ಹೋಟೆಲ್ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್‌ಗೆ ಹೋಟೆಲ್ ಮಾಲೀಕರ ಸಂಘ ನಿರ್ಧಾರ
ಮುಂದಿನ ಎರಡು ತಿಂಗಳ ಕಾಲ ಊಟೋಪಹಾರದ ಬೆಲೆ ಹೆಚ್ಚಿಸದಿರಲು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ತೀರ್ಮಾನಿಸಿದ್ದು, ಹೋಟೆಲ್ ಗ್ರಾಹಕರಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಆದರೆ, ಈ ಅವಧಿಯಲ್ಲಿ ದಿನಸಿ, ಸಿಲಿಂಡರ್ ದರ ಏರಿಕೆಯಾದರೆ ಬೆಲೆ ಹೆಚ್ಚಿಸಲು ಯೋಚಿಸುವುದಾಗಿ ತಿಳಿಸಿದೆ.
ಬೆಂಗಳೂರು (ಏ.4) : ಮುಂದಿನ ಎರಡು ತಿಂಗಳ ಕಾಲ ಊಟೋಪಹಾರದ ಬೆಲೆ ಹೆಚ್ಚಿಸದಿರಲು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ತೀರ್ಮಾನಿಸಿದ್ದು, ಹೋಟೆಲ್ ಗ್ರಾಹಕರಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಆದರೆ, ಈ ಅವಧಿಯಲ್ಲಿ ದಿನಸಿ, ಸಿಲಿಂಡರ್ ದರ ಏರಿಕೆಯಾದರೆ ಬೆಲೆ ಹೆಚ್ಚಿಸಲು ಯೋಚಿಸುವುದಾಗಿ ತಿಳಿಸಿದೆ.
ಸೋಮವಾರ ನಡೆದ ಸಂಘದ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಬೆಲೆ ಹೆಚ್ಚಳದ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ಸದ್ಯ ಚುನಾವಣೆ, ಹಾಗೂ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುವುದರಿಂದ ಇನ್ನೆರಡು ತಿಂಗಳ ಕಾಲ ದರ ಹೆಚ್ಚಿಸದೇ ಇರಲು ನಿರ್ಧರಿಸಲಾಯಿತು.
ನಾಗಶೆಟ್ಟಿಹಳ್ಳಿ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮ್ಯಾನ್‌ಹೋಲ್
ಸಭೆಯಲ್ಲಿ ಸಿಲಿಂಡರ್ ರಿಯಾಯಿತಿ ರದ್ಧತಿ, ಬೆಲೆ ಏರಿಕೆ, ದಿನಸಿ, ಅಡುಗೆ ಎಣ್ಣೆ, ಹಾಲು ತುಪ್ಪದ ದರ, ಸರಕು ಸಾಗಣೆ ವೆಚ್ಚ ಹೆಚ್ಚಳದಿಂದ ಉದ್ಯಮದ ಮೇಲೆ ಉಂಟಾಗಿರುವ ಆರ್ಥಿಕ ಹೊರೆ ಬಗ್ಗೆ ಹೊಟೆಲ್ ಮಾಲಿಕರು ಅಭಿಪ್ರಾಯ ಹಂಚಿಕೊಂಡರು.
ಕೊರೋನಾ ಬಳಿಕ ಹೋಟೆಲ್ ಉದ್ಯಮ ಚೇತರಿಕೆಯ ಹಾದಿಯಲ್ಲಿದೆ. ಈಗಾಗಲೇ ಗ್ರಾಹಕರು ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದಾರೆ. ಮಧ್ಯಮ ವರ್ಗದ ಜನರು ಮಧ್ಯಾಹ್ನ, ಸಂಜೆ ಹೋಟೆಲ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಈಗ ಬೆಲೆ ಹೆಚ್ಚಿಸಿದರೆ ಗ್ರಾಹಕರು ಬರುವುದೂ ಕಡಿಮೆಯಾಗಬಹುದು. ಅದಲ್ಲದೆ, ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ರಮ ಸೇರಿ ಇನ್ನಿತರೆ ಕಾರಣಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪರ ಊರುಗಳ ಜನರೂ ಬರುತ್ತಾರೆ. ಆದ್ದರಿಂದ ಶೇ.10ರಷ್ಟುಬೆಲೆ ಏರಿಕೆ ಮಾಡುವುದು ಬೇಡ ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ವಿಶೇಷವಾಗಿ ಸಿಹಿತಿನಿಸು, ಉತ್ತರ ಭಾರತ ಖಾದ್ಯಗಳ ತಯಾರಿಕೆಗೆ ಬೆಲೆ ಏರಿಕೆ ಹೆಚ್ಚಿನ ಹೊಡೆತ ಕೊಡುತ್ತಿದೆ. ಹಲವು ಹೊಟೆಲ್‌ಗಳಲ್ಲಿ ಇವುಗಳ ತಯಾರಿಕೆಯನ್ನೇ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಊಟೋಪಾರ ನೀಡುವ ಪ್ರಮಾಣದಲ್ಲಿ ಕಡಿತಗೊಳಿಸಬೇಕಾಗಿದೆ. ಹೀಗಾಗಿ ಬೆಲೆ ಏರಿಕೆಗೆ ಅನುಗುಣವಾಗಿ ಹೊಟೆಲ್‌ಗಳಲ್ಲಿ ಊಟೋಪಹಾರ-ಚಹಾ ಬೆಲೆ ಹೆಚ್ಚಿಸಬೇಕು ಎಂದು ಕೆಲ ಮಾಲಿಕರು ಅಭಿಪ್ರಾಯಪಟ್ಟರು.
ಹೋಟೆಲ್ ಖಾದ್ಯ ಪ್ರಿಯರಿಗೆ ಶಾಕ್, ಶೇ.10ರಷ್ಟು ದರ ಏರಿಕೆಯ ಬರೆ!
‘ವಿಶೇಷ ಸಭೆಯಲ್ಲಿ ದರ ಏರಿಕೆಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಹೊಟೇಲಿಗೆ ಅಗತ್ಯವಾದ ಅಡುಗೆ ಅನಿಲ ಹಾಗೂ ಇತರ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಈಗ ಬೆಲೆ ಹೆಚ್ಚಿಸಿದರೆ ಸರ್ಕಾರ ಸಿಲಿಂಡರ್ ಬೆಲೆ ಇಳಿಕೆ ಮಾಡುವುದಿಲ್ಲ. ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತದೆ. ಬದಲಾಗಿ ಸರ್ಕಾರದ ಮೇಲೆ ಒತ್ತಡ ತಂದು ಬೆಲೆ ಇಳಿಕೆಗೆ ಯತ್ನಿಸಲಾಗುವುದು’ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಗ್ರಾಹಕರ ಹಿತದೃಷ್ಟಿಯಿಂದ ತಕ್ಷಣಕ್ಕೆ ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವುದಿಲ್ಲ. ಮುಂದಿನ ಎರಡು ತಿಂಗಳುಗಳಲ್ಲಿ ದಿನಸಿ ಮತ್ತಿತರ ವಸ್ತುಗಳ ಬೆಲೆಗಳ ವಿದ್ಯಮಾನ ನೋಡಿ ಬಳಿಕ ತಿಂಡಿ-ತಿನಿಸುಗಳ ದರ ಏರಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು.
ಪಿ.ಸಿ.ರಾವ್, ಬೆಂಗಳೂರು ಹೋಟೆಲ್‌ಗ ಸಂಘ ಅಧ್ಯಕ್ಷ