್ಳಿ ವಲಯ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಸರ್ಕಾರ ಕಡೆಗಣಿಸಲಾಗಿದೆ. ಹೀಗಾಗಿ, ಈ ಕ್ಷೇತ್ರಕ್ಕೆ ವಿಶೇಷ ಅನುದಾನ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡಿಲ್ಲ. ಇದರಿಂದ ರಸ್ತೆ ಅಭಿವೃದ್ಧಿ ಸಾಧ್ಯವಾಗಿಲ್ಲ. ಇರುವ ಕನಿಷ್ಠ ಅನುದಾನದಲ್ಲಿ ರಸ್ತೆಗಳಿಗೆ ತೇಪೆ ಹಾಕುವ ಕೆಲಸ ಮಾಡಬೇಕಿದೆ. ಹಾಗಾಗಿ, ಹೆಚ್ಚಿನ ಗುಂಡಿಗಳು ಕಾಣಸಿಗುತ್ತವೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು: ಗಣ್ಯರು ಓಡಾಡುವ ರಸ್ತೆಗಳೇ ಅಧೋಗತಿ..!
ದಾಸರಹಳ್ಳಿ ವಲಯದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಇದೀಗ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದೆ. ತ್ವರಿತವಾಗಿ ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು.
-ರಂಗನಾಥ, ಮುಖ್ಯ ಎಂಜಿನಿಯರ್, (ಪ್ರಬಾರಿ) ದಾಸರಹಳ್ಳಿ ವಲಯ.
ಕ್ಷೇತ್ರವಾರು ರಸ್ತೆ ಗುಂಡಿ ವಿವರ
ವಿಧಾನಸಭಾ ಕ್ಷೇತ್ರ ಒಟ್ಟು ಗುಂಡಿ ಭರ್ತಿ ಬಾಕಿ
- ದಾಸರಹಳ್ಳಿ 1,918 601 1,317
- ಮುಖ್ಯರಸ್ತೆ 211 95 116
- ಒಟ್ಟು 2,129 696 1,433
ದಾಸರಹಳ್ಳಿ ವಲಯದ ಗುಂಡಿ ಮುಚ್ಚಲು ಮಾಡಿದ ವೆಚ್ಚ (ಕೋಟಿ ರು.)
ವರ್ಷ ಗುಂಡಿ ಭರ್ತಿಗೆ ವೆಚ್ಚ
- 2017-18 0.85
- 2018-19 0.00
- 2019-20 3.10
- 2020-21 0.00
- 2021-22 1.60
- ಒಟ್ಟು 5.55
