Asianet Suvarna News Asianet Suvarna News

ಬೆಂಗಳೂರು: ಗಣ್ಯರು ಓಡಾಡುವ ರಸ್ತೆಗಳೇ ಅಧೋಗತಿ..!

ರಾಜಭವನ, ವಿಧಾನಸೌಧ, ಹೈಕೋರ್ಟ್‌, ಎಂಜಿ ರಸ್ತೆಗಳಿರುವ ಪೂರ್ವ ವಲಯ, ಇದರಲ್ಲೇ ನೂರಾರು ಗುಂಡಿಗಳು ಸೃಷ್ಟಿ, ರಸ್ತೆ ನಿರ್ವಹಣೆಗಾಗಿಯೇ ಬಿಬಿಎಂಪಿಯಿಂದ ಪ್ರತಿ ವರ್ಷ ಕೋಟ್ಯಂತರ ರುಪಾಯಿ ವೆಚ್ಚ, ಆದರೂ ಸುಸ್ಥಿತಿಯಲ್ಲಿಲ್ಲ ರಸ್ತೆ

Not Yet Solved Road Potholes Problems in Bengaluru grg
Author
First Published Oct 29, 2022, 7:00 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಅ.29):  ರಾಜಭವನ, ವಿಧಾನಸೌಧ, ವಿಕಾಸಸೌಧ, ಹೈಕೋರ್ಚ್‌, ಕಬ್ಬನ್‌ಪಾರ್ಕ್, ಮಹತ್ಮಾ ಗಾಂಧಿ ರಸ್ತೆ (ಎಂಜಿ ರಸ್ತೆ) ಸೇರಿದಂತೆ ಬಿಬಿಎಂಪಿಯ ಪೂರ್ವ ವಲಯದ ಬಹುತೇಕ ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿ ಸೇರಿದಂತೆ ವಿವಿಧ ವಿನ್ಯಾಸದಲ್ಲಿ ಕೋಟಿ ಕೋಟಿ ರುಪಾಯಿ ವೆಚ್ಚ ಮಾಡಿ ಅಭಿವೃದ್ಧಿ ಪಡಿಸಿದರೂ ರಸ್ತೆ ಗುಂಡಿಗಳಿಂದ ಮುಕ್ತವಾಗಿಲ್ಲ. ಬಿಬಿಎಂಪಿಯ ಪೂರ್ವ ವಲಯದಲ್ಲಿ ಮೊದಲು ಟೆಂಡರ್‌ ಶ್ಯೂರ್‌ ಮಾದರಿ ರಸ್ತೆ ಅಭಿವೃದ್ಧಿ ಪಡಿಸುವುದಕ್ಕೆ ಚಾಲನೆ ನೀಡಲಾಗಿತ್ತು. ಅದರಂತೆ ಪೂರ್ವ ವಲಯದ ವ್ಯಾಪ್ತಿಗೆ ಬರುವ ಸೆಂಟ್‌ಮಾಕ್ಸ್‌ ರಸ್ತೆ, ರಾಜ ಭವನ ರಸ್ತೆ, ರಿಚ್‌ಮಂಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌ ರಸ್ತೆ ಸೇರಿದಂತೆ ಮೊದಲಾದ ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರೂ ಗುಂಡಿಗಳಿಂದ ಹೊರತಾದ ರಸ್ತೆಗಳನ್ನು ನೀಡುವಲ್ಲಿ ಬಿಬಿಎಂಪಿ ವಿಫಲವಾಗಿದೆ.

ಗಣ್ಯಾತಿ ಗಣ್ಯರು ಸಂಚರಿಸುವ ಬಹುತೇಕ ರಸ್ತೆಗಳು ಪೂರ್ವ ವಲಯದಲ್ಲಿ ಇರುವುದರಿಂದ ಪ್ರಮುಖ ಮತ್ತು ಮುಖ್ಯ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಆದರೆ, ವಾರ್ಡ್‌ ರಸ್ತೆಗಳು ಹಾಗೂ ಸಣ್ಣ ಸಣ್ಣ ರಸ್ತೆಗಳಲ್ಲಿ ದೊಡ್ಡ ಸಂಖ್ಯೆಯ ರಸ್ತೆ ಗುಂಡಿಗಳಿವೆ. ಕಳೆದ ಆರೆಂಟು ತಿಂಗಳಿನಿಂದ ವಾರ್ಡ್‌ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ.

