Asianet Suvarna News Asianet Suvarna News

ಬೆಳಗಾವಿ ಗಡಿ ವಿವಾದ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾ.ಬಿವಿ ನಾಗರತ್ನ!

ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬರಲು ಸಜ್ಜಾಗಿದೆ. ಇದಕ್ಕೂ ಮುನ್ನ ಇದರ ವಿಚಾರಣೆಯಿಂದ ನ್ಯಾಯಮೂರ್ತಿ ಬಿವಿ ನಾಗರತ್ನ ಹಿಂದೆ ಸರಿದಿದ್ದಾರೆ.ಜಸ್ಟೀಸ್ ಬಿವಿ ನಾಗರತ್ನ ಹಿಂದೆ ಸರಿಯಲು ಕಾರಣವೇನು?

Supreme Court Justice BV nagarathna opted out of hearing Karnataka Maharashtra Belagavi Border dispute CJI set up fresh bench ckm
Author
First Published Feb 10, 2023, 3:54 PM IST

ನವದೆಹಲಿ(ಫೆ.10):  ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಿದ್ದೆಗೆಡಿಸಿರುವ ಬೆಳಗಾವಿ ವಿವಾದ ಇದೀಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಇದರ ವಿಚಾರಣೆಗೆ ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ, ಹೃಷಿಕೇಶ್ ರಾಯ್ ಹಾಗೂ ಕೆಎಂ ಜೋಸೆಫ್ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಆದರೆ ವಿಚಾರಣೆಗೂ ಮುನ್ನವೇ ಜಸ್ಟೀಸ್ ಬಿವಿ ನಾಗರತ್ನ ಹಿಂದೆ ಸರಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಜಸ್ಟೀಸ್ ಬಿವಿ ನಾಗರತ್ನ ಕರ್ನಾಟಕ ಮೂಲದವರು. ಹೀಗಾಗಿ ಬೆಳಗಾವಿ ಗಡಿ ವಿವಾದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಬಿವಿ ನಾಗರತ್ನ ಮುಖ್ಯನ್ಯಾಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ತಾವು ಕರ್ನಾಟಕದವರಾಗಿರುವ ಕಾರಣ ಬೆಳಗಾವಿ ಗಡಿ ವಿವಾದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ. 

ಬೆಳಗಾವಿ ಸೇರಿದಂತೆ ಕರ್ನಾಟಕದ 865 ಗ್ರಾಮಗಳು ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ವಾದಿಸುತ್ತಿದ್ದು, ಈ ಸಂಬಂಧ ಸುಪ್ರೀಂಕೋರ್ಚ್‌ ಮೆಟ್ಟಿಲೇರಿದೆ. ಆದರೆ, ಮಹಾಜನ್‌ ವರದಿಯೇ ಅಂತಿಮ ಎಂದು ಕರ್ನಾಟಕ ವಾದಿಸುತ್ತಿದೆ. ರಾಜ್ಯ ಪುನರ್‌ವಿಂಗಡಣಾ ಕಾಯ್ದೆ 1956ರಲ್ಲಿ ಜಾರಿಯಾದಾಗಿನಿಂದಲೂ ಬೆಳಗಾವಿ ಸೇರಿ ಮರಾಠಿ ಬಹುಭಾಷಿಕ ಪ್ರದೇಶಗಳ ವಿಚಾರದಲ್ಲಿ ಮಹಾರಾಷ್ಟ್ರದಿಂದ ಕ್ಯಾತೆ ತೆಗೆಯುತ್ತಿದೆ. ಪ್ರತಿ ಬಾರಿ ಮಹಾರಾಷ್ಟ್ರ ಹಾಗೂ ಎಂಇಎಸ್ ಪುಂಡರು ಈ ವಿಚಾರದಲ್ಲಿ ಕಿರಿಕ್ ಮಾಡಿದ್ದಾರೆ. ಈ ಸಂಬಂಧ 1988ರಲ್ಲಿ ಖಾನಾಪುರದ ಸಿವಿಲ್‌ ನ್ಯಾಯಾಲಯದಲ್ಲಿ ಸರ್ಕಾರದಿಂದ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಗಡಿ ವಿವಾದ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋರ್ಟ್ ಕೇಸ್‌ ರದ್ದು ಮಾಡಿತ್ತು.

ಮಂಡ್ಯದ ಮಗಳು ಜ| ನಾಗರತ್ನ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ!

2004ರಲ್ಲಿ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿ ವಿವಾದ ಚುರುಕುಗೊಳಿಸಿತ್ತು. 2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರಿಂ  ಮೆಟ್ಟಿಲೆರಿತ್ತು. ಬೆಳಗಾವಿ ಸೇರಿ ಕರ್ನಾಟಕದ ಗಡಿ ಜಿಲ್ಲೆಗಳ ಒಟ್ಟು 865 ಗ್ರಾಮಗಳಿಗಾಗಿ ಹಕ್ಕು ಮಂಡಿಸಿತ್ತು. ರಾಜ್ಯ ಪುನರ್‌ವಿಂಗಡಣಾ ಕಾಯ್ದೆ 1956 ಕಲಂ 7(1) (ಬಿ) ಮತ್ತು (ಸಿ)ಮತ್ತು 8(1)(ಸಿ)(1)ಗಳನ್ನು ರದ್ದುಪಡಿಸಿ, ಮರಾಠಿ ಬಹುಭಾಷಿಕರಿರುವ ಪ್ರದೇಶ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿತ್ತು. 

ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಕರ್ನಾಟಕ ತನ್ನ ವಾದ ಮುಂದಿಟ್ಟಿತ್ತು. ಗಡಿ ವಿವಾದ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಲ್ಲ, ಬದಲಾಗಿ ಸಂಸತ್ತಿನಲ್ಲಿ ಚರ್ಚೆ ಮಾಡಿ ಕೇಂದ್ರೀಯ ಅಧಿನಿಯಮವಾದ ರಾಜ್ಯ ಪುನರವಿಂಗಡಣೆ ಕಾಯ್ದೆಯ ಕಲಂಗೆ ತಿದ್ದುಪಡಿಮಾಡುವ ಅಥವಾ ಕಲಂ ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಬಹುದು ಎಂದಿತ್ತು. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ, ಗಡಿವಿವಾದದ ಜತೆಗೆ ಗಡಿಯಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ವಾದವನ್ನೂ ಎಂಇಎಸ್‌ ಕುಮ್ಮಕ್ಕಿನಿಂದ ಮಹಾರಾಷ್ಟ್ರ ಸರ್ಕಾರ ಕೋರ್ಟ್ ಮುಂದಿಟ್ಟಿತು.

ಲೋಕಸಭೆಯಲ್ಲಿ ಬೆಳಗಾವಿ ಗಡಿ ವಿವಾದ, ಬೊಮ್ಮಾಯಿ ಮೇಲೆ ಪ್ರಚೋದನೆ ಆರೋಪ ಹೊರಿಸಿದ ಶಿವಸೇನೆ!

ಎರಡೂ ರಾಜ್ಯಗಳ ನಡುವಿನ ಗಡಿ ವಿವಾದವನ್ನು ಅಂತ್ಯಗೊಳಿಸಲು ಮತ್ತು ಒಮ್ಮತ ತರಲು ಕೇಂದ್ರ ಸರ್ಕಾರ ಈ ಹಿಂದೆ ಹಲವು ಪ್ರಯತ್ನ ನಡೆಸಿತ್ತಾದರೂ ಅದು ವಿಫಲವಾಗಿತ್ತು. ಗಡಿ ವಿವಾದಕ್ಕೆ ಸಂಬಂಧಿಸಿ ಕೇಂದ್ರ ರಚಿಸಿದ್ದ ಮೆಹರ್‌ಚಂದ್‌ ಮಹಾಜನ್‌ ಆಯೋಗದ ಶಿಫಾರಸುಗಳನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿತ್ತು. ಆದರೆ, ಮಹಾಜನ್‌ ಆಯೋಗದ ವರದಿಯೇ ಅಂತಿಮ ಎಂದು ಕರ್ನಾಟಕ ಹೋರಾಟ ಮಾಡುತ್ತಲೇ ಬಂದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ಗಡಿ ವಿವಾದ 2004ರಿಂದ ಸುಪ್ರೀಂ ಕೋರ್ಚ್‌ ಅಂಗಳದಲ್ಲಿದೆ. ಬೆಳಗಾವಿ ಸೇರಿ ಕರ್ನಾಟಕದ 865 ಗ್ರಾಮಗಳಿಗಾಗಿ ಮಹಾರಾಷ್ಟ್ರ ಕಾನೂನು ಹೋರಾಟ ನಡೆಸುತ್ತಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ವಿಚಾರಣೆ ಆರಂಭವಾಗುತ್ತಿದೆ. ಈ ವಿಚಾರಣೆಯಿಂದ ಜಸ್ಟೀಸ್ ಬಿವಿ ನಾಗರತ್ನ ಹಿಂದೆ ಸರಿದಿರುವ ಕಾರಣ ಪೀಠಕ್ಕೆ ಮತ್ತೊಬ್ಬ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ಸೂಚಿಸಲಿದೆ.

Follow Us:
Download App:
  • android
  • ios