ಬೆಂಗಳೂರು ಗಲಭೆಗೆ ಟೆರರ್ ಲಿಂಕ್: ಸಮಿಯುದ್ದೀನ್ ಬಂಧನ!
ಬೆಂಗಳೂರು ಗಲಭೆಗೆ ಟೆರರ್ ಲಿಂಕ್!| ಅಲ್ ಹಿಂದ್ ಸಂಘಟನೆ ನಂಟು ಹೊಂದಿದ್ದ ಸಮಿಯುದ್ದೀನ್ ಬಂಧನ| ಐಸಿಸ್‌ಗೆ ಬೆಂಬಲ ನೀಡಿತ್ತು ಅಲ್‌ಹಿಂದ್| ಗಲಭೆ ಸಂಚುಕೋರನ ಜತೆ ಸಮಿಯುದ್ದೀನ್ ನಂಟು| ಆರ್‌ಎಸ್‌ಎಸ್‌ನ ರುದ್ರೇಶ್ ಕೊಲೆ ಆರೋಪಿಗಳ ಜತೆಗೂ ಸಂಪರ್ಕ| ಈ ನಿಟ್ಟಿನಲ್ಲಿ ಈಗ ಪೊಲೀಸರ ತನಿಖೆ| ಎನ್‌ಐಎಗೂ ಈ ಬಗ್ಗೆ ಮಾಹಿತಿ ನೀಡಿಕೆಗೆ ನಿರ್ಧಾರ|
ಬೆಂಗಳೂರು(ಆ.18): ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ‘ಅಲ್-ಹಿಂದ್’ ಭಯೋತ್ಪಾದನೆ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಎನ್ನಲಾದ ಆರೋಪಿ ಸೇರಿ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾದ ಸಮಿಯುದ್ದೀನ್(37) ಹಾಗೂ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ವಾಜೀದ್ ಬಂಧಿತರು. ಸಮಿಯುದ್ದೀನ್‌ನನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಭಯೋತ್ಪಾದನ ನಿಗ್ರಹ ದಳ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
'ಸೊಕ್ಕು ಇಳಿದಿಲ್ಲ' ವರದಿಗೆ ತೆರಳಿದ್ದ ಸುವರ್ಣ ಸಿಬ್ಬಂದಿಗೆ ಪುಂಡರ ಅವಾಜ್!
ತಮಿಳುನಾಡಿನಲ್ಲಿ ಅಲ್-ಉಮ್ಮಾ ಸಂಘಟನೆಯ ಮತ್ತೊಂದು ರೂಪವಾಗಿ ಎರಡು ವರ್ಷಗಳ ಹಿಂದೆ ಅಲ್-ಹಿಂದ್ ಭಯೋತ್ಪಾದನಾ ಸಂಘಟನೆಯನ್ನು ಭಾರತದಲ್ಲಿ ಸ್ಥಾಪಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಭಯೋತ್ಪಾದನಾ ಸಂಘಟನೆ ಹಲವು ಸಂಚುಗಳನ್ನು ನಡೆಸುತ್ತಿದೆ. ಎನ್‌ಐಎ ಅಧಿಕಾರಿಗಳು ಈ ಸಂಘಟನೆಯ ತನಿಖೆ ನಡೆಸುತ್ತಿದೆ. ಐಸಿಎಸ್ (ಇಸ್ಲಾಮಿಕ್ ಸ್ಟೇಟ್) ಜಾಗತಿಕ ಭಯೋತ್ಪಾದಕ ಸಂಘಟನೆಗೆ ಈ ಅಲ್-ಹಿಂದ್ ಭಾರತದಲ್ಲಿ ಬೆಂಬಲವಾಗಿ ನಿಂತಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಪ್ರಕರಣದ ಬಗ್ಗೆ ಮತ್ತಷ್ಟುಆಳವಾಗಿ ತನಿಖೆ ಆರಂಭಿಸಿದ್ದು, ಬೆಂಗಳೂರಿನ ಗಲಭೆಗೆ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಸಂಬಂಧ ಇರಬಹುದೇ ಎಂಬುದರ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
'ದೊಂಬಿ ಮಾಡಿದವರು ಧರ್ಮರಕ್ಷಣೆಗೆ ಬಂದಿದ್ದರು'
ಸಮಿಯುದ್ದೀನ್ ಪಾತ್ರವೇನು?:
ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸೋದರ ಸಂಬಂಧಿ, ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಎಂಬುದನ್ನೇ ನೆಪವಾಗಿಟ್ಟುಕೊಂಡು ಕಿಡಿಗೇಡಿಗಳು, ಶಾಸಕರ ನಿವಾಸ, ಡಿ.ಜೆ.ಹಳ್ಳಿ ಪೊಲೀಸ್ ಠಾಣೆ, ಪೊಲೀಸ್ ಹಾಗೂ ಸಾರ್ವಜನಿಕರ ವಾಹನಗಳಿಗೆ ಬೆಂಕಿ ಹಚ್ಚಿ ಗಲಭೆ ಸೃಷ್ಟಿಸಿದ್ದರು. ಗಲಭೆಯ ಪ್ರಮುಖ ಸಂಚುಕೋರ ಬಂಧಿತ ಎಸ್‌ಡಿಪಿಐ ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಮುಜಾಮಿಲ್ ಪಾಷಾ ಜತೆ ಸಮಿಯುದ್ದೀನ್ ನಿರಂತರವಾಗಿ ಸಂಪರ್ಕದಲ್ಲಿದ್ದ. ಆ.11ರಂದು ರಾತ್ರಿ ಮುಜಾಮಿಲ್ ಪಾಷಾ ಜತೆ ಡಿ.ಜೆ.ಹಳ್ಳಿ ಠಾಣೆ ಬಳಿ ಸಮಿಯುದ್ದೀನ್ ಇದ್ದ. ಈತ ಕೂಡ ಗಲಭೆ ಸಂಚಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಗಲಭೆ ರಾತ್ರಿ ಪ್ರತ್ಯಕ್ಷವಾಗಿ ಪಾಲ್ಗೊಂಡಿದ್ದ. ಅಲ್ಲದೆ, ಮುಜಾಮಿಲ್ ನಡೆಸಿದ ಸಭೆಯಲ್ಲಿ ಈತ ಕೂಡ ಭಾಗಿಯಾಗಿದ್ದ. ಗಲಭೆ ನಡೆದ ದಿನ ಮೊಬೈಲ್ ಕರೆಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಈತನ ಬಗ್ಗೆ ಮುಜಾಮಿಲ್ ಕೂಡ ಬಾಯ್ಬಿಟ್ಟಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದರು.
2016ರಲ್ಲಿ ಶಿವಾಜಿನಗರದಲ್ಲಿ ನಡೆದಿದ್ದ ಆರ್‌ಎಸ್‌ಎಸ್ ರುದ್ರೇಶ್ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಇರ್ಫಾನ್, ವಾಸೀಂ, ವಾಸೀಂ ಷರೀಫ್ ಹಾಗೂ ಇತರರ ಜತೆ ಸಮಿಯುದ್ದೀನ್ ಸಂಪರ್ಕದಲ್ಲಿದ್ದ. ಆಗ್ಗಾಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಹೋಗಿ ಆರೋಪಿಗಳನ್ನು ಭೇಟಿಯಾಗಿ ಬರುತ್ತಿದ್ದ. ಬಂಧಿತರ ಕಾನೂನು ಪ್ರತಿಕ್ರಿಯೆ ಹಾಗೂ ಇತರ ವಿಚಾರಣೆಗಳಿಗೆ ಭೇಟಿಯಾಗುತ್ತಿದ್ದ. ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಈತನ ಪಾತ್ರ ಇಲ್ಲ. ರುದ್ರೇಶ್ ಹತ್ಯೆ ಬಳಿಕವಷ್ಟೇ ನಿರಂತವಾಗಿ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ನಿಷೇಧಿತ ಅಲ್‌ಹಿಂದ್ ಭಯೋತ್ಪಾದನೆ ಸಂಘಟನೆಯೊಂದಿಗೆ ಆರೋಪಿ ನಿರಂತರವಾಗಿ ನಂಟು ಹೊಂದಿರುವುದು ಕಂಡು ಬಂದಿದೆ. ಸಿಸಿಬಿ ಭಯೋತ್ಪಾದನಾ ನಿಗ್ರಹ ದಳದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಬೆಂಗ್ಳೂರು ಗಲಭೆ: ರಾತ್ರಿ 1 ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಹೋಗಿದ್ನಂತೆ ಪುಂಡ!
ಕೆಲ ತಿಂಗಳ ಹಿಂದೆ ಸೋಲದೇವನಹಳ್ಳಿ ಮತ್ತು ಸುದ್ದಗುಂಟೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಅಡಗಿದ್ದ ಅಲ್-ಉಮ್ಮಾ ಸಂಘಟನೆಯ ಶಂಕಿತರನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ)ಅಧಿಕಾರಿಗಳು ಬಂಧಿಸಿದ್ದರು. ಶಂಕಿತರು ಅಡಗಿದ್ದ ಸೋಲದೇವನಹಳ್ಳಿ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಈ ಶಂಕಿತರ ಜತೆಗೂ ಆರೋಪಿ ಸಂಪರ್ಕದಲ್ಲಿದ್ದ ಬಗ್ಗೆ ಶಂಕೆ ಇದೆ. ಈ ಬಗ್ಗೆ ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು.
ನಾನೇನೂ ಮಾಡಿಲ್ಲ:
‘ಗಲಭೆ ವೇಳೆ ವಾಹನಗಳಿಗೆ ಬೆಂಕಿ ಇಡುತ್ತಿದ್ದವರನ್ನು ತಡೆಯುವ ಕೆಲಸ ಮಾಡುತ್ತಿದ್ದೆ. ಅಲ್ಲದೆ, ಹಿಂಸಾಚಾರದಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದ್ದೆ. ನಾವು ಗಲಭೆ ನಡೆಸಿಲ್ಲ’ ಎಂದು ಹೇಳಿಕೆ ನೀಡುತ್ತಿದ್ದಾನೆ. ಸಮಿಯುದ್ದೀನ್ ಮೊಬೈಲ್ ಕರೆ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಯನ್ನು ತೀವ್ರ ವಿಚಾರಣೆ ನಡೆಸಿದ ಬಳಿಕವಷ್ಟೇ ಸಂಪೂರ್ಣ ಮಾಹಿತಿ ಹೊರ ಬರಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
'ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ಬಿಟ್ಬಿಡಿ'; ಅಖಂಡ ಮನೆ ಮುಂದೆ ಹೈಡ್ರಾಮಾ
ದೊಂಬಿಗೆ ಜನರನ್ನು ಸೇರಿಸಿದ್ದ ವಾಜೀದ್
ಬೆಂಗಳೂರು; ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷನಾಗಿರುವ ವಾಜೀದ್ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್‌ನ್ನು ಸ್ಥಾಪಿಸಿ ಅದರ ಅಧ್ಯಕ್ಷನಾಗಿದ್ದ. ಗಲಭೆ ನಡೆದ ದಿನ ಹಲವು ಮಂದಿಗೆ ಕರೆ ಮಾಡಿ ದೊಂಬಿ ಮಾಡಲು ಜನರನ್ನು ಸೇರಿಸಿದ್ದಾನೆ. ಈ ಬಗ್ಗೆ ದೊರೆತ ಸಾಕ್ಷ್ಯಧಾರಗಳ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಘಟನೆ ನಡೆದ ದಿನ ಆರೋಪಿ ಕೂಡ ಸ್ಥಳದಲ್ಲಿದ್ದು, ಮುಜಾಮಿಲ್ ಪಾಷಾ ಆತನೊಂದಿಗೆ ಸಂಪರ್ಕದಲ್ಲಿದ್ದ. ಅಲ್ಲದೆ, ಸಮಿಮುದ್ದೀನ್ ಜತೆ ವಾಜೀದ್ ಹೆಚ್ಚು ಒಡನಾಟ ಹೊಂದಿದ್ದ ಎಂಬುದು ತಿಳಿದು ಬಂದಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.