ಬೆಂಗ್ಳೂರಲ್ಲಿ ಗುಂಡಿ ಮುಚ್ಚದ ಬಿಬಿಎಂಪಿ ನಡೆಗೆ ಹೈಕೋರ್ಟ್‌ ಬೇಸರ

ಜಯಮಹಲ್‌ ರಸ್ತೆ, ಶಾಂತಿನಗರ ಪ್ರಮುಖ ರಸ್ತೆ, ಜೋಗುಪಾಳ್ಯ ಸೇರಿದಂತೆ ವಿವಿಧ ಕಡೆ ರಸ್ತೆ ಗುಂಡಿಗಳನ್ನು ಅರೆ ಬರೆಯಾಗಿ ಮುಚ್ಚಲಾಗಿದೆ. ಒಂದು ಗುಂಡಿ ಮುಚ್ಚಿ ಮೊತ್ತೊಂದು ರಸ್ತೆ ಗುಂಡಿ ಮುಚ್ಚಿಲ್ಲ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ.

ರಸ್ತೆ ಕತ್ತರಿಸುವವರಿಗೆ ಕಡಿವಾಣವಿಲ್ಲ:

ಪೂರ್ವ ವಲಯದಲ್ಲಿ ವಾಹನಗಳ ಸಂಚಾರದಿಂದ ಸೃಷ್ಟಿಯಾಗುವ ಗುಂಡಿಗಳ ಜತೆಗೆ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ರಸ್ತೆ ಅಗೆದು ವ್ಯವಸ್ಥಿತವಾಗಿ ಭರ್ತಿ ಮಾಡದಿರುವುದರಿಂದ ಸೃಷ್ಟಿಯಾಗುವ ಗುಂಡಿಗಳ ಸಂಖ್ಯೆಯೇ ಹೆಚ್ಚಾಗಿವೆ. ಖಾಸಗಿ ಟೆಲಿಕಾಂ ಸಂಸ್ಥೆಗಳು ಸೇರಿದಂತೆ ವಿವಿಧ ಸೇವೆ ನೀಡುವ ಸರ್ಕಾರಿ ಇಲಾಖೆಗಳು ಎಗ್ಗಿಲ್ಲದೇ ರಸ್ತೆಗಳನ್ನು ಅಗೆಯುತ್ತಿವೆ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಕಡಿವಾಣ ಹಾಕುವ ಪ್ರಯತ್ನ ಮಾಡುತ್ತಿಲ್ಲ.

ಹೆಬ್ಬಾಳ ಕ್ಷೇತ್ರದಲ್ಲಿ ಹೆಚ್ಚಿನ ಗುಂಡಿ

ಪೂರ್ವ ವಲಯದಲ್ಲಿ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಿದ್ದು, ಹೊಸದಾಗಿ ವಾರ್ಡ್‌ ವಿಂಗಡಣೆ ಪ್ರಕಾರ 48 ವಾರ್ಡ್‌ಗಳಿವೆ. ಇವುಗಳಲ್ಲಿ ಈವರೆಗೆ 5,776 ರಸ್ತೆ ಗುಂಡಿ ಪತ್ತೆ ಮಾಡಲಾಗಿದೆ. ಈ ಪೈಕಿ 4,130 ಗುಂಡಿ ಮುಚ್ಚಲಾಗಿದೆ. ಇನ್ನೂ 1646 ರಸ್ತೆ ಗುಂಡಿ ಮುಚ್ಚುವುದು ಬಾಕಿ ಇದೆ.

ಈ ಪೈಕಿ ಅತಿ ಹೆಚ್ಚು ರಸ್ತೆ ಗುಂಡಿಗಳು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ. ಬಿಬಿಎಂಪಿ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಹೆಬ್ಬಾಳದಲ್ಲಿ 1,805 ರಸ್ತೆ ಗುಂಡಿ ಪತ್ತೆಯಾಗಿದ್ದು, ಈ ಪೈಕಿ 1026 ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಇನ್ನೂ 599 ಗುಂಡಿ ಮುಚ್ಚುವುದು ಬಾಕಿ ಇದೆ.

