ಕೇಂದ್ರ ಸರ್ಕಾರವು ಮ-ನರೇಗಾ ಬದಲಿಗೆ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಯು, ರಾಜ್ಯದಲ್ಲಿ ಜಾರಿಯಾದ ಮೊದಲ ತಿಂಗಳಲ್ಲೇ ಮಾನವ ದಿನಗಳ ಸೃಜನೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ಬಾರಿ ಶೇ.78.77ರಷ್ಟು ಕುಸಿತ ದಾಖಲಾಗಿದ್ದು, ಯೋಜನೆಯ ಆರಂಭಿಕ ಯಶಸ್ಸಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು: ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ ಬದಲಿಸಿ ಅನುಷ್ಠಾನಗೊಳಿಸಲಾಗಿರುವ ವಿಬಿ ಜಿ ರಾಮ್ ಜಿ ಯೋಜನೆ ರಾಜ್ಯದಲ್ಲಿ ಜಾರಿಯಾದ ಮೊದಲ ತಿಂಗಳಲ್ಲೇ ಕಳೆದ ವರ್ಷಕ್ಕಿಂತ ಶೇ.78.77ರಷ್ಟು ಕಡಿಮೆ ಮಾನವ ದಿನಗಳ ಸೃಜನೆಯಾಗಿದೆ. ಆ ಮೂಲಕ ಯೋಜನೆಗೆ ಭಾರೀ ಹಿನ್ನಡೆಯುಂಟಾಗಿದೆ.
ಮಾನವ ದಿನಗಳ ಸೃಜನೆಯಲ್ಲಿ ಭಾರೀ ಕಡಿತ
ಗ್ರಾಮೀಣ ಭಾಗದ ವಲಸೆ ತಡೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಲು ಜಾರಿಗೊಳಿಸಲಾಗಿದ್ದ ಮ-ನರೇಗಾ ಯೋಜನೆ ಬದಲಾಯಿಸಿ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆ ಅನುಷ್ಠಾನಗೊಳಿಸಿದೆ. ಜು.1ರಿಂದ ವಿಬಿ ಜಿ ರಾಮ್ ಜಿ ಕಾಯ್ದೆ ದೇಶದೆಲ್ಲೆಡೆ ಜಾರಿಯಾಗಿದೆ. ನೂತನ ಕಾಯ್ದೆಯಂತೆ ಮ-ನರೇಗಾ ಯೋಜನೆಗಿಂತ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ, ವಿಬಿ ಜಿ ರಾಮ್ ಜಿ ಜಾರಿಯಾದ ಮೊದಲ ತಿಂಗಳಲ್ಲಿಯೇ ಮಾನವ ದಿನಗಳ ಸೃಜನೆಯಲ್ಲಿ ಭಾರೀ ಕಡಿತವಾಗಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷ ಕೆಲಸ ಸೃಷ್ಟಿ ಪ್ರಮಾಣ ಕಡಿಮೆಯಾಗಿದೆ.
ಕೇಂದ್ರ ಸರ್ಕಾರ ಗುರುತಿಸಿರುವಂತೆ ರಾಜ್ಯದ 5,958 ಗ್ರಾಮಗಳ 4,991 ಗ್ರಾಪಂಗಳಲ್ಲಿ ಒಟ್ಟು 11,555 ಕೆಲಸಗಳ ಅನುಷ್ಠಾನ ಮಾಡಲಾಗುತ್ತಿದೆ. ಅದರ ಮೂಲಕ ಜು.1 ರಿಂದ 31ರವರೆಗೆ 13.06 ಲಕ್ಷ ಮಾನವ ದಿನಗಳು ಸೃಷ್ಟಿಯಾಗಿವೆ. ಅದೇ 2025ರ ಜುಲೈ ತಿಂಗಳಲ್ಲಿ ಮ-ನರೇಗಾ ಯೋಜನೆ ಅಡಿ ಜುಲೈ ತಿಂಗಳಲ್ಲಿ 61.49 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿತ್ತು. ಒಟ್ಟಾರೆ ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಶೇ. 78.77ರಷ್ಟು ಕಡಿಮೆ ಮಾನವ ದಿನಗಳು ಸೃಜನೆಯಾಗಿದೆ.


