ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ಸರಸವಾಡಿದ್ದಾರೆ ಎನ್ನಲಾದ ವೈರಲ್ ವಿಡಿಯೋವನ್ನು ಐಜಿಪಿ ರಾಮಚಂದ್ರ ರಾವ್ ನಿರಾಕರಿಸಿದ್ದಾರೆ. ಇದು ತಮ್ಮ ತೇಜೋವಧೆ ಮಾಡಲು ಎಐ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋ ಎಂದಿರುವ ಅವರು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾಗಿದ್ದಾರೆ.
ಬೆಂಗಳೂರು (ಜ.19): ಸಮವಸ್ತ್ರದಲ್ಲೇ ಮಹಿಳೆಯರೊಂದಿಗೆ ಸರಸವಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಐಜಿಪಿ ರಾಮಚಂದ್ರ ರಾವ್ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. 'ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ' ಎಂದು ಅವರು ಕಿಡಿಕಾರಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ
ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೋ ಆಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ಷಡ್ಯಂತ್ರ ರೂಪಿಸಿವೆ' ಎಂದು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಕಕ್ಕಾಬಿಕ್ಕಿ!
ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸುವರ್ಣ ನ್ಯೂಸ್ ಪ್ರತಿನಿಧಿಗಳು ರಾಮಚಂದ್ರ ರಾವ್ ಅವರನ್ನು ಪ್ರಶ್ನಿಸಿದಾಗ, ಅವರು ಸರಿಯಾದ ಉತ್ತರ ನೀಡಲಾಗದೆ ತಬ್ಬಿಬ್ಬಾದ ಪ್ರಸಂಗವೂ ನಡೆಯಿತು. ವಿಡಿಯೋದಲ್ಲಿರುವುದು ನೀವೇ ಅಲ್ಲವೇ? ಸಮವಸ್ತ್ರದಲ್ಲೇ ಇಂತಹ ವರ್ತನೆ ಸರಿಯೇ? ಎಂಬ ನೇರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅವರು ಕಕ್ಕಾಬಿಕ್ಕಿಯಾಗಿ ಅಲ್ಲಿಂದ ನಿರ್ಗಮಿಸಿದರು. ಅವರ ಈ ವರ್ತನೆ ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತನಿಖೆಗೆ ಆಗ್ರಹ
ಒಂದೆಡೆ ವಿಡಿಯೋ ಎಡಿಟೆಡ್ ಎಂದು ರಾಮಚಂದ್ರ ರಾವ್ ಹೇಳುತ್ತಿದ್ದರೆ, ಮತ್ತೊಂದೆಡೆ ವಿಡಿಯೋದಲ್ಲಿರುವ ದೃಶ್ಯಗಳು ಮತ್ತು ಸ್ಥಳವು ಅವರ ಕಚೇರಿಯನ್ನೇ ಹೋಲುತ್ತಿವೆ ಎಂಬ ವಾದಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ತಿಳಿಯಲು ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಸಾಧ್ಯತೆಯಿದೆ.