ರಸ್ತೆ ಗುಂಡಿ ಮುಚ್ಚಲು ನೂರಾರು ಕೋಟಿ ವೆಚ್ಚ

ಪೂರ್ವ ವಲಯದ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚುವುದಕ್ಕೆ ಪ್ರತಿ ವರ್ಷ ಕೋಟ್ಯಂತರ ರು. ವೆಚ್ಚ ಮಾಡಲಾಗುತ್ತಿದೆ. ಕಳೆದ ಐದು ವರ್ಷದಲ್ಲಿ .35 ಕೋಟಿಗೂ ಅಧಿಕ ಹಣವನ್ನು ಗುಂಡಿ ಮುಚ್ಚುವುದಕ್ಕೆ ವೆಚ್ಚ ಮಾಡಲಾಗಿದೆ. ಇದಲ್ಲದೇ 2018-19ರಿಂದ 2020-21ನೇ ಸಾಲಿನ ವರೆಗೆ ಪೂರ್ವ ವಲಯದ ವಿವಿಧ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ .274.64 ಕೋಟಿ ವೆಚ್ಚ ಮಾಡಲಾಗಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಸಾಲು ಸಾಲು ಗುಂಡಿಗಳು..!

ಹಾಟ್‌ ಮಿಕ್ಸ್‌ ಬಿಟುಮಿನ್‌ ಪೂರೈಕೆಯಲ್ಲಿ ತೊಂದರೆ ಆಗಿದ್ದರಿಂದ ಗುಂಡಿ ಮುಚ್ಚುವ ಕಾರ್ಯಕ್ಕೆ ಹಿನ್ನೆಡೆಯಾಗಿದ್ದು, ಮುಂದಿನ ನಾಲ್ಕೈದು ದಿನದಲ್ಲಿ ಪೂರ್ವ ವಲಯದ ಎಲ್ಲ ರಸ್ತೆಗಳಲ್ಲಿ ಬಾಕಿ ಇರುವ ರಸ್ತೆ ಗುಂಡಿ ಮುಚ್ಚಲಾಗುವುದು ಅಂತ ಪೂರ್ವ ವಲಯ ಮುಖ್ಯ ಎಂಜಿನಿಯರ್‌ ಸುಗುಣಾ ತಿಳಿಸಿದ್ದಾರೆ.  

ವಿಧಾನಸಭಾ ಕ್ಷೇತ್ರವಾರು ರಸ್ತೆ ಗುಂಡಿ ವಿವರ: ವಿಧಾನಸಭಾ ಕ್ಷೇತ್ರ ಒಟ್ಟು ಗುಂಡಿ ಭರ್ತಿ ಬಾಕಿ

ಶಾಂತಿ ನಗರ 1,125 836 286
ಸರ್ವಜ್ಞ ನಗರ 1,466 1,127 339
ಪುಲಕೇಶಿ ನಗರ 894 823 71
ಶಿವಾಜಿ ನಗರ 133 103 30
ಸಿವಿರಾಮನ್‌ ನಗರ 353 32 321
ಹೆಬ್ಬಾಳ 1,805 1,206 599
ಒಟ್ಟು 5,776 4,130 1,646
ಪೂರ್ವ ವಲಯದ ರಸ್ತೆಯ ವಿವರ
ಒಟ್ಟು ರಸ್ತೆ ಸಂಖ್ಯೆ- 13,908
ಮುಖ್ಯ ರಸ್ತೆ ಉದ್ದ (ಕಿ.ಮೀ)- 258.59
ವಾರ್ಡ್‌ ರಸ್ತೆ (ಕಿ.ಮೀ)- 1436.34
ರಸ್ತೆಯ ಉದ್ದ (ಕಿ.ಮೀ)- 1,694.93
ಪೂರ್ವದ ಗುಂಡಿ ಮುಚ್ಚಲು ವೆಚ್ಚದ ವಿವರ (ಕೋಟಿ)
ವರ್ಷ ಗುಂಡಿ ಭರ್ತಿಗೆ ವೆಚ್ಚ
2017-18 .9.10
2018-19 .8.66
2019-20 .8.65
2020-21 .0.00
2021-22 .9.10
ಒಟ್ಟು .35.51
 

Follow Us:
Download App:
  • android
  • ios