ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರ ಕಚೇರಿಯಲ್ಲಿನ ಅಸಭ್ಯ ವರ್ತನೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ 'ಎಐ ಜನರೇಟೆಡ್' ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದು, ಬಿಜೆಪಿ ನಾಯಕ ಎಸ್. ಸುರೇಶ್ ಕುಮಾರ್ ಸರ್ಕಾರದ ಮೌನವನ್ನು ಪ್ರಶ್ನಿಸಿ ತೀವ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು (ಜ.19): ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿರುವ ಡಿಜಿಪಿ ರಾಮಚಂದ್ರ ರಾವ್ ಅವರ ಕಚೇರಿಯ ಅಸಭ್ಯ ವರ್ತನೆಯ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ, ಸರ್ಕಾರದ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಈಗಲೂ ನನಗೆ ಗೊತ್ತಿಲ್ಲ ಎನ್ನುವುದು ಉತ್ತರವಾಗಬಾರದು" ಎಂದು ಹೇಳುವ ಮೂಲಕ ಸರ್ಕಾರದ ಮೌನವನ್ನು ಅವರು ಪ್ರಶ್ನಿಸಿದ್ದಾರೆ.
ಈಗಲೂ " ನನಗೆ ಗೊತ್ತಿಲ್ಲ" ಎನ್ನುವುದು ಉತ್ತರವಾಗಬಾರದು. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೊಲೀಸ್ ಅಧಿಕಾರಿ ಶ್ರೀ ರಾಮಚಂದ್ರರಾವ್ ರವರ ಘನಕಾರ್ಯ ಅಕ್ಷಮ್ಯ ಅಪರಾಧ. ಹಿರಿಯ ಪೊಲೀಸ್ ಅಧಿಕಾರಿ ಶ್ರೀ ರಾಮಚಂದ್ರ ರಾವ್ ಇಡೀ ಪೊಲೀಸ್ ಇಲಾಖೆಗೆ ಕಳಂಕ ಮೆತ್ತುವ ಕಾರ್ಯವೆಸಗಿದ್ದಾರೆ. ಹಿಂದೆ ಅವರ ಹೆಸರು ಮತ್ತು ಸ್ಥಾನದ ದುರುಪಯೋಗ ಮಾಡಿಕೊಂಡು ಭಾರಿ ಪ್ರಮಾಣದ ಚಿನ್ನದ ಸ್ಮಗ್ಲಿಂಗ್ ನಡೆದಿದ್ದಾಗ ಈ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳಿಸಿ ಸರ್ಕಾರ ಕೈ ತೊಳೆದುಕೊಂಡಿತ್ತು. ಇದೀಗ ಪ್ರಕಟವಾಗಿರುವ ಈ ಪೊಲೀಸ್ ಅಧಿಕಾರಿಯ ಘನಂಧಾರಿ ಕಾರ್ಯವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಶೀಲಿಸಬೇಕು. ಮತ್ತೆ ಕಡ್ಡಾಯ ರಜೆ ಮೇಲೆ ಕಳಿಸಿ ಕೈ ತೊಳೆದುಕೊಳ್ಳುವುದು ಸರ್ಕಾರಕ್ಕೆ ಭೂಷಣವಲ್ಲ.
ಸಮವಸ್ತ್ರದಲ್ಲಿಯೇ, ತನ್ನ ಕಚೇರಿಯಲ್ಲಿಯೇ ಈ ಹಿರಿಯ ಅಧಿಕಾರಿ ಮಾಡಿರುವ ಕೃತ್ಯ ಪೊಲೀಸ ಇಲಾಖೆಯನ್ನೇ ಸಂಶಯದಿಂದ ಅನುಮಾನದಿಂದ ನೋಡುವಂತಾಗಿದೆ. IPS ಎಂಬ ಅತ್ಯಂತ ಜವಾಬ್ದಾರಿಯುತ ಹೆಸರಿಗೆ ಈ ವ್ಯಕ್ತಿ ಇಂದು ಅಪಚಾರ ವೆಸಗಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕಳಿಸಬೇಕೆಂದರೆ, ಸರ್ಕಾರ ಈ ಬಗ್ಗೆ ತುರ್ತು ಮತ್ತು ಪರಿಣಾಮಕಾರಿ ಕ್ರಮವನ್ನು ಘೋಷಿಸಬೇಕು. ಇಲ್ಲದಿದ್ದರೆ ಇಡೀ ಆಡಳಿತವೇ ಕಡ್ಡಾಯ ರಜೆ ಮೇಲೆ ಹೋದಂತೆ ಜನ ಭಾವಿಸುತ್ತಾರೆ ಎಂದು ಬರೆದಿದ್ದಾರೆ.
ಡಿಜಿಪಿ ರಾಮಚಂದ್ರ ರಾವ್ ನೀಡಿದ ಸ್ಪಷ್ಟನೆ ಏನು?
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಡಿಜಿಪಿ ರಾಮಚಂದ್ರ ರಾವ್, ಇವೆಲ್ಲವೂ 'ಎಐ (AI) ಜನರೇಟೆಡ್' ಮತ್ತು ಫ್ಯಾಬ್ರಿಕೇಟೆಡ್ ವಿಡಿಯೋಗಳು ಎಂದು ಹೇಳಿದ್ದಾರೆ. "ನನ್ನ ಹೆಸರು ಕೆಡಿಸಲು ಈ ರೀತಿ ಮಾಡಲಾಗಿದೆ, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ" ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಗೊಂದಲದಲ್ಲಿ ಸರ್ಕಾರ?
ವಿಡಿಯೋ ಹಳೆಯದೋ ಅಥವಾ ಎಐ ಸೃಷ್ಟಿಯೋ ಎಂಬ ಗೊಂದಲದ ನಡುವೆ, ಸುರೇಶ್ ಕುಮಾರ್ ಅವರ ಈ ಕಟು ಟೀಕೆ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಧಿಕಾರಿ ತನ್ನ ವೈಯಕ್ತಿಕ ವಿಚಾರ ಏನೇ ಇದ್ದರೂ ಸಮವಸ್ತ್ರದಲ್ಲಿ ಕಚೇರಿಯೊಳಗೆ ಇಂತಹ ವರ್ತನೆ ತೋರಿರುವುದು ತಪ್ಪು ಎಂಬ ವಾದ ಸಾರ್ವಜನಿಕ ವಲಯದಲ್ಲಿ ಬಲವಾಗಿದೆ.